ಗದಗ: ಯಾವ ಮಗುವೂ ಜಾಣನಲ್ಲ, ಯಾವ ಮಗುವೂ ದಡ್ಡನಲ್ಲ. ಎಲ್ಲ ಮಕ್ಕಳಲ್ಲಿಯೂ ವಿಶೇಷವಾದ ಜ್ಞಾನ ಸಂಪತ್ತು ಇರುತ್ತದೆ. ಅವರಿಗೆ ಸರಿಯಾದ ದಾರಿ ತೋರಿಸಿದರೆ ಅವರು ಅತ್ಯಂತ ಉನ್ನತವಾದ ಶಿಖರವನ್ನೇರಬಲ್ಲರು ಎಂದು ಹೊಸಹಳ್ಳಿಯ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಸ್ವಾಮಿಗಳು ಹೇಳಿದರು.
ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಮಕ್ಕಳಿಗೆ ನಾವು ಏನನ್ನು ಕಲಿಸಬೇಕಾಗಿಲ್ಲ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಸಮ್ಮೇಳನವನ್ನು ಸಂಘಟಕರು ಉತ್ತಮವಾಗಿ ಸಂಘಟಿಸಿದ್ದಾರೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶರಣ ಸಾಹಿತ್ಯದ ಸಂಸ್ಕಾರ ಅತ್ಯಗತ್ಯವಾಗಿದ್ದು, ಸಮಾಜದಲ್ಲಿನ ತಾರತಮ್ಯ ಮತ್ತು ಅಸಮಾನತೆಗಳನ್ನು ಹೋಗಲಾಡಿಸಲು ಇಂತಹ ಸಮ್ಮೇಳನಗಳು ಭದ್ರ ಬುನಾದಿಯಾಗಲಿವೆ ಎಂದರು.ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ, ಬಿಇಒ ವಿ.ವಿ. ನಡುವಿನಮನಿ ಹಾಗೂ ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿದರು. ದಿಂಗಾಲೇಶ ಜಂಗಳಿ, ಪ್ರಿಯಾಂಕ್ ಲಮಾಣಿ, ಪ್ರೀತಿ ಬುಳ್ಳಾ, ಹರ್ಷಿತಾ ಕೋರಿಶೆಟ್ಟರ ಸೇರಿದಂತೆ ವಿವಿಧ ಮಕ್ಕಳಿಗೆ ಬಾಲ ಶರಣಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.