ವಡ್ಡರಹಟ್ಟಿ ಗ್ರಾಮದಲ್ಲಿ ಮನೆ ಮನೆ ಭೇಟಿ ಮೂಲಕ ನರೇಗಾ ಕಾಮಗಾರಿಗಳ ಬೇಡಿಕೆ ಸ್ವೀಕಾರ
ಕನ್ನಡಪ್ರಭ ವಾರ್ತೆ ಕೊಪ್ಪಳ
ಇರಕಲ್ಲಗಡಾ ಗ್ರಾಮ ಪಂಚಾಯಿತಿಯ ವಡ್ಡರಹಟ್ಟಿ ಗ್ರಾಮದ ಶ್ರೀ ದ್ಯಾಮಾಂಬಿಕಾ ದೇವಸ್ಥಾನದಲ್ಲಿ ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನದ ಜಾಗೃತಿ ಕಾರ್ಯಕ್ರಮ ಜರುಗಿತು.ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಮಾತನಾಡಿ, ನರೇಗಾ ಯೋಜನೆಯ ಆಯವ್ಯಯ ತಯಾರಿಕೆಯ ಕುರಿತು ಅ. ೦೩ರಿಂದ ನ.೩೦ ರವರೆಗೆ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನ, ಯೋಜನೆಯ ಜಾಗೃತಿ, ಕಾಮಗಾರಿಗಳ ಬೇಡಿಕೆ ಸ್ವೀಕಾರ ಹಮ್ಮಿಕೊಳ್ಳಲಾಗಿದೆ.
ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ರೈತರ, ಕೂಲಿಕಾರರ, ಮಹಿಳೆಯರ ಸಬಲತೆಗಾಗಿ ಜಾರಿಯಾದ ಯೋಜನೆಯಾಗಿದ್ದು, ೧೦೦ ದಿನಗಳ ಕೆಲಸ ನಿರ್ವಹಿಸಬಹುದಾಗಿದೆ. ನರೇಗಾ ಯೋಜನೆಯ ಮಾಹಿತಿ, ಕಾಮಗಾರಿಗಳ ಕುರಿತು ಮನೆ ಮನೆ ಭೇಟಿ ಮೂಲಕ ಕುಟುಂಬಗಳಿಗೆ ಮಾಹಿತಿ ನೀಡಿ ಯೋಜನೆಯಡಿ ಗ್ರಾಮ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯಿಂದ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಿಸಲು ಅವಕಾಶ ಇರುತ್ತದೆ. ಮೊದಲು ಯಾವ ಕಾಮಗಾರಿಯನ್ನು ಅನುಷ್ಠಾನಿಸುವುದೆಂದು ಆಯ್ಕೆ ಮಾಡಿ, ನಮೂನೆಯಲ್ಲಿ ಅರ್ಜಿ ಸಲ್ಲಿಸಿರಿ. ಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎಂದರು.ಸ್ವಸಹಾಯ ಸಂಘದ ಮಹಿಳೆಯರಿಗೆ ಮಾಹಿತಿ ನೀಡಿ ಕಾಮಗಾರಿ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಇದರಿಂದ ನರೇಗಾ ಯೋಜನೆಯ ಕಾಮಗಾರಿಯಿಂದ ಕುಟುಂಬಕ್ಕೆ ಒಂದು ಆರ್ಥಿಕವಾಗಿ ಬೆನ್ನೆಲುಬಾಗಿ ನಿಲ್ಲಲು ಸಹಕಾರಿಯಾಗುತ್ತದೆ ಎಂದರು. ವೈಯಕ್ತಿಕ ಕಾಮಗಾರಿಗಳಾದ ಜಾನುವಾರ ಶೆಡ್, ಮೆಕೆ ಶೆಡ್, ಕೃಷಿ ಹೊಂಡ, ಕೋಳಿ ಶೆಡ್, ಹಂದಿ ಶೆಡ್, ಬದು ನಿರ್ಮಾಣ ಕಾಮಗಾರಿಗೆ ಅವಕಾಶ ಇರುತ್ತದೆ ಎಂದು ಮಾಹಿತಿ ನೀಡಿದರು.
ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಗ್ರಾಮದಲ್ಲಿ ಮನೆ ಮನೆ ಭೇಟಿ ಮೂಲಕ ಯೋಜನೆಯ ಜಾಗೃತಿ ಮೂಡಿಸಿ ಯೋಜನೆಯಡಿ ಇರುವ ಅವಕಾಶಗಳ ಕುರಿತು ಮನವರಿಕೆ ಮಾಡಿ, ಕಾಮಗಾರಿಗಳ ಬೇಡಿಕೆ ಪಡೆದ ಮೇಲೆ ಪ್ರತಿ ಗ್ರಾಮದಲ್ಲಿ ಜರುಗುವ ವಾರ್ಡ್‌ಸಭೆ, ಗ್ರಾಮಸಭೆಯಲ್ಲಿ ಅನುಮೋದನೆಯೊಂದಿಗೆ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯಲಾಗುತ್ತದೆಂದರು.ಇದೇ ವೇಳೆ ಯೋಜನೆಯ ಕರಪತ್ರ ವಿತರಣೆ ಮಾಡಲಾಯಿತು.
ಮನೆ ಮನೆ ಭೇಟಿ ಸಂದರ್ಭದಲ್ಲಿ ರೈತರು, ಮಹಿಳೆಯರಿಂದ ದನದ ಶೆಡ್, ಕುರಿ ಶೆಡ್, ಕೊಳಿ ಶೆಡ್, ಬದು ನರ್ಮಾ ಣ, ತೆಂಗು ಸೇರಿದಂತೆ ಒಟ್ಟು ೩೦ ವೈಯಕ್ತಿಕ ಕಾಮಗಾರಿಗಳ ಬೇಡಿಕೆಯನ್ನು ಸ್ವೀಕರಿಸಲಾಯಿತು.ಕಾರ್ಯಕ್ರಮದಲ್ಲಿ ಡಿಇಒ ಮೌನೇಶ, ಗ್ರಾಮ ಕಾಯಕ ಮಿತ್ರ ಶ್ರೀದೇವಿ ಹಟ್ಟಿ ಇತರರಿದ್ದರು.