ದಾವಣಗೆರೆ: ಸೇವೆ ಕಾಯಂಗೆ ಒತ್ತಾಯಿಸಿ ಕಳೆದ 35 ದಿನಗಳಿಂದಲೂ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಹಂತದ ಹೋರಾಟ ನಡೆಸಿಕೊಂಡು ಬಂದ ಅತಿಥಿ ಬೋಧಕರು ಬುಧವಾರ ತಮ್ಮ ಕೈಗಳಿಗೆ ಹಗ್ಗ ಕಟ್ಟಿಕೊಂಡು ಪ್ರತಿಭಟಿಸಿದರು.
ಇದೇ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಕೊಸಗಿ ಶ್ಯಾಮಪ್ರಸಾದ, ರಾಜ್ಯದ ಸುಮಾರು 430ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 11 ಸಾವಿರಕ್ಕೂ ಅಧಿಕ ಅತಿಥಿ ಬೋಧಕರು ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ನಿರಂತರ ಹೋರಾಟ ನಡೆಸಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದರು.
ಸರ್ಕಾರಿ ಜೀತಕ್ಕಿಂತಲೂ ಕಡೆಯಾಗಿ ಕೆಲಸ ಮಾಡುತ್ತಿದ್ದರೂ ಅದ್ಯಾವುದರ ಪರಿವೆ ಇಲ್ಲದೇ ಸರ್ಕಾರ ಮೌನವಹಿಸಿದೆ. ಸರ್ಕಾರವು ಅತಿಥಿ ಶಿಕ್ಷಕರ ಬದುಕು, ಭವಿಷ್ಯವನ್ನೇ ಅತಂತ್ರ ಸ್ಥಿತಿಗೆ ನೂಕಿ, ಕೈಗಳನ್ನೂ ಕಟ್ಟಿ ಹಾಕಿದೆ. ಆಳಿದ ಸರ್ಕಾರಗಳು ಅತಿಥಿ ಬೋಧಕರ ವಿಚಾರದಲ್ಲಿ ಹಸಿ ಸುಳ್ಳುಗಳನ್ನು ಹೇಳುತ್ತಲೇ, ಅತಿಥಿ ಬೋಧಕರ ಕಿವಿಗೆ ಹೂವಿಟ್ಟು ಕಾಲಹರಣ ಮಾಡುತ್ತಿವೆ ಎಂದು ಆಕ್ರೋಶ ಹೊರಹಾಕಿದರು.ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅತಿಥಿ ಬೋಧಕರ ಹೋರಾಟಕ್ಕೆ ಧ್ವನಿಗೂಡಿಸಿದ್ದ ಆಗಿನ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಈಗ ಸ್ವತಃ ಅಧಿಕಾರದಲ್ಲಿದ್ದರೂ ಶಿಕ್ಷಕರ ಸೇವೆ ಯಾಕೆ ಕಾಯಂಗೊಳಿಸುತ್ತಿಲ್ಲ. ನಮ್ಮ ಕೈಗಳಿಗೆ ಕಗ್ಗಂಟುಗಳನ್ನು ಹಾಕಿ, ಕಟ್ಟಿ ಹಾಕಿರುವ ಸರ್ಕಾರ ಕಗ್ಗಂಟು ಬಿಡಿಸಿ, ಬದುಕಿನಲ್ಲೂ ಬೆಳಕು ತರಬೇಕು. ಸಿದ್ದರಾಮಯ್ಯ ಸ್ವತಃ ಅತಿಥಿ ಬೋಧಕರನ್ನು ಮರೆತಂತಿದೆ ಎಂದು ಅವರು ಟೀಕಿಸಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ, ಅಖಿಲ ಭಾರತೀಯ ಯುವಜನ ಫೆಡರೇಷನ್‌ನ ಆವರಗೆರೆ ವಾಸು ಸೇರಿದಂತೆ ಅನೇಕ ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸುತ್ತಿದ್ದು, ಜ.1ರಂದು ಸಂಘದ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದೇವೆ. ಕೈಗಳಿಗೆ ಹಗ್ಗ ಕಟ್ಟಿಕೊಟ್ಟರೂ ಸರ್ಕಾರದ ಸ್ಪಂದನೆ ಇಲ್ಲ. ಅತಿಥಿ ಬೋಧಕರೊಬ್ಬರು ಹಳೆ ಮೈಸೂರು ಭಾಗದಲ್ಲಿ ಮೈಮೇಲೆಲ್ಲಾ ಸೆಗಣಿ ಸುರಿದುಕೊಟ್ಟರೂ ದಪ್ಪ ಚರ್ಮದ ಸರ್ಕಾರದ ಗಮನಕ್ಕೂ ಬರುತ್ತಿಲ್ಲವೇ ಎಂದು ಶ್ಯಾಮಸುಂದರ ಕಿಡಿಕಾರಿದರು.