ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಇಲ್ಲಿನ ಎಸ್‌ಆರ್‌ಎಂಪಿಪಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಸೇವಾ ಕಾಯಂಮಾತಿಗಾಗಿ ಆಗ್ರಹಿಸಿ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಹೋರಾಟ ಮಾಡಿ ಕಾಲೇಜಿನ ಪ್ರಾಚಾರ್ಯರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಶಿವಾನಂದಚಾರ್, ರಾಜ್ಯದ 430 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳು ಇಂದು ಬಹುತೇಕ ಅತಿಥಿ ಉಪನ್ಯಾಸಕರ ಕರ್ತವ್ಯವನ್ನು ಅವಲಂಭಿಸಿದ್ದು, ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬದುಕು ಆತಂತ್ರವಾಗಿದೆ. ಅತಿಥಿ ಎಂಬ ಅನಿಷ್ಟ ಪದ್ಧತಿ ಮುಕ್ತಾಯ ಮಾಡಿ ಸೇವೆ ಕಾಯಂಮಾತಿ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಾಂತ ಅನಿರ್ದಿಷ್ಟಾವಧಿ ಹೋರಾಟವನ್ನು ಆರಂಭಿಸಲಾಗಿದೆ. ಅದರ ಭಾಗವಾಗಿರುವ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಹೋರಾಟವನ್ನು ಆರಂಭಿಸಲಾಗಿದೆ. ಒಂದು ವೇಳೆ ಅತಿಥಿ ಉಪನ್ಯಾಸಕರ ಸೇವೆ ಕಾಯಂಮಾತಿ ನೀಡದಿದ್ದರೆ ಮುಂದೆ ತೀವ್ರ ಸ್ವರೂಪದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಅತಿಥಿ ಉಪನ್ಯಾಸಕರ ನಿಯೋಗವು ಕಳೆದ ಬೆಳಗಾವಿ ಅಧಿವೇಶನದ ಸಮಯದಲ್ಲಿ ಭೇಟಿಯಾಗಿ, ನಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಅಂದು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗುವುದು ಎಂದು ಹೇಳಿದ್ದರು. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಅದರಂತೆ ಈಗ ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದಿದ್ದು, ಅತಿಥಿ ಉಪನ್ಯಾಸಕರ ಸೇವಾಭದ್ರತೆ ಒದಗಿಸಿಕೊಟ್ಟು ನುಡಿದಂತೆ ನಡೆಯಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತಾಗಿ ವಿಧಾನ ಪರಿಷತ್ತಿನ ಎಲ್ಲ ಸದಸ್ಯರು, ಸಚಿವರು, ಶಾಸಕರು ಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಚರ್ಚಿಸಿ ಅತಿಥಿ ಉಪನ್ಯಾಸಕರಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸೇವಾ ಕಾಯಂಮಾತಿ ನೀಡಬೇಕೆಂದು ಸರ್ಕರಕ್ಕೆ ಮನವಿ ಮೂಲಕ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಎಂ. ನಾಗವೇಣಿ, ಜಿ. ಹಾಲೇಶ್, ಜಿ. ಗಿರಿಯಪ್ಪ, ಕೆ. ಜಯಪ್ರಕಾಶ್, ಜಿ. ಮಹೇಶ್ ಸೇರಿದಂತೆ ಎಲ್ಲ ಅತಿಥಿ ಉಪನ್ಯಾಸಕರು ಪ್ರಾಚಾರ್ಯ ವಿಜಯಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.