ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದಲ್ಲಿ ಸೋಮವಾರ ಪಟ್ಟಸಾಲಿ ನೇಕಾರ ಸಮಾಜ ಒಳಗೊಂಡು ಇತರ ಸಮಾಜದ ಸಾಕಷ್ಟು ಮಹಿಳೆಯರಿಂದ ರೊಟ್ಟಿ ಜಾತ್ರೆ ಮೆರವಣಿಗೆ ಸಡಗರ, ಸಂಭ್ರಮದಿಂದ ಜರುಗಿತು.
ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 40ನೇ ವರ್ಷದ ಪುಣ್ಯರಾಧನೆ ನಿಮಿತ್ತ ಹಮ್ಮಿಕೊಂಡ ಶರಣ ಸಂಗಮ ಸಮಾರಂಭದ ನಿಮಿತ್ತ ಮಹಿಳೆಯರಿಂದ ರೊಟ್ಟಿ ಜಾತ್ರೆ ಮೆರವಣಿಗೆ ನಡೆಯಿತು.ಇಲ್ಲಿನ ಸಾಲೇಶ್ವರ ದೇವಸ್ಥಾನದಿಂದ ಆರಂಭವಾದ ರೊಟ್ಟಿ ಜಾತ್ರೆ ಮೆರವಣಿಗೆ ಪವಾಕ್ರಾಸ್, ಗುಗ್ಗರಿಪೇಟೆ, ಅರಳಿಕಟ್ಟಿ, ಚೌಬಜಾರ್, ಗಚ್ಚಿನಕಟ್ಟಿ, ಕಂಠಿಪೇಟೆ ಮೂಲಕ ಹಾಯ್ದು ಶ್ರೀ ಜಗದ್ಗುರು ಗುರುಸಿದ್ದೇಶ್ವರ ಮಠಕ್ಕೆ ಬಂದು ತಲುಪಿತು. ಪಟ್ಟಸಾಲಿ ನೇಕಾರ ಸಮಾಜದ ಹಾಗೂ ಬೇರೆ ಬೇರೆ ಸಮಾಜದ ಸಾಕಷ್ಟು ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಸಿದ್ಧಪಡಿಸಿದ್ದ ಖಡಕ್ ರೊಟ್ಟಿ, ನಾನಾ ಬಗೆಯ ಖಾರದ ಚಟ್ನಿ, ವಿವಿಧ ತೆರನಾದ ಸಿಹಿ ಖಾದ್ಯ ತಯಾರಿಸಿಕೊಂಡು ಒಂದು ಬುಟ್ಟಿಯಲ್ಲಿ ಕಟ್ಟಿಕೊಂಡು ಪ್ರತಿಯೊಬ್ಬ ಮಹಿಳೆಯರು ತಲೆಯ ಮೇಲೆ ಇಟ್ಟುಕೊಂಡು ರೊಟ್ಟಿ ಜಾತ್ರೆ ಮೆರವಣಿಗೆ ನಡೆಸಿದರು.
ಗ್ರಾಮೀಣ ಪ್ರದೇಶದ ಸೊಗಡಿನ ಪರಂಪರೆ ಪ್ರತಿಬಿಂಬಿಸುವ ರೊಟ್ಟಿ ಜಾತ್ರೆ ಮೆರವಣಿಗೆಯಲ್ಲಿ ಮಹಿಳೆಯರು ಇಳಕಲ್ಲ ಸೀರೆ, ಗುಳೇದಗುಡ್ಡ ಖಣದ ಕುಪ್ಪಸ ಧರಿಸಿ ಮಹಿಳೆಯರು, ಯುವತಿಯರು ಈ ಆಕರ್ಷಕ ರೊಟ್ಟಿಬುತ್ತಿ ಜಾತ್ರೆ ಮೆರವಣಿಗೆಗೆ ಮೆರಗು ತಂದರು.ಪಟ್ಟಣದ ಪಟ್ಟಸಾಲಿ ನೇಕಾರ ಮಹಿಳಾ ಸಮಾಜದ ಮುಖಂಡರು ಹಾಗೂ ಸಮಾಜದ ಇನ್ನೂ ಅನೇಕ ಯುವತಿಯರು ಮಹಿಳೆಯರು ಗುರುಸಿದ್ದೇಶ್ವರ ಬ್ರಾಹ್ಮಠದ ಶರಣ ಸಂಗಮ ಸಮಾರಂಭದ ನಿಮಿತ್ತ ನಡೆಸಿದ ರೊಟ್ಟಿ ಜಾತ್ರೆ ಮೆರವಣಿಗೆಯಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದರು.
ಪಟ್ಟಸಾಲಿ ನೇಕಾರ ಸಮಾಜ ಅಧ್ಯಕ್ಷೆ ಗೌರಮ್ಮ ಕಲ್ಬುರ್ಗಿ , ಭಾಗ್ಯಾ ಉದ್ನೂರ, ನಾಗರತ್ನಾ ಯಣ್ಣಿ, ತಾರಾಮತಿ ರೋಜಿ, ಮಾಲಾ ರಾಜನಾಳ, ಗೀತಾ ಬಂಕಾಪುರ, ಜಂಪವ್ವ ಕಲಬುರ್ಗಿ, ಶಾಂತಾ ಅದ್ವಾನಿ, ಗೀತಾ ತಿಪ್ಪಾ, ಶಶಿಕಲಾ ಮದ್ದಾನಿ, ಅಶ್ವಿನಿ ಪುರಾಣಿ, ಶಶಿಕಲಾ ಭಾವಿ, ಈರಮ್ಮ ರಾಜನಾಳ, ತಾರಾ ಕೆಲೂಡಿ, ಶೋಭಾ ಜಿಡಗಿ ಇತರರು ಇದ್ದರು.