ಕುಕನೂರು: ಪಟ್ಟಣದ ಐತಿಹಾಸಿಕ ಹಾಗೂ ಆರಾಧ್ಯ ದೈವ ಶ್ರೀಗುದ್ನೇಶ್ವರ ಪಂಚಕಳಸ ಮಹಾರಥೋತ್ಸವ ಮಂಗಳವಾರ ಸಂಜೆ ಅದ್ಧೂರಿಯಾಗಿ ಭಕ್ತ ಸಾಗರ ಮಧ್ಯೆ ಜರುಗಿತು. ಮಹಾರಥೋತ್ಸವಕ್ಕೆ ಭಕ್ತರು ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ರಥೋತ್ಸವ ಕಣ್ತುಂಬಿಕೊಂಡರು.
ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಶ್ರೀಗುದ್ನೇಶ್ವರ ಸ್ವಾಮೀಜಿಗೆ ವಿಶೇಷ ಪೂಜೆ ಜರುಗಿದವು. ಜನರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಹರಕೆ ತೀರಿಸಿ ನೈವೇದ್ಯ ಸಮರ್ಪಿಸಿದರು. ಕೆಲವು ಗ್ರಾಮದಿಂದ ಭಕ್ತರು ರಥೋತ್ಸವಕ್ಕೆ ಸಂಪ್ರದಾಯದಂತೆ ಬುತ್ತಿ ಮಾಡಿಕೊಂಡು ಬಂದು ದೇವಸ್ಥಾನಕ್ಕೆ ಸಮರ್ಪಿಸಿದರು.ಬಿನ್ನಾಳ ಗ್ರಾಮದಿಂದ ನಂದಿಕೋಲು ಆಗಮಿಸಿದ ನಂತರ ರಥೋತ್ಸವ ಆರಂಭವಾಯಿತು. ಕಕ್ಕಿಹಳ್ಳಿ ಹಾಗೂ ಗುದ್ನೇಶ್ವರ ಮಠದ ಅಡ್ಡಪಲ್ಲಕ್ಕಿ, ನಂದಿಕೋಲುಗಳು ರಥೋತ್ಸವ ಪ್ರದಕ್ಷಿಣೆ ಹಾಕಿದವು. ನಂತರ ರಥೋತ್ಸವ ಆರಂಭವಾಯಿತು.
ಶ್ರೀ ಗುದ್ನೇಶ್ವರ ರಥ ನಿಲ್ಲುವ ಸ್ಥಳದಿಂದ ಪಾದಗಟ್ಟೆ ಸುಮಾರು ೧ ಕಿಮಿ ದೂರವಿದೆ. ಪಾದಗಟ್ಟೆ ರಥೋತ್ಸವ ಮೂಲ ಸ್ಥಾನಕ್ಕೆ ಮರಳುವುದು ಸಹ ೧ ಕಿಮಿ ಬರೋಬ್ಬರಿ ಗುದ್ನೇಶ್ವರ ರಥೋತ್ಸವ ೨ ಕಿಮೀ ದೂರವನ್ನು ಕ್ರಮಿಸಿ ಸಂಪನ್ನವಾಯಿತು. ಸಂಜೆ ೪.೪೦ಕ್ಕೆ ಆರಂಭವಾದ ರಥೋತ್ಸವ ಸಂಜೆ ೬.3೦ಕ್ಕೆ ಮೂಲ ಸ್ಥಾನ ತಲುಪಿತು. ಶ್ರೀ ಗುದ್ನೇಶ್ವರ ಮಹಾರಾಜಕೀ ಜೈ ಎಂಬ ಘೋಷ ವಾಕ್ಯ ರಥೋತ್ಸವದುದ್ದಕ್ಕೂ ಮೊಳಗಿದವು.ಪಂಜಿನ ಮೆರವಣಿಗೆ : ರಥೋತ್ಸವದುದ್ದಕ್ಕೂ ಪಂಜುಗಳನ್ನು ಹಿಡಿದು ಭಕ್ತರು ಸಾಗಿದರು. ರಥದ ಮುಂದೆ ಪಂಜುಗಳನ್ನು ಹಿಡಿದು ಸುಮಾರು ನೂರಾರು ಭಕ್ತರು ಸಾಲಾಗಿ ಸಾಗುತ್ತಿರುವುದು ರಥೋತ್ಸವಕ್ಕೆ ಮೆರಗು ನೀಡಿತು. ಪಕ್ಕದ ಕಕ್ಕಿಹಳ್ಳಿ ಗ್ರಾಮದ ಅಳಿಯ ಚನ್ನಬಸವೇಶ್ವರ ಮೂರ್ತಿ ಹಾಗು ಅಡ್ಡಪಲ್ಲಕ್ಕಿ, ಗುದ್ನೇಶ್ವರ ಸ್ವಾಮಿಯ ಅಡ್ಡಪಲ್ಲಕ್ಕಿ ಹಾಗೂ ಬಿನ್ನಾಳ ಗ್ರಾಮದಿಂದ ಆಗಮಿಸಿದ ನಂದಿಕೋಲು ರಥೋತ್ಸವದ ಸೊಬಗು ನೀಡಿದವು.
ಗುದ್ನೇಶ್ವರ ಮಠದ ಶ್ರೀ ಪ್ರಭುಲಿಂಗ ದೇವರು, ಬೆದವಟ್ಟಿ ಹಿರೇಮಠದ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರು ಇದ್ದರು.ಶಾಸಕ ಬಸವರಾಜ ರಾಯರಡ್ಡಿ, ತಹಸೀಲ್ದಾರ್ ಎಚ್. ಪ್ರಾಣೇಶ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ರಷೀದಸಾಬ್ ಹಣಜಗೇರಿ, ರುದ್ರಯ್ಯ ಇನಾಮದಾರ, ಕಂದಾಯ ನಿರೀಕ್ಷಕ ರಂಗನಾಥ, ಸಿದ್ಲಿಂಗಯ್ಯ ಬಂಡಿ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ, ಗುದ್ನೇಪನಮಠದ ಸೇವಾ ಸಮಿತಿಯ ಕಾರ್ಯಕರ್ತರು, ಅಪಾರ ಭಕ್ತ ಸಮೂಹ ನೆರದಿತ್ತು.
ಲಕ್ಷಕ್ಕೂ ಅಧಿಕ ಜನ: ಶ್ರೀ ಗುದ್ನೇಶ್ವರ ರಥೋತ್ಸವಕ್ಕೆ ನಿರೀಕ್ಷೆ ಮೀರಿ ಜನತೆ ಆಗಮಿಸಿದ್ದು, ಎಲ್ಲಿ ನೋಡಿದರೂ ಜನ. ಜಾತ್ರೆಗೆ ನಿರೀಕ್ಷೆ ಮೀರಿ ಆಗಮಿಸಿದ ಭಕ್ತ ಸಮೂಹ ಪಂಚಕಳಸ ರಥೋತ್ಸವಕ್ಕೆ ಸಾಕ್ಷಿಯಾಯಿತು. ವಿಶೇಷವಾಗಿ ಕಬ್ಬು ಮಾರಾಟ ಜೋರಿತ್ತು. ಅಲ್ಲದೆ ಸಂಪ್ರದಾಯದಂತೆ ನವ ಜೋಡಿಗಳು ಪಂಚಕಳಸ ರಥೋತ್ಸವ ಕಣ್ತುಂಬಿಕೊಂಡರು.