
ಕನ್ನಡಪ್ರಭ ವಾರ್ತೆ, ತುಮಕೂರು
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹೆಬ್ಬೂರು ಹೋಬಳಿ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ರಾಗಿ ಮುದ್ದನಹಳ್ಳಮ್ಮ ದೇವಸ್ಥಾನ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ಎರಡು ಸಾವಿರ ರು. ಹಣಕ್ಕೆ ಮರುಳಾಗಬೇಡಿ. ಐದು ವರ್ಷರ ಒಂದು ಅವಕಾಶ ಕೊಡಿ. ಈ ಗ್ಯಾರಂಟಿಗಳು ನಿಮ್ಮ ಬದುಕಿಗೆ ಶಾಶ್ವತ ಪರಿಹಾರ ಅಲ್ಲ. ಕಾಂಗ್ರೆಸ್ ಸರ್ಕಾರದ ಮೋಸಕ್ಕೆ ಬಲಿಯಾಗಬೇಡಿ ಎಂದು ಕುಮಾರಸ್ವಾಮಿ ನಾಗರಿಕರಲ್ಲಿ ಮನವಿ ಮಾಡಿದರು.ಇಡೀ ರಾಜ್ಯದಲ್ಲಿ ಈ ಸರ್ಕಾರ ಮದ್ಯದ ಹೊಳೆ ಹರಿಸುತ್ತಿದೆ. ಹಳ್ಳಿ ಹಳ್ಳಿಯಲ್ಲಿ ಕಿರಾಣಿ ಅಂಗಡಿಗಳಲ್ಲಿ ಕೂಡ ಮದ್ಯ ದೊರೆಯುತ್ತಿದೆ. ಸಿ.ಎಲ್. 7 ಮದ್ಯ ಪರವಾನಗಿಯನ್ನು ದೊಡ್ಡ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಇಂಥ ಒಂದು ಲೈಸನ್ಸ್ ಕೊಡುವುದಕ್ಕೆ ಇತ್ತೀಚೆಗೆ ಅಬಕಾರಿ ಅಧಿಕಾರಿಗಳು 2.50 ಕೋಟಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಆರೋಪಿಸಿದರು.ನಾನು ಮೂರು ಬಾರಿ ಸಾವಿನ ಹತ್ತಿರಕ್ಕೆ ಹೋಗಿ ಬಂದಿದ್ದೇನೆ. ದೇವರ ಆಶೀರ್ವಾದ ಮತ್ತು ತಾಯಿ ಮಾರಮ್ಮ ಮತ್ತು ಈ ನಾಡಿನ ನಿಮ್ಮಂತಹ ಜನರ ಆಶೀರ್ವಾದದಿಂದ ಇನ್ನೂ ಬದುಕಿದ್ದೇನೆ ಎಂದು ಭಾವಿಸಿದ್ದೇನೆ. ನಮಗೆ ಒಂದು ಅವಕಾಶ ಕೊಡಿ. ಐದು ವರ್ಷಗಳ ಉತ್ತಮ ಸರ್ಕಾರ ಕೊಡುತ್ತೇವೆ. ಜೆಡಿಎಸ್, ಬಿಜೆಪಿ ಸರ್ಕಾರ ಅಲ್ಲ, ಆರೂವರೆ ಕೋಟಿ ಕನ್ನಡಿಗರ ಸರ್ಕಾರ ತರುತ್ತೇವೆ. ಅದಕ್ಕೆ ಅವಕಾಶ ಕೊಡಿ ಎಂದು ಅವರು ವಿನಂತಿಸಿದರು.
ಶಾಸಕ ಬಿ ಸುರೇಶ್ ಗೌಡರು ಮಾತನಾಡಿ ಕುಮಾರಸ್ವಾಮಿ ಅವರು ನನ್ನ ಆತ್ಮದಲ್ಲಿದ್ದಾರೆ. ರಾಜಕಾರಣ ಬಂದಾಗ ವಿರೋಧ ಮಾಡಿದ್ದು ಬಿಟ್ಟರೆ ವೈಯಕ್ತಿಕವಾಗಿ ಅವರ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಅಪಾರವಾದ ಪ್ರೀತಿ ಉಳ್ಳಂತಹ ವ್ಯಕ್ತಿ ನಾನು ಎಂದು ತಿಳಿಸಿದರು.
ಜನ್ಮಜನ್ಮಾಂತರಕ್ಕೂ ಕೂಡ ದೇವೇಗೌಡರ ಕುಟುಂಬದ ಜತೆ ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಅವರ ಕುಟುಂಬಕ್ಕೆ ಅಭಾರಿಯಾಗಿರುತ್ತೇನೆ ಎಂದು ತಿಳಿಸಿದರು.ಈ ವೇಳೆ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಶಾಸಕ ನಿಂಗಪ್ಪ, ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಮುಖಂಡರಾದ ನಾಗರಾಜು, ಉಗ್ರೇಶ, ರವಿಕುಮಾರ್, ಜಗದೀಶ್, ಡಾ. ರವಿ, ರಾಗಿ ಮುದ್ದನಹಳ್ಳಿ, ಮುಖಂಡ ನಾಗರಾಜು ಹಾಗೂ ಸಮಾಂತರ ಕ್ಷೇತ್ರದ ಎನ್‌ಡಿಎ ಒಕ್ಕೂಟದ ಮುಖಂಡರು ಉಪಸ್ಥಿತರಿದ್ದರು.