ಹಿಂದಿನ ಕಾಮಗಾರಿಗಳಿಗೆ ಬಿಲ್ ಬಿಡುಗಡೆ ಕಾರಣ । ಬಲಚವಾಡಿಯಲ್ಲಿ ಚರಂಡಿ ಕಾಮಗಾರಿಗೆ ಶಾಸಕ ಗಣೇಶ್ ಗುದ್ದಲಿಪೂಜೆ
ಸರ್ಕಾರದ ಅನುದಾನ ವಿಳಂಬಕ್ಕೆ ಗ್ಯಾರಂಟಿಗಳು ಕಾರಣವಲ್ಲ.ಹಿಂದಿನ ಸರ್ಕಾರದಲ್ಲಾದ ಕಾಮಗಾರಿಗಳ ಪೂರ್ಣಗೊಳಿಸಲು ಬಿಲ್ ಬಿಡುಗಡೆ ಮಾಡುತ್ತಿರುವುದೇ ಅನುದಾನ ವಿಳಂಬಕ್ಕೆ ಕಾರಣ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪ್ರತಿಪಾದಿಸಿದರು.
ತಾಲೂಕಿನ ಬಲಚವಾಡಿ ಗ್ರಾಮದಲ್ಲಿ ೪೦ ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗುದ್ದಲಿಪೂಜೆ ನೆರವೇರಿಸಿದ ಬಳಿಕ ಸಮಾರಂಭದಲ್ಲಿ ಮಾತನಾಡಿ, ಐದು ಸಾವಿರ ಕೋಟಿ ಕಾಮಗಾರಿಗಳಿಗೆ ಸರ್ಕಾರ ಬಿಲ್ ಪಾವತಿಸುತ್ತಿರುವ ಕಾರಣ ಅಭಿವೃದ್ಧಿಗೆ ಬರುವ ಅನುದಾನ ಸ್ವಲ್ಪ ವಿಳಂಬವಾಗಿದೆ. ಗ್ಯಾರಂಟಿಗಳ ಅನುಷ್ಠಾನದಿಂದಲ್ಲ ಎಂದು ಹೇಳಿದರು.ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೨೫ ಕೋಟಿ ರು.ನಲ್ಲಿ ೬೦ ಹೆಚ್ಚು ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ನಡೆಯಲಿದ್ದು, ಸದ್ಯಕ್ಕೀಗ ೨೫ ಗ್ರಾಮಗಳಲ್ಲಿ ಗುದ್ದಲಿಪೂಜೆ ನಡೆದಿದೆ ಎಂದರು.
ಇನ್ನೂ ಮೂರು ವರ್ಷ ಶಾಸಕನಾಗಿ ಇರುತ್ತೇನೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಗ್ಯಾರಂಟಿಗಳಿಂದಲೂ ಯಾವುದೇ ನಷ್ಟವಿಲ್ಲ. ಇರುವ ಅವಧಿಯಲ್ಲಿ ಕೈಲಾದ ಕೆಲಸ ಮಾಡುತ್ತೇನೆ. ಗ್ರಾಮದ ಅಭಿವೃದ್ಧಿಗೆ ಇಲಾಖಾವಾರು ಕೆಲಸ ಆಗಬೇಕಿದೆ. ಇನ್ನೂ ಹೆಚ್ಚಿನ ಅನುದಾನ ತಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ವಿಪಕ್ಷಗಳ ಮಾತಿಗೆ ತಲೆ ಕೆಡೆಸಿಕೊಳ್ಳಬೇಡಿ ಎಂದರು.