ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಶನಿವಾರ ಮಧ್ಯಾಹ್ನ 12 ಗಂಟೆಗೆ ಗುಡ್ಡೆಹೊಸೂರು ಸಮುದಾಯ ಭವನದಲ್ಲಿ ಕುಶಾಲನಗರ ತಾಲೂಕಿನ ಐವರಿಗೆ ನೇಗಿಲಯೋಗಿ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.ತೋಟಗಾರಿಕೆ ವಿಭಾಗದಿಂದ ಅರಿಶಿನಗುಪ್ಪೆ ಗ್ರಾಮದ ಶುಂಠಿ ಹಾಗೂ ಬೆಣ್ಣೆಹಣ್ಣು ಬೆಳೆಗಾರ ಎಂ.ಟಿ. ಬೇಬಿ, ಹೈನುಗಾರಿಕೆ ವಿಭಾಗದಿಂದ ಗುಡ್ಡೆಹೊಸೂರು ಗ್ರಾಮದ ಸಾಗರ್, ಸಮಗ್ರ ಕೃಷಿಕ ವಿಭಾಗದಿಂದ ನಾಕೂರು ಶಿರಂಗಾಲ ಗ್ರಾಮದ ಕೃಷಿಕ ಪಿ.ಎಂ. ಬಿಜು, ಮಹಿಳಾ ಕೃಷಿಕರು ವಿಭಾಗದಿಂದ ಗುಡ್ಡೆಹೊಸೂರಿನ ಕೊರವಂಡ ವಸಂತಿ ಪೊನ್ನಪ್ಪ, ಯುವ ಕೃಷಿಕ ವಿಭಾಗದಿಂದ ಅತ್ತೂರು ಗ್ರಾಮದ ಸಜಿತ್ ಅವರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಬಿಬಾಣೆಯ ಕಾಫಿ ಬೆಳೆಗಾರ ಟಿ.ಕೆ.ಸಾಯಿಕುಮಾರ್ ಅವರು ತಮ್ಮ ತಂದೆ ದಿ. ಟಿ.ಕೆ. ಕುಮಾರನ್ ಹಾಗೂ ತಾಯಿ ಕೆ.ಎನ್. ಭಾರತಿ ನೆನಪಿಗಾಗಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಲ್ಲಿ ಅತ್ಯುತ್ತಮ ಕೃಷಿಕರಿಗಾಗಿ ನೇಗಿಲಯೋಗಿ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದರು.ಕಾರ್ಯಕ್ರಮವನ್ನು ಸರ್ಕಾರದ ಗ್ಯಾರಂಟಿ ಸಮಿತಿಯ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಉದ್ಘಾಟಿಸಲಿದ್ದಾರೆ. ಕುಶಾಲನಗರ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್, ಕಾಫಿ ಬೆಳೆಗಾರ ಹಾಗೂ ದತ್ತಿ ದಾನಿ ಟಿ.ಕೆ.ಸಾಯಿ ಕುಮಾರ್, ಸುಂಟಿಕೊಪ್ಪ ಗ್ರಾಪಂ ಅಧ್ಯಕ್ಷ ಸುನಿಲ್ ಕುಮಾರ್, ಪಿಡಿಒ ವಿ.ಜಿ. ಲೋಕೇಶ್, ಗುಡ್ಡೆಹೊಸೂರು ಗ್ರಾಪಂ ಸದಸ್ಯ ನಿತ್ಯಾನಂದ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 10.30ರಿಂದ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ನಡೆಯಲಿರುವುದಾಗಿ ಅವರು ಹೇಳಿದ್ದಾರೆ.