ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಜನ ಸಾಮಾನ್ಯರು ಸ್ವಾವಲಂಬಿ ಬದುಕು ನಡೆಸಲು ಕಾಂಗ್ರೆಸ್ ನೇತೃತ್ವದ ನಮ್ಮ ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಆಸಂದಿ ಟಿ.ಕಲ್ಲೇಶ್ ಹೇಳಿದರು.
ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆ ಅನುಷ್ಠಾನ ಕುರಿತು ಸಂಭಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ಅನುಷ್ಠಾನ ಸಮಿತಿ ಸದಸ್ಯರೊಂದಿಗೆ ಪ್ರಗತಿಯ ವರದಿ ಮತ್ತು ಕುಂದು ಕೊರತೆಗಳನ್ನು ನಿವಾರಿಸುವ ಕ್ರಮಗಳ ಬಗ್ಗೆ ಹಾಗೂ ಅರ್ಹ ಫಲಾನುಭವಿಗಳು ಈ ಯೋಜನೆಗಳಿಂದ ವಂಚಿತರಾಗದಂತೆ ಕ್ರಮ ವಹಿಸುವ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಸಲಹೆ ನೀಡಿದರು. ಸಭೆಯಲ್ಲಿ ಸದಸ್ಯ ಸಪ್ತಕೋಟಿ ಧನಂಜಯ್ ಮಾತನಾಡಿ ಶಕ್ತಿ ಯೋಜನೆ ಮಾಹಿತಿ ನೀಡುವ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರತಿ ಸಭೆಗೂ ಬೇರೆ ಬೇರೆ ವ್ಯಕ್ತಿಗಳನ್ನು ಕಳುಹಿಸುತ್ತಿರುವ ಕಾರಣ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಒಬ್ಬರನ್ನು ನೇಮಕ ಮಾಡಿದರೆ ಹಿಂದಿನ ಸಭೆ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸಾಧ್ಯ ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಮುಂದಿನ ಸಭೆಯೊಳಗೆ ಸರಿಪಡಿಸಿ ಎಂದು ಆಗ್ರಹಿಸಿದರು. ಕಡೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮಹಿಳೆಯರು ಬಸ್ ರೂಟ್ ಬಗ್ಗೆ ಮಾಹಿತಿ ಕೇಳಿದರೆ ಉಡಾಫೆಯಾಗಿ ವರ್ತಿಸುತ್ತಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸದಸ್ಯ ಧನಂಜಯ ಒತ್ತಾಯಿಸಿ ದಾಗ ಸಾರಿಗೆ ಅಧಿಕಾರಿ ಗಿರೀಶ್ ಮುಂದಿನ ಸಭೆ ವೇಳೆಗೆ ಆಗಿರುವ ತಪ್ಪುಗಳನ್ನು ಸರಿಪಡಿಸುತ್ತೇವೆ ಎಂದರು. ಸದಸ್ಯರಾದ ಶೋಭಾ ಶ್ರೀನಿವಾಸ್ ಹಾಗು ಸುಜಾತಾ ಚಂದ್ರಶೇಖರ್ ಪ್ರಶ್ನೆಗೆ ಉತ್ತರಿಸಿದ ಮೆಸ್ಕಾಂ ಅಧಿಕಾರಿಗಳು, ರೈತರು ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿಗಳಿಗೆ ಸೋಲಾರ್ ಅಳವಡಿಸಿ ಬಳಸುವ ಹೆಚ್ಚುವರಿ ವಿದ್ಯುತ್ ನ್ನು ಇಲಾಖೆಯಿಂದಲೇ ಖರೀದಿ ಮಾಡುವ ಕುರಿತು ಸಭೆಗೆ ಮಾಹಿತಿ ನೀಡಿದರು.ಯುವನಿಧಿ ಯೋಜನೆಯಲ್ಲಿ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಫಲಾನುಭವಿಗಳಿದ್ದು ಸರಿಯಾದ ಪ್ರಚಾರವಿಲ್ಲದ ಕಾರಣ ಯೋಜನೆಗೆ ಹೆಚ್ಚಿನ ಪ್ರಚಾರಕ್ಕೆಆದ್ಯತೆ ನೀಡಬೇಕೆಂಬ ಸದಸ್ಯರ ಆಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.ಸಭೆಯಲ್ಲಿ ಕೆಲ ಸದಸ್ಯರು ಗ್ಯಾರಂಟಿ ಯೋಜನೆ ಸಮರ್ಪಕ ನಿರ್ವಹಣೆ ಬಗ್ಗೆ ಕೇಳುವುದನ್ನು ಬಿಟ್ಟು ವಿದ್ಯುತ್ ನಿಲುಗಡೆ, ಅಂಗನವಾಡಿ ದುರಸ್ತಿ, ಸ್ವಚ್ಛತೆ, ಖಾಲಿ ಇರುವ ಅಂಗನವಾಡಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಪ್ರಶ್ನೆ ಗೆ ಅಧಿಕಾರಿ ವರ್ಗದವರು ಇಲ್ಲಿ ಉತ್ತರ ನೀಡಲು ಸಾಧ್ಯವಿಲ್ಲ. ಕಚೇರಿಗೆ ಬನ್ನಿ ಎಂದರು. ಸಭೆಯಲ್ಲಿ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ಇಒ ಸಿ.ಆರ್.ಪ್ರವೀಣ್, ಸದಸ್ಯರಾದ ಗಿರೀಶ್ ನಾಯ್ಕ,ರಮೇಶ್ ದಳವಾಯಿ, ಸಂತೋಷ್, ಮಚ್ಚೇರಿ ಚನ್ನಣ್ಣ, ತೌಸೀಬ್, ಕುಪ್ಪಾಳು ಶೋಭಾ, ಪುಷ್ಪಾ, ಮೂರ್ತಿ, ರೋಹನ್ ಫರ್ನಾಂಡಿಸ್, ಮನು ಹಾಗೂ ಇಲಾಖೆಯ ಅಧಿಕಾರಿಗಳು ಹಾಜರಿದ್ದರು..-- ಬಾಕ್ಸ್ ಸುದ್ದಿಗೆ --
5 ಗ್ಯಾರಂಟಿಗಳ ಅಂಕಿ ಅಂಶಅನುಷ್ಟಾನಗೊಂಡಿರುವ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಆರಂಭದಿಂದ ಇಲ್ಲಿವರೆಗೆ ತಾಲೂಕಿನಲ್ಲಿ ವಿತರಣೆ ಆಗಿರುವ ಸವಲತ್ತುಗಳ ಅಂಕಿ ಅಂಶಗಳನ್ನು ಅಧ್ಯಕ್ಷ ಆಸಂದಿ .ಟಿ ಕಲ್ಲೇಶ್ ಮಾಹಿತಿ ನೀಡಿದರು. ಶಕ್ತಿ ಯೋಜನೆ 1,18,61,90 ಮಹಿಳೆಯರು ನಮ್ಮ ಕಡೂರು ಘಟಕದಿಂದ ಪ್ರಯಾಣ ಮಾಡಿದ್ದು ಇದಕ್ಕೆ ₹45,86,72,828 ಲಕ್ಷ ವೆಚ್ಚವಾಗಿದೆ. ಗೃಹ ಜ್ಯೋತಿ- ಕಡೂರು-ಬೀರೂರುಗಳಿಂದ 78,573 ಫಲಾನುಭವಿಗಳಿದ್ದು ₹2,59,94 ಕೋಟಿ ವೆಚ್ಚವಾಗಿದೆ, ಅನ್ನಭ್ಯಾಗ್ಯ ಯೋಜನೆ- ತಾಲೂಕಿನಲ್ಲಿ ಎಲ್ಲ ಬಗೆಯ 79 ಸಾವಿರ ಕಾರ್ಡ್‍ದಾರರಿದ್ದು 2,62,514 ಫಲಾನುಭವಿಗಳಿದ್ದು ಅಕ್ಕಿ ವಿತರಣೆ ನಡೆದಿದೆ. ಗೃಹ ಲಕ್ಷ್ಮೀ ಯೋಜನೆ ಒಟ್ಟು ಫಲಾನುಭವಿಗಳು 69,905. ಇದುವರೆವಿಗೂ ವೆಚ್ಚ ವಾಗಿರುವ ಹಣ ₹ 245,24,96,000 ಕೋಟಿ, ಯುವ ನಿಧಿ ಯೋಜನೆಯಿಂದ 981 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ₹1,33,2600 ಕೋಟಿ ನೇರವಾಗಿ ಅವರ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂದು ವಿವರಿಸಿದರು.15ಕೆಕೆಡಿಯು1.ಕಡೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಟಿ. ಕಲ್ಲೇಶ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸದಸ್ಯ ಕಾರ್ಯದರ್ಶಿ ಸಿ.ಆರ್.ಪ್ರವೀಣ್ ಇದ್ದರು.