ಗುಂಡ್ಲುಪೇಟೆ: 4ನೇ ಹಂತದ ಕೆರೆಗಳಿಗೆ ಬಾರದ ನೀರು

KannadaprabhaNewsNetwork |  
Published : Sep 07, 2026, 01:45 AM IST
6ಸಿಎಚ್‌ಎನ್‌52ಗುಂಡ್ಲುಪೇಟೆ ತಾಲೂಕಿನ 4 ನೇ ಹಂತದ ಕೆರೆಯೊಂದರ ಚಿತ್ರಣ. | Kannada Prabha

ಸಾರಾಂಶ

ಆಲಂಬೂರು ಏತ ನೀರಾವರಿ ಯೋಜನೆಯಡಿ 4ನೇ ಹಂತದಲ್ಲಿ ತಾಲೂಕಿನ ಕೆರೆಗಳಿಗೆ ಸೆ.6ರಿಂದ ನೀರು ಬಿಡುವುದಾಗಿ 4ನೇ ಹಂತದ ರೈತರಿಗೆ ಜಿಲ್ಲಾಡಳಿತ ನೀಡಿದ್ದ ಭರವಸೆ ಈಗ ಹುಸಿಯಾಗಿದೆ!

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಆಲಂಬೂರು ಏತ ನೀರಾವರಿ ಯೋಜನೆಯಡಿ 4ನೇ ಹಂತದಲ್ಲಿ ತಾಲೂಕಿನ ಕೆರೆಗಳಿಗೆ ಸೆ.6ರಿಂದ ನೀರು ಬಿಡುವುದಾಗಿ 4ನೇ ಹಂತದ ರೈತರಿಗೆ ಜಿಲ್ಲಾಡಳಿತ ನೀಡಿದ್ದ ಭರವಸೆ ಈಗ ಹುಸಿಯಾಗಿದೆ!

ತಾಲೂಕಿನ 4ನೇ ಹಂತದ ಕೆರೆಗಳಿಗೆ ನೀರು ಹೋಗುತ್ತಿತ್ತು. 4ನೇ ಹಂತದ ಚಾಮರಾಜನಗರ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸಿದ ಫಲವಾಗಿ ಆಗಸ್ಟ್‌ ಮೊದಲ ವಾರದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಸೆ.5ರ ತನಕ ಚಾಮರಾಜನಗರ ತಾಲೂಕಿನ 4ನೇ ಹಂತದ ಕೆರೆಗೆ ನೀರು ಹರಿಸಬೇಕು ಎಂದು ಸೂಚನೆ ನೀಡಿದ್ದರು.

ಸೆ.6ರಿಂದ ಗುಂಡ್ಲುಪೇಟೆ ತಾಲೂಕಿನ 4ನೇ ಹಂತದ ಕೆರೆಗಳಿಗೆ ಹುತ್ತೂರು ಪಂಪ್‌ಹೌಸ್‌ನಿಂದ ನೀರು ಹರಿಸಲಾಗುವುದು ಎಂದು ತಾಲೂಕಿನ ರೈತರು, ರೈತ ಸಂಘಟನೆಗಳು ಹಾಗೂ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ಗೆ ಜಿಲ್ಲಾಧಿಕಾರಿ ಶ್ರೀರೂಪ ಭರವಸೆ ನೀಡಿದ್ದರು.

ಜಿಲ್ಲಾಧಿಕಾರಿ ಶ್ರೀರೂಪ ಸೂಚನೆಯಂತೆ ಕಳೆದ ಆ.5ರಿಂದ ಸೆ.5ರ ತನಕ ಎಡ ಬಿಡದೆ ನೀರು ಚಾಮರಾಜನಗರ ತಾಲೂಕಿನ 4ನೇ ಹಂತದ ಕೆರೆಗಳಿಗೆ ಹರಿದಿದೆ. ಜಿಲ್ಲಾಡಳಿತ ಸೆ.6ರಿಂದ ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ನೀರು ಬಿಡುವುದಾಗಿ ಹೇಳಿತ್ತು. ಜಿಲ್ಲಾಧಿಕಾರಿ ಭರವಸೆಯಂತೆ ಸೆ.6ರ ಭಾನುವಾರದಿಂದ ತಾಲೂಕಿನ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಹರಿಸಬೇಕಿತ್ತು. ಆದರೆ ನೀರು ಹರಿಸುವ ಗೋಜಿಗೆ ಜಿಲ್ಲಾಡಳಿತ ಹೋಗಿಲ್ಲ.

4ನೇ ಹಂತದಲ್ಲಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ರೈತ ಸಂಘಟನೆಗಳು ಹಾಗೂ 4ನೇ ಹಂತದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರು ಹಾಗೂ ಬಿಜೆಪಿ ಕೂಡ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತಕ್ಕೆ ಎಚ್ಚರಿಸುವ ಕೆಲಸ ಮಾಡಿವೆ.

ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ಕಳೆದ ಆ.24ರಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲಾಡಳಿತ ಕನಿಷ್ಠ ಅಹೋರಾತ್ರಿ ಪ್ರತಿಭಟನಾನಿರತರನ್ನು ಭೇಟಿ ಮಾಡುವ ಸೌಜನ್ಯವನ್ನು ಮಾಡಿಲ್ಲ.

ಸಾಮೂಹಿಕ ನಾಯಕತ್ವದ ರೈತಸಂಘ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸೆ.6 ರಿಂದ 100 ದಿನಗಳ ಕಾಲ ನೀರು 4ನೇ ಹಂತದ ಕೆರೆಗಳಿಗೆ ಹರಿಯಲಿದೆ ಎಂದು ಹೇಳಿದ್ದರು.

ಆದರೆ ಜಿಲ್ಲಾಡಳಿತ ಹಾಗೂ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ರೈತರು, ರೈತ ಸಂಘಟನೆಗಳಿಗೆ ನೀಡಿದ್ದ ಭರವಸೆ ಹುಸಿಯಾಗಿರುವುದಂತೂ ದಿಟ.

ಶಾಸಕರಲ್ಲಿ ಹೊಂದಾಣಿಕೆ, ಇಚ್ಛಾಶಕ್ತಿ ಕೊರತೆ?

ಆಲಂಬೂರು ಏತ ನೀರಾವರಿ ಯೋಜನೆಯಡಿ 1,2,3 ಮತ್ತು 4 ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಜನಪ್ರತಿನಿಧಿಗಳಲ್ಲಿ ಹೊಂದಾಣಿಕೆ ಅಥವಾ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.

ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಕ್ಷೇತ್ರದ ಶಾಸಕರು ಕಾಂಗ್ರೆಸ್‌ ಪಕ್ಷದವರೇ. ಆದರೆ ಚಾಮರಾಜನಗರ ತಾಲೂಕಿನ 3 ನೇ ಹಂತದ ಕೆರೆಗಳಿಗೆ ನೀರು ತುಂಬಿದ ಬಳಿಕ 4 ನೇ ಹಂತದ ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಮಾತ್ರ ಎರಡು ಕ್ಷೇತ್ರದ ಶಾಸಕರಲ್ಲಿ ಹೊಂದಾಣಿಕೆ ಕಾಣುತ್ತಿಲ್ಲ.

ಶಾಶ್ವತ ಪರಿಹಾರ ಹುಡುಕದ ಜಿಲ್ಲಾಡಳಿತ!

ಆಲಂಬೂರು 3 ಮತ್ತು 4 ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ಅಥವಾ ತುಂಬುವ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಕಳೆದ ಮೂರು ವರ್ಷಗಳಿಂದ ನಡೆಯುತ್ತಲೇ ಇದೆ.3 ಮತ್ತು 4 ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ಅಥವಾ ತುಂಬುವ ವಿಚಾರದಲ್ಲಿ ಜಿಲ್ಲಾಡಳಿತ ಶಾಶ್ವತ ಪರಿಹಾರ ಹುಡುಕಲಿ ಕಳೆದ ಮೂರು ವರ್ಷಗಳಿಂದ ಸಾದ್ಯವಾಗಿಲ್ಲ.

ಕೆಸರೆರಚಾಟ

4ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಮಾತ್ರ ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಮದ್ಯೆ ವಾಕ್ಸಮರ ಖಾಯಂ ಅಲ್ಲದೆ ಕೈ ಮತ್ತು ಕಮಲ ಪಾಳೆಯದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ಪ್ರತ್ಯಾರೋಪ ನಡೆಸಿಕೊಂಡು ಹೋಗುತ್ತಿದ್ದಾರೆ.

ಪರಿಹಾರ ಸಿಗುತ್ತಿಲ್ಲ

ಜಿಲ್ಲಾಡಳಿತಕ್ಕೆ ಆಲಂಬೂರು 1,2 ಹಂತದ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಗೊಂದಲವಿಲ್ಲ.3 ಮತ್ತು 4 ನೇ ಹಂತದ ವಿಚಾರದಲ್ಲಿ ಮಾತ್ರ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಮಾತ್ರ ಸಂಪೂರ್ಣ ವಿಫಲವಾಗಿರುವುದಂತು ವಾಸ್ತವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕ ಕಲ್ಯಾಣಾರ್ಥ ಕಲ್ಯಾಣೋತ್ಸವ ಪೂಜಾ ಮಹೋತ್ಸವ
ಶಿಕ್ಷಕ ವೃತ್ತಿಗೆ ಸಿಗುವ ಗೌರವ ಮತ್ತ್ಯಾವ ವೃತ್ತಿಗೂ ಸಿಗಲಾರದು