ಶಿಕ್ಷಣ ಕ್ಷೇತ್ರ ಸಾಕಷ್ಟು ಬದಲಾವಣೆಯನ್ನು ಬಯಸುತ್ತಿದೆ. ಕಲಿಯುವಿಕೆಗೆ ಬಹಳಷ್ಟು ಅವಕಾಶಗಳಿದ್ದರೂ, ಚಂಚಲ ಮನಸ್ಸಿನ ಪ್ರೌಢಾವಸ್ಥೆಯ ಯುವಕರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ವಿಶೇಷವಾಗಿ ಅತ್ಯವಶ್ಯಕವಾಗಿ ಬೇಕಾಗಿದೆ ಎಂದು ಉಚ್ಚನ್ಯಾಯಾಲಯದ ಹಿರಿಯ ವಕೀಲ, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಹಾಸನಶಿಕ್ಷಣ ಕ್ಷೇತ್ರ ಸಾಕಷ್ಟು ಬದಲಾವಣೆಯನ್ನು ಬಯಸುತ್ತಿದೆ. ಕಲಿಯುವಿಕೆಗೆ ಬಹಳಷ್ಟು ಅವಕಾಶಗಳಿದ್ದರೂ, ಚಂಚಲ ಮನಸ್ಸಿನ ಪ್ರೌಢಾವಸ್ಥೆಯ ಯುವಕರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ವಿಶೇಷವಾಗಿ ಅತ್ಯವಶ್ಯಕವಾಗಿ ಬೇಕಾಗಿದೆ ಎಂದು ಉಚ್ಚನ್ಯಾಯಾಲಯದ ಹಿರಿಯ ವಕೀಲ, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟರು.
ಹಾಸನದ ಕುವೆಂಪು ನಗರದಲ್ಲಿ ಸ್ಥಾಪಿತವಾಗಿರುವ ಬ್ರಿಗೇಡ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ಶುಭಾರಂಭ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿಜಿ ಟ್ಯೂಷನ್ಸ್ ಉಪನಾಮದಲ್ಲಿ ಆರಂಭಿಸಿರುವ ಈ ಸಂಸ್ಥೆಯ ಮುಖ್ಯಸ್ಥ ವಿಜಯಶಂಕರ್ ಮತ್ತು ಅವರ ಪತ್ನಿ ಶಾಂಭವಿಗೆ ಉತ್ತಮ ವಿದ್ಯಾರ್ಹತೆ, ಅನುಭವದ ಹಿನ್ನೆಲೆಯಿದ್ದು, ಶಿಕ್ಷಾ ಪ್ರದಾನ ಕ್ಷೇತ್ರದಲ್ಲಿನ ಅವರ ಅನುಭವ ಮತ್ತು ಅವರ ಆಯ್ಕೆಯ ಉತ್ತಮ ತಂಡದಿಂದ ಇಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಲಭ್ಯವಾಗಲಿದೆ ಎಂದರು. ಅವರು ಆಯ್ದುಕೊಂಡಿರುವ 5 ಪ್ರಮುಖ ಅಂಶಗಳೂ ಮತ್ತು ಅದಕ್ಕೆ ಸಮರ್ಥವಾಗಿ ಬಳಸಿಕೊಳ್ಳಲು ಚಿಂತಿಸಿರುವ ಉಪಗ್ರಹಾಧಾರಿತ ಶಿಕ್ಷಣಾಂಶಗಳು ಪೂರಕವಾಗಿರುವುದು ಅವರ ದೂರದರ್ಶಿತ್ವಕ್ಕೆ ಉದಾಹರಣೆ ಎಂದು ಶ್ಲಾಘಿಸಿದರು. ಅತಿಥಿ ಮುಖ್ಯರಾಗಿದ್ದ ಹಾಸನ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ವಿಜಯ್ ಅಂಗಡಿಯವರು ವಿದ್ಯಾರ್ಥಿಗಳು ಕ್ರಿಯಾಶೀಲತೆ, ಶ್ರದ್ಧೆ, ಶ್ರಮದಿಂದ ಯೋಜಿತವಾಗಿ ನಿತ್ಯವೂ ವಿದ್ಯಾಭ್ಯಾಸ ಮಾಡಬೇಕು. ವಿದ್ಯಾರ್ಥಿ ಜೀವನ ಮತ್ತೆ ಬಯಸಿದರೂ ಸಿಗುವಂತಹುದಲ್ಲ. ಆದ್ದರಿಂದ ಈ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಸದಾ ಆರೋಗ್ಯ ಶಾಲಿಗಳಾಗಿರಲು ರಾಗಿಯನ್ನು ಸೇವಿಸುವುದು ಅತ್ಯುತ್ತಮ. ಎಂದಿಗೂ ಕೆಡುಕ ಬಯಸಿದಿರಿ, ಕೆಟ್ಟಗುಣಗಳಿಗೆ ಆಶ್ರಯ ಕೊಡಬೇಡಿ, ಒಳಿತನ್ನೇ ಚಿಂತಿಸಿ, ಒಳ್ಳೆಯವರೆನಿಸಿಕೊಳ್ಳಿ ಎಂದು ತಮ್ಮ ಕಣ್ಣೆದುರೇ ಕಂಡ ಮಹಾಪುರುಷರ ಜೀವನೋದಾಹರಣೆಗಳ ಮೂಲಕ ಕಿವಿಮಾತು ಹೇಳಿದರು.
ರಾಮಕೃಷ್ಣ ವಿದ್ಯಾಲಯದ ಕಾರ್ಯದರ್ಶಿ ಲಕ್ಷ್ಮೀಶ್ರೀಕೇಶವ ಮಾತನಾಡಿ, ಸಂಸ್ಥೆಯನ್ನು ತತ್ತ್ವಬದ್ಧ ನಿಲುವಿನೊಂದಿಗೆ ನಡೆಸುವುದು ಕಷ್ಟಸಾಧ್ಯ. ಅದನ್ನು ತಮ್ಮ ತಂದೆ ಸಿ.ಎಸ್.ಕೃಷ್ಣಸ್ವಾಮಿ ಮಾಡಿದ್ದರು. ಅದನ್ನು ಮುನ್ನಡೆಸುವ ಕೈಂಕರ್‍ಯವನ್ನಷ್ಟೇ ತಾನು ಮಾಡುತ್ತಿದ್ದೇನೆ. ಉತ್ತಮ ಧ್ಯೇಯಕ್ಕೆ ಎಂದೂ ಬೆಂಬಲವಿರುತ್ತದೆ. ಉತ್ತಮ ಚಿಂತನೆಯ ಬ್ರಿಗೇಡ್ ಸಂಸ್ಥೆಗೂ ಅಂತಹ ಪ್ರೋತ್ಸಾಹ ಸಿಗಲಿ ಎಂದು ಹಾರೈಸಿದರು.
ಬ್ರಿಗೇಡ್ ಕಾಲೇಜಿನ ಪ್ರಾಂಶುಪಾಲ ವಿಜಯಶಂಕರ್ ತಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಭವಿಷ್ಯಕ್ಕೆ ಪೂರಕವಾಗಿ ತಂತ್ರಜ್ಞಾನಾಧಾರಿತ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು, ಉನ್ನತ ಶಿಕ್ಷಣಾಭ್ಯಾಸಕ್ಕೆ ಪೂರಕವಾಗಿ ತಮ್ಮದು ವಿಶಿಷ್ಟ ಕೇಂದ್ರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ಸಂಘದ ಅಧ್ಯಕ್ಷ ಎಂ.ಎಸ್. ಶ್ರೀಕಂಠಯ್ಯ, ಸೆಂಟರ್ ಆಫ್ ಎಕ್ಸಲೆನ್ಸ್‌ನ ಪ್ರಾಂಶುಪಾಲೆ ಶಾಂಭವಿ, ಪುನೀತ್, ಸುಧೀಂದ್ರ, ಡಾ. ಶಿವಪ್ರಕಾಶ್ ಕೋಳಿವಾಡ್, ಬ್ರಿಗೇಡ್ ವಿದ್ಯಾರ್ಥಿಗಳು, ಹಿತೈಷಿಗಳು ಹಾಜರಿದ್ದು ಶುಭ ಹಾರೈಸಿದರು. ದೀಕ್ಷಾ-ವೇದಾಂತು ಸಂಸ್ಥೆಯ ನರೇಂದ್ರಬಾಬು ವಿದ್ಯಾರ್ಥಿಗಳಿಗೆ ಏಮ್ಸ್ ಮತ್ತು ಐಐಟಿ ಗಳಲ್ಲಿ ಮಾಡುವ ಅಧ್ಯಯನ, ಅದರ ಫಲ ಮತ್ತು ಅದರ ಪ್ರವೇಶಕ್ಕಿರುವ ರೂಪುರೇಷೆಗಳನ್ನು ವಿವರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.