ಟಿಬಿ ಡ್ಯಾಂನ 19ನೇ ಗೇಟ್‌ ನಿರ್ಮಿಸಲು ಗುಜರಾತ್‌ ಕಂಪನಿಗೆ ಹೊಣೆ

KannadaprabhaNewsNetwork |  
Published : Apr 18, 2025, 12:32 AM IST
17ಎಚ್‌ಪಿಟಿ2- ಹೊಸಪೇಟೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ಗೆ ಸ್ಟಾಪ್‌ ಲಾಗ್‌ ಅಳವಡಿಕೆ ಮಾಡಿದ ಕ್ಷಣ. (ಸಂಗ್ರಹ ಚಿತ್ರ) | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಅಳವಡಿಸಿರುವ ಸ್ಟಾಪ್‌ ಲಾಗ್‌ ತೆಗೆದು ಶಾಶ್ವತ ಕ್ರಸ್ಟ್‌ ಗೇಟ್‌ ನಿರ್ಮಾಣ ಮಾಡಲು ಗುಜರಾತ್‌ ಮೂಲದ ಕಂಪನಿಗೆ ಟೆಂಡರ್‌ ಆಗಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ಎರಡು ದಿನದಲ್ಲಿ 32 ಕ್ರಸ್ಟ್‌ ಗೇಟ್‌ ಬದಲಿಸಲು ಇ- ಟೆಂಡರ್‌

ಕನ್ನಡಪ್ರಭ ವಾರ್ತೆ ಹೊಸಪೇಟೆ

ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಅಳವಡಿಸಿರುವ ಸ್ಟಾಪ್‌ ಲಾಗ್‌ ತೆಗೆದು ಶಾಶ್ವತ ಕ್ರಸ್ಟ್‌ ಗೇಟ್‌ ನಿರ್ಮಾಣ ಮಾಡಲು ಗುಜರಾತ್‌ ಮೂಲದ ಕಂಪನಿಗೆ ಟೆಂಡರ್‌ ಆಗಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ಗುಜರಾತಿನ ಅಹಮದಾಬಾದ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಾರ್ಡ್‌ವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿಗೆ ಟೆಂಡರ್‌ ಆಗಿದೆ. ತುಂಗಭದ್ರಾ ಮಂಡಳಿ ಇ-ಟೆಂಡರ್‌ ಬಿಡ್‌ ಅನ್ನು ಏ. 17ರಂದು ಓಪನ್‌ ಮಾಡಿದ್ದು, ಗುಜರಾತಿನ ಕಂಪನಿ ಟೆಂಡರ್‌ನಲ್ಲಿ ಪಾಸಾಗಿದೆ ಎಂದು ಮಂಡಳಿ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಈ ಕಂಪನಿ ಮೈಸೂರಿನ ಕೆಆರ್‌ಎಸ್‌ ಡ್ಯಾಂನ ಗೇಟ್‌ಗಳನ್ನು ನಿರ್ಮಾಣ ಮಾಡಿದೆ. ಜೊತೆಗೆ ಫರಕ್ಕಾ ಡ್ಯಾಂಗೂ ಗೇಟ್‌ ನಿರ್ಮಾಣ ಮಾಡಿದ ಅನುಭವ ಹೊಂದಿದೆ. ಈ ಹಾರ್ಡ್‌ವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ ಶೀಘ್ರದಲ್ಲೇ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಿದೆ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯದ 19ನೇ ಕ್ರಸ್ಟ್‌ ಗೇಟ್‌ 2024ರ ಆಗಸ್ಟ್‌ 10ರಂದು ಕಳಚಿ ಬಿದ್ದಿತ್ತು. ಈ ಜಲಾಶಯಕ್ಕೆ ಸ್ಟಾಪ್‌ ಲಾಗ್ ಅಳವಡಿಕೆ ಮಾಡಲಾಗಿತ್ತು. ಈ ಗೇಟ್‌ ಕಳಚಿ ಬಿದ್ದು, 40 ಟಿಎಂಸಿಯಷ್ಟು ನೀರು ನದಿ ಪಾಲಾಗಿತ್ತು. ಬಳಿಕ ಪರಿಣತ ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ ಸ್ಟಾಪ್‌ ಲಾಗ್‌ ನಿರ್ಮಾಣ ಮಾಡಲಾಗಿತ್ತು. ಈಗ ಗೇಟ್‌ಗೆ ಶಾಶ್ವತ ಗೇಟ್‌ ನಿರ್ಮಾಣ ಕಾರ್ಯ ನಡೆಯಲಿದೆ. ಜೊತೆಗೆ ಇನ್ನೂ ಎರಡು ದಿನದಲ್ಲಿ ಉಳಿದ 32 ಕ್ರಸ್ಟ್‌ ಗೇಟ್‌ಗಳನ್ನು ಬದಲಿಸಲು ಇ- ಟೆಂಡರ್‌ಅನ್ನು ತುಂಗಭದ್ರಾ ಮಂಡಳಿ ಕರೆಯಲಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ