-ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ವೇತನ ಬಿಡುಗಡೆಗೆ ಅತಿಥಿ ಶಿಕ್ಷಕರ ಒತ್ತಾಯ
ಬಸವರಾಜ ಎಂ. ಕಟ್ಟಿಮನಿ
ಕನ್ನಡಪ್ರಭ ವಾರ್ತೆ ಹುಣಸಗಿಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಹಲವು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಹೀಗಾಗಿ ಅತಿಥಿ ಶಿಕ್ಷಕರ ಗೋಳು ಯಾರೂ ಕೇಳುವವರಿಲ್ಲದಂತಾಗಿದೆ ಎಂದು ಅತಿಥಿ ಶಿಕ್ಷಕರು ಅಳಲನ್ನು ತೋಡಿಕೊಂಡಿದ್ದಾರೆ.
ಪ್ರೌಢಶಾಲೆಯ ಒಟ್ಟು 151 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಹಂಚಿಕೆ ಮಾಡಲಾದ ಅತಿಥಿ ಶಿಕ್ಷಕರ ಸಂಖ್ಯೆ 962 ಇದರಲ್ಲಿ 928 ಹಾಗೂ ಪ್ರೌಢ ಶಾಲೆಗೆ ಮಂಜೂರಾದ ಅತಿಥಿ ಶಿಕ್ಷಕರ ಸಂಖ್ಯೆ 246 ಇದರಲ್ಲಿ 151 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಪ್ರೌಢಶಾಲಾ ಅತಿಥಿ ಶಿಕ್ಷಕರ ಜೂನ್-2024 ರಿಂದ ಆಗಸ್ಟ್-2024 ರವರೆಗೆ ಗೌರವ ಸಂಭಾವನೆ ಸಂಬಂಧಪಟ್ಟ ಅತಿಥಿ ಶಿಕ್ಷಕರ ಖಾತೆಗೆ ಜಮಾ ಮಾಡಲಾಗಿದೆ. ಇನ್ನೂ ಸೆಪ್ಟೆಂಬರ್-2024 ರಿಂದ ಮಾರ್ಚ್-2025ರವರೆಗೆ ಗೌರವ ಸಂಭಾವನೆ ಮರು ಹಂಚಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಅತಿಥಿ ಶಿಕ್ಷಕರಿಗೆ ಪಾವತಿಸಬೇಕಾದ ವೇತನ ಪಾವತಿಸಿದರೆ, ಅವರಿಗೂ ಎಲ್ಲರಂತೆ ಜೀವನ ನಡೆಸಲು ಸಾಧ್ಯವಾಗುತ್ತದೆ. ಕೆಲವೊಂದು ಅತಿಥಿ ಶಿಕ್ಷಕರು ಪಟ್ಟಣದಿಂದ ಹಳ್ಳಿಯಲ್ಲಿರುವ ಶಾಲೆಗಳಿಗೆ ಪ್ರತಿದಿನ ಹೋಗಬೇಕಾದರೆ ಸಾರಿಗೆ ವೆಚ್ಚಕ್ಕೂ ಹಣ ಭರಿಸಲಾಗದಷ್ಟು ತೊಂದರೆ ಅನುಭವಿಸುವಂತಾಗಿದೆ. ಸೇವೆಗೆ ತಕ್ಕ ಹಣ ಕೈಸೇರಿದ್ದರೆ ಖುಷಿಯಿಂದ ಜೀವನ ನಡೇಸುತ್ತೇವೆ ಎಂದು ಕೆಲ ಅತಿಥಿ ಶಿಕ್ಷಕರು ಇಲಾಖೆ ವಿಳಂಬ ಧೋರಣೆ ವಿರುದ್ಧ ಕಿಡಿ ಕಾರಿದರು.
ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಅನುದಾನ ಬಿಡುಗಡೆ ವಿಳಂಬದಿಂದಾಗಿ ಗೌರವ ಸಂಭಾವನೆ ಸಕಾಲಕ್ಕೆ ದೊರಕದೆ ತೀವ್ರ ನೋವು ಅನುಭವಿಸುತ್ತಿದ್ದೇವೆ. ಪರಿಣಾಮ ಅತಿಥಿ ಶಿಕ್ಷಕರು ಆರ್ಥಿಕ ತೊಳಲಾಟಕ್ಕೆ ಸಿಲುಕಿದ್ದಾರೆ. ಕೈಯಲ್ಲಿ ಕಾಸಿಲ್ಲದೆ ಖರ್ಚು ನಿಭಾಯಿಸಲು ಸಾಲದ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಅತಿಥಿ ಶಿಕ್ಷಕರ ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಿ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಅತಿಥಿ ಶಿಕ್ಷಕರ ಒತ್ತಾಯವಾಗಿದೆ.
ಕೋಟ್ ..1 ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ವೇತನ ಪಾವತಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಆದೇಶ ಬಂದ ತಕ್ಷಣ ಬಾಕಿ ಉಳಿದಿರುವ ಅತಿಥಿ ಶಿಕ್ಷಕರ ವೇತನ ಪಾವತಿಸಲಾಗುವುದು.
------
ಫೋಟೊ: ಅತಿಥಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿರುವ ಸಾಂದರ್ಭಿಕ ಚಿತ್ರ ಬಳಸಲು ಕೋರಿಕೆ.