ಅತಿಥಿ ಉಪನ್ಯಾಸಕರ ಪ್ರತಿಭಟನೆ: ಸಂಸದ ಪ್ರತಾಪ್‌ ಸಿಂಹ ಬೆಂಬಲ

KannadaprabhaNewsNetwork |  
Published : Mar 06, 2024, 02:19 AM IST
ಚಿತ್ರ : 5ಎಂಡಿಕೆ7 :  ಅತಿಥಿ ಉಪನ್ಯಾಸಕರ ಪ್ರತಿಭಟನೆ ನಡೆಸುತ್ತಿದ್ಗ ಸ್ಥಳಕ್ಕೆ ಸಂಸದ ಪ್ರತಾಪ ಸಿಂಹ ಭೇಟಿ  | Kannada Prabha

ಸಾರಾಂಶ

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರ ಕಾಲೇಜಿನ ಪ್ರತಿಭಟನಾ ಸ್ಥಳಕ್ಕೆ ಮೈಸೂರು-ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪ್ರತಿಭಟನಾನಿರತರಿಗೆ ಬೆಂಬಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವೇತನ ಪಾವತಿಗಾಗಿ ಆಗ್ರಹಿಸಿ ಕಳೆದ ಐದು ದಿನಗಳಿಂದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರ ಕಾಲೇಜಿನ ಪ್ರತಿಭಟನಾ ಸ್ಥಳಕ್ಕೆ ಮೈಸೂರು-ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದರು. ಈ ಸಂದರ್ಭ ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಿದ ಪ್ರತಾಪ ಸಿಂಹ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಕುಲಸಚಿವರ ಬಳಿ ಸಮಾಲೋಚನೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಮಾತ್ರವಲ್ಲದೆ, ಸಮಸ್ಯೆ ಇಲ್ಲಿಯೇ ಪರಿಹಾರವಾಗದಿದ್ದರೆ ರಾಜ್ಯಪಾಲರ ಬಳಿ ಮಾತನಾಡುವೆ. ಯಾವುದಕ್ಕೂ ಪರಿಹಾರ ದೊರೆಯದೇ ಹೋದರೆ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಭವನದ ಮುಂದೆ ಅತಿಥಿ ಉಪನ್ಯಾಸಕರ ಜೊತೆಯಲ್ಲಿ ತಾನು ಸಹ ಧರಣಿಯಲ್ಲಿ ಭಾಗವಹಿಸುವುದಾಗಿ ನುಡಿದರು. ಈವರೆಗೆ ತಾನು ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳ ಹಲವು ಹಗರಣಗಳ ವಿರುದ್ಧ ಹೋರಾಟವನ್ನು ಕೈಗೊಂಡಿದ್ದೇನೆ. ಇದೀಗ ಕೊಡಗಿನ ಅತಿಥಿ ಉಪನ್ಯಾಸಕರ ಯೋಗಕ್ಷೇಮ ಕಾಪಾಡುವುದು ತನ್ನ ಜವಾಬ್ದಾರಿ ಎಂದು ತಿಳಿಸಿದರು. ಅತಿಥಿ ಉಪನ್ಯಾಸಕರ ಧರಣಿ ಬೆಂಬಲಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್ಯ ಅವರು ಕಾಲೇಜಿಗೆ ಭೇಟಿ ನೀಡಿ ಅತಿಥಿ ಉಪನ್ಯಾಸಕರಿಗೆ ಬೆಂಬಲ ಸೂಚಿಸಿದರು. ವೇತನ ದೊರಕುವವರೆಗೂ ಈ ಹೋರಾಟವು ಮುಂದುವರಿಯುತ್ತದೆ ಎಂಬ ಒಮ್ಮತದ ತೀರ್ಮಾನವನ್ನು ಅತಿಥಿ ಉಪನ್ಯಾಸಕರು ಮುಂದಿಟ್ಟರು.ಸೋಮವಾರ ವಿನೂತನ ಪ್ರತಿಭಟನೆ: ಬಾಕಿ ವೇತನ ನೀಡುವಂತೆ ಆಗ್ರಹಿಸಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ಸೋಮವಾರ ಮಾಸ್ಕ್ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ವಿವಿಧ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ.

ಮಂಗಳೂರು ವಿಶ್ವ ವಿದ್ಯಾನಿಲಯದಡಿ ಕೊಡಗಿನಲ್ಲಿ ಸುಮಾರು 45ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಕಳೆದ ಐದು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಬೇಸತ್ತ ಅತಿಥಿ ಉಪನ್ಯಾಸಕರು ಕಳೆದ ನಾಲ್ಕು ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಸೋಮವಾರ ಕಾಲೇಜಿನ ಮಾಜಿ ಪ್ರಾಂಶುಪಾಲರು, ಮಾಜಿ ಸಿಂಡಿಕೇಟ್ ಸದಸ್ಯೆ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ ಭೇಟಿ ನೀಡಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿ ನಂತರ ಪ್ರಾಂಶುಪಾಲರೊಂದಿಗೆ ಚರ್ಚೆ ನಡೆಸಿದರು.

ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ವಕೀಲ ಪವನ್ ಪೆಮ್ಮಯ್ಯ, ಪದಾಧಿಕಾರಿಗಳಾದ ಶರತ್, ಸಮೀರ್ ಮತ್ತು ರಂಜನ್ ಅವರು ಧರಣಿಯಲ್ಲಿ ಕುಳಿತು ಬೆಂಬಲ ಸೂಚಿಸಿದರು.ಕೊಡಗು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮತ್ತು ಪಕ್ಷದ ಧುರೀಣ ಟಿ. ಪಿ ರಮೇಶ್, ಮುನೀರ್ ಅಹಮದ್, ಕೊಲ್ಯದ ಗಿರೀಶ್ ಆಗಮಿಸಿ ಸಮಸ್ಯೆಗಳ ಬಗ್ಗೆ ತಿಳಿದು ಶಾಸಕರು ಮತ್ತು ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಎಲ್ಲಾ ಬಾಕಿ ವೇತನ ಬರುವವರೆಗೆ ಧರಣಿ ಮುಂದುವರಿಯುತ್ತದೆ ಎಂದು ಅತಿಥಿ ಉಪನ್ಯಾಸಕರು ಭೇಟಿ ನೀಡಿದವರೊಂದಿಗೆ ಸ್ಪಷ್ಟ ಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಲೆ ಏರಿಸಿ ಜನರ ಜೇಬಿಗೆ ಕೇಂದ್ರ ಕನ್ನ: ಕೈ ಟೀಕೆ
ನಾನು ಸಾಲರಾಮಯ್ಯ ಅಲ್ಲ : ಸಿದ್ದರಾಮಯ್ಯ ತಿರುಗೇಟು