ಹಳ್ಳಿಗರ ಜೀವನಮಟ್ಟ ಸುಧಾರಣೆಗೆ ಖಾತ್ರಿ ಯೋಜನೆ ಪೂರಕ: ಕರೀಂ ಅಸದಿ

KannadaprabhaNewsNetwork |  
Published : Jun 12, 2024, 12:32 AM IST
ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಕರೀಂ ಅಸದಿ ಮಾತನಾಡಿದರು. | Kannada Prabha

ಸಾರಾಂಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಮೂಲತಃ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸಲು ಕೈಗೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಹಳಿಯಾಳ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗರಿಷ್ಠ ಮಟ್ಟದಲ್ಲಿ ಮಾನವ ದಿನಗಳ ಸೃಜನೆ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕರೀಂ ಅಸದಿ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಪಟ್ಟಣದ ಅರಣ್ಯ ಇಲಾಖೆಯ ಸಭಾಭವನದಲ್ಲಿ ಜರುಗಿದ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ಜೋಯಿಡಾ, ದಾಂಡೇಲಿ ಮತ್ತು ಹಳಿಯಾಳ ತಾಲೂಕಿನ ನಡೆದಿರುವ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಮೂಲತಃ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸಲು ಕೈಗೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಜನರಿಗೆ ನಿರಂತರ ಕೆಲಸ ಒದಗಿಸಲು ಅರಣ್ಯ ಇಲಾಖೆಯು ಸಹಕಾರ ನೀಡಬೇಕು. ಗ್ರಾಮ ಪಂಚಾಯಿತಿಗಳೊಂದಿಗೆ ಸಮನ್ವಯ ಸಾಧಿಸಿ ಯೋಜನೆಯಲ್ಲಿ ಪ್ರಗತಿ ಸಾಧಿಸಬೇಕೆಂದರು.

ಈ ಯೋಜನೆಯಡಿ ಇಪ್ಪತ್ತೊಂದು ಪರಿಶೀಲನಾ ಪಟ್ಟಿಯನ್ನು ಕ್ರಮಬದ್ಧವಾಗಿ ನಿರ್ವಹಿಸಿ ಸಾಮಾಜಿಕ ಪರಿಶೋಧನೆಗೆ ಒದಗಿಸಬೇಕು. ವಲಯ ಅರಣ್ಯಾಧಿಕಾರಿಗಳು ಆದಷ್ಟು ಹೆಚ್ಚು ಖಾತ್ರಿ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ತಾಲೂಕು ಪಂಚಾಯಿತಿಯಲ್ಲಿ ನಡೆಯುವ ಕಾರ್ಯಾಗಾರಗಳಿಗೆ ಹಾಜರಾಗಿ, ತಮ್ಮ ಕಾರ್ಯವ್ಯಾಪ್ತಿಯಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದರು.

ಹಳಿಯಾಳ ಡಿಸಿಎಫ್ ಡಾ. ಪ್ರಶಾಂತಕುಮಾರ ಕೆ.ಸಿ. ಮಾತನಾಡಿ, ವಲಯ ಅರಣ್ಯಾಧಿಕಾರಿಗಳು ತಮ್ಮ ಕರ್ತವ್ಯದ ಜತೆಗೆ ನರೇಗಾ ಯೋಜನೆಗೂ ಮಹತ್ವವನ್ನು ನೀಡಿ ಜನರಿಗೆ ಆದಷ್ಟು ಹೆಚ್ಚು ಕೆಲಸ ಒದಗಿಸಲು ಮಾನವ ದಿನಗಳ ಸೃಜನೆಯನ್ನು ಮಾಡಲು ಸಹಕಾರ ನೀಡಬೇಕೆಂದರು.

ಸಭೆಯಲ್ಲಿ ಕಾಳಿ ಹುಲಿ ಸಂರಕ್ಷಣಾ ಪ್ರದೇಶದ ನಿರ್ದೇಶಕ, ಡಿಸಿಎಫ್ ನಿಲೇಶ್ ಶಿಂಧೆ, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಮಂಜುನಾಥ ನಾವಿ, ಹಳಿಯಾಳ- ದಾಂಡೇಲಿ ತಾಲೂಕು ಪಂಚಾಯಿತಿ ಇಒ ಪರಶುರಾಮ ಘಸ್ತೆ, ಜೋಯಿಡಾ ತಾಪಂ ಇಒ ಆನಂದಕುಮಾರ ಬಡಕುಂದ್ರಿ, ಹಳಿಯಾಳ ಮತ್ತು ಜೋಯಿಡಾ ದಾಂಡೇಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳು, ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ನರೇಗಾ ಸಿಬ್ಬಂದಿ ಇದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ