ಗ್ಯಾರಂಟಿ ಯೋಜನೆ ಜತೆ ಅಭಿವೃದ್ಧಿಗೂ ಆದ್ಯತೆ: ಸಚಿವ ಮಂಕಾಳ ವೈದ್ಯ

KannadaprabhaNewsNetwork |  
Published : Aug 16, 2025, 12:00 AM IST
ಧ್ವಜಾರೋಹಣ ನೆರವೇರಿಸಲಾಯಿತು  | Kannada Prabha

ಸಾರಾಂಶ

ಜಿಲ್ಲೆಯ ಅಭಿವೃದ್ಧಿಗೆ ಸಹ ಪೂರಕವಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ

ಕಾರವಾರ: ಗ್ಯಾರಂಟಿ ಯೋಜನೆಗಳ ಜೊತೆಗೆ ಸರ್ಕಾರ ಅಭಿವೃದ್ಧಿಗೂ ಆದ್ಯತೆ ನೀಡಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ಅವರು ಶುಕ್ರವಾರ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 79ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು.

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಎಲ್ಲ ವರ್ಗದ ಸಮುದಾಯಗಳಿಗೆ ಸಮಾನವಾಗಿ ಯೋಜನೆಗಳನ್ನು ತಲುಪಿಸುವ ಮೂಲಕ ಜನತೆ ನೆಮ್ಮದಿಯಿಂದ ಜೀವನ ಸಾಗಿಸಲು ನೆರವಾಗಿದ್ದು, ಗ್ಯಾರಂಟಿ ಯೋಜನೆಗಳಿಂದ ಪ್ರತಿ ತಾಲೂಕಿನ ಜನತೆಗೆ ಸುಮಾರು ₹400 ಕೋಟಿ ನೆರವು ದೊರೆಯುತಿದ್ದು, ಇದರ ಜೊತೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಹ ಪೂರಕವಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಕಾರ್ಮಿಕರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಕಾರ್ಮಿಕ ಶಾಲೆ ತೆರೆಯುವ ಮೂಲಕ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು ಹಾಗೂ ವಸತಿ ಶಾಲೆಗಳ ನಿರ್ಮಾಣಕ್ಕೆ ಕೂಡ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದು, ಇದರಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದರು.

ಹಲವಾರು ಮಹನೀಯರ ಬಲಿದಾನದ ಫಲವಾಗಿ ಸ್ವಾತಂತ್ರ್ಯ ದೊರೆತಿದೆ ಎಂದ ಸಚಿವರು, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡವರನ್ನು ಹಾಗೂ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಂಕೋಲಾ ತಾಲೂಕಿನ ಬಗ್ಗೆ ಪ್ರಸ್ತಾಪಿಸಿದರು.

ಎಸ್.ಎಸ್.ಎಲ್.ಸಿ ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರವಾಸಿ ತಾಣಗಳ ಸಮಗ್ರ ಮಾಹಿತಿಯುಳ್ಳ ಕಾಫಿ ಟೇಬಲ್ ಬುಕ್ ಬಿಡುಗಡೆ, ಉತ್ತರ ಕನ್ನಡ ಜಿಲ್ಲಾ ಪ್ರವಾಸಿ ತಾಣಗಳ ಕುರಿತು ಅಧಿಕೃತ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಚಾಲನೆ ಮತ್ತು ಪ್ರವಾಸಿ ಮಿತ್ರರಿಗೆ ಸಮವಸ್ತ್ರ ವಿತರಿಸಲಾಯಿತು.

ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ನಗರ ಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ದೀಲಿಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಝುಪಿಶಾನ್ ಹಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ಮತ್ತಿತರರು ಇದ್ದರು.

ಪೊಲೀಸ್, ಅರಣ್ಯ, ಗೃಹ ರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಸೇವಾದಳ, ತಂಡಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?