ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಮಾರಿಗಳಾಗುವುದಿಲ್ಲ: ಬಿ.ಕೆ. ಹರಿಪ್ರಸಾದ್‌ ಸಮರ್ಥನೆ

KannadaprabhaNewsNetwork |  
Published : Jul 15, 2025, 01:00 AM IST
ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌  | Kannada Prabha

ಸಾರಾಂಶ

ಆಹಾರ ಭದ್ರತೆ ಕಾಯ್ದೆ ಮೂಲಕ ದೇಶದ 80 ಕೋಟಿ ಮಂದಿಗೆ ಅನ್ನ ನೀಡಲಾಗುತ್ತಿದೆ. ಇದರಿಂದ ಯಾರೂ ಕೂಡ ಸೋಮಾರಿ ಆಗುವುದಿಲ್ಲ. ಜನತೆ ಜೀವನ ನಡೆಸಲು ಅನುಕೂಲವಾಗಲಿ ಎಂದು ಸರ್ಕಾರ ಈ ಪ್ರಯತ್ನ ಮಾಡಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಸ್ವಾತಂತ್ರ್ಯಾ ನಂತರ ಕಾಂಗ್ರೆಸ್‌ ಯಾವ ಕಾರ್ಯಕ್ರಮ ಜಾರಿಗೆ ತಂದರೂ ಕೆಲವು ಶಕ್ತಿಗಳು ವಿರೋಧ ಮಾಡುತ್ತಲೇ ಬಂದಿವೆ. ಬಡತನ ಹಾಗೂ ಹಸಿವು ನಿರ್ಮೂಲನ ಕಾರ್ಯಕ್ರಮ ಹಾಕಿಕೊಂಡಾಗಲೂ ಜನತೆ ಸೋಮಾರಿಗಳಾಗಿರುತ್ತಾರೆ ಎಂದು ಹೇಳುತ್ತಿದ್ದರು. ರಾತ್ರಿ ಯಾರು ಕೂಡ ಹೊಟ್ಟೆಗೆ ಇಲ್ಲದೆ ಮಲಗಬಾರದು ಎಂದು ಮನಮೋಹನ ಸಿಂಗ್‌, ಸೋನಿಯಾ ಗಾಂಧಿ ಅವರು ಆಹಾರ ಸ್ಕೀಮ್‌ ಜಾರಿಗೆ ತಂದರು. ಆಹಾರ ಭದ್ರತೆ ಕಾಯ್ದೆ ಮೂಲಕ ದೇಶದ 80 ಕೋಟಿ ಮಂದಿಗೆ ಅನ್ನ ನೀಡಲಾಗುತ್ತಿದೆ. ಇದರಿಂದ ಯಾರೂ ಕೂಡ ಸೋಮಾರಿ ಆಗುವುದಿಲ್ಲ. ಜನತೆ ಜೀವನ ನಡೆಸಲು ಅನುಕೂಲವಾಗಲಿ, ಬೆಲೆ ಏರಿಕೆ ಹೊಡೆತದಿಂದ ಉಳಿದುಕೊಳ್ಳಲಿ ಎಂದು ಸರ್ಕಾರ ಈ ಪ್ರಯತ್ನ ಮಾಡಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಸಮರ್ಥಿಸಿದ್ದಾರೆ.

ಮಂಗಳೂರಲ್ಲಿ ಭಾನುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವಾಮೀಜಿ ಸಹಿತ ಕೆಲವರ ಆಕ್ಷೇಪ ಕುರಿತು ಪ್ರತಿಕ್ರಿಯಿಸಿದರು.ನರೇಗಾ, ಸರ್ವಶಿಕ್ಷಾ ಅಭಿಯಾನ, ಆರ್‌ಟಿಎ ಎಲ್ಲರಿಗೂ ಶಿಕ್ಷಣ, ಆರ್‌ಟಿಎ ವಿರುದ್ಧ, ಭ್ರಷ್ಟಾಚಾರ ನಿರ್ಮೂಲನೆಗೆ ಆರ್‌ಟಿಐ ತಂದಾಗ ವಿರೋಧ ಮಾಡಿದ್ದರು. ಎಲ್ಲದಕ್ಕೂ ವಿರೋಧ ಮಾಡುವ ಜನರು ಇರುತ್ತಾರೆ. ನಾವು ಅಂತಹ ಕಾರ್ಯಕ್ರಮ ಜಾರಿಗೊಳಿಸದಿದ್ದರೆ ದೇಶದಲ್ಲಿ ಬಡತನ ನಿರ್ಮೂಲನ ಆಗುತ್ತಲೇ ಇರಲಿಲ್ಲ. ಅದರಿಂದಾಗಿ ಈಗ ಒಂದು ಹೊತ್ತು ಊಟ ಮಾಡುವವರು ಮೂರು ಹೊತ್ತು ಚೆನ್ನಾಗಿ ಊಟ ಮಾಡಿ ಬದುಕುತ್ತಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ್‌ ಸಮರ್ಥಿಸಿಕೊಂಡರು.

ನಾಯಕತ್ವ ಬದಲಾವಣೆಗೆ ಅಲ್ಲ:

ಕಾಂಗ್ರೆಸ್‌ ಕರ್ನಾಟಕ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ರಾಜ್ಯಕ್ಕೆ ಆಗಮಿಸಿ, ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆಯೇ ವಿನಃ ನಾಯಕತ್ವ ಬದಲಾವಣೆಗೆ ಅಲ್ಲ. ಶಾಸಕರ ಅನುದಾನ ಹಂಚಿಕೆ ವಿಳಂಬ ಸಮಸ್ಯೆ ಬಗ್ಗೆ ಪರಿಹಾರ ಕೈಗೊಳ್ಳಲು ಸೂಚಿಸಿದ್ದಾರೆ. ಇನ್ನು ಸಚಿವರಲ್ಲೂ ಮಾತನಾಡಿ, ಅವರ ಸಾಧನೆಯ ವರದಿ ಪರಾಮರ್ಶಿಸಿದರೆ ತುಂಬ ಒಳ್ಳೆಯದು ಎಂದರು.

ಬಡವರ ಬಗ್ಗೆ ಮೋದಿ ಮೌನ:

ಕೇಂದ್ರ ಆಹಾರ ಯೋಜನೆ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ರಾಜ್ಯಕ್ಕೆ ನೀಡಿದ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್‌, ಇವರಾಗಲೀ, ಪ್ರಧಾನಿ ನರೇಂದ್ರ ಮೋದಿಯಾಗಲೀ ಯಾವಾಗ ಬಡವರ ಪರವಾಗಿ ಮಾತನಾಡಿದ್ದಾರೆ? ಮನ್‌ಕಿ ಬಾತ್‌ನಲ್ಲಿ ಮೋದಿ 11 ವರ್ಷದಲ್ಲಿ ಎಷ್ಟು ಬಾರಿ ಬಡವರ ಬಗ್ಗೆ ಮಾತನಾಡಿದ್ದಾರೆ? ರೈತರ, ಮಹಿಳೆಯರ, ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮೋದಿ ಎಂದಾದರೂ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.

ಮಂಗ್ಳೂರಲ್ಲಿ ಸರ್ವಧರ್ಮ ಸಭೆ ನಡೆಯಲಿ

ಮಂಗಳೂರಲ್ಲಿ ಸೌಹಾರ್ದತೆ ವಾತಾವರಣ ನೆಲೆಗೊಳಿಸುವ ಸಲುವಾಗಿ ನಮ್ಮ ತಂಡ ಸರ್ಕಾರಕ್ಕೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಸರ್ವಧರ್ಮ ಗುರುಗಳ ಸಭೆ ನಡೆಯಬೇಕು. ಈ ಮೂಲಕ ಸಮಾಜಕ್ಕೆ ಶಾಂತಿ, ಸೌಹಾರ್ದತೆಯ ಸಂದೇಶ ಸಾರಬೇಕು. ಶಾಂತಿ ಸಮಿತಿ ಸಭೆ, ರಾಜಕಾರಣಿಗಳ ಸಭೆ ನಡೆಸಿದರೆ ಪ್ರಯೋಜನವಾಗದು. ಇಲ್ಲಿ ಶಾಂತಿ, ಸೌಹಾರ್ದತೆ ನೆಲೆಸದಿದ್ದರೆ ಹಳೆ ಕೇರಳದಂತೆ ದ.ಕ. ಹುಚ್ಚಾಸ್ಪತ್ರೆ ಆಗುವುದರಲ್ಲಿ ಸಂಶಯ ಇಲ್ಲ ಎಂದು ಬಿ.ಕೆ.ಹರಿಪ್ರಸಾದ್‌ ಹೇಳಿದರು.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ