ಗುಂಡ್ಲುಪೇಟೇಲಿ ಬಿಡಾಡಿ ದನ, ಕರುಗಳ ಹಾವಳಿ!

KannadaprabhaNewsNetwork |  
Published : Jun 17, 2024, 01:33 AM IST
ಗುಂಡ್ಲುಪೇಟೇಲಿ ಬಿಡಾಡಿ ದನ,ಕರುಗಳ ಹಾವಳಿ! | Kannada Prabha

ಸಾರಾಂಶ

ಗುಂಡ್ಲುಪೇಟೆ-ಚಾಮರಾಜನಗರ ಜೋಡಿ ರಸ್ತೆಯ ಮದೀನ್‌ ಹೋಟೆಲ್‌ ಮುಂದೆ ರಸ್ತೆ ಮಧ್ಯ ಭಾಗದಲ್ಲಿ ಬಿಡಾಡಿ ದನ, ಕರುಗಳ ಕಾರು ಬಾರು.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡಾಡಿ ದನ, ಕರುಗಳು ಹಾವಳಿ ಹೆಚ್ಚಿದ್ದು ವಾಹನಗಳ ಸವಾರರು ಹಾಗೂ ದಾರಿ ಹೋಕರಿಗೆ ಕಂಟಕವಾಗಿ ಪರಿಣಮಿಸಿವೆ.

ಪುರಸಭೆಯಲ್ಲಿ ೨೩ ಮಂದಿ ಸದಸ್ಯರು, ಪುರಸಭೆಯ ಓರ್ವ ಆಡಳಿತಾಧಿಕಾರಿ, ಪುರಸಭೆ ಮುಖ್ಯಾಧಿಕಾರಿ ಇದ್ದರೂ ಹೆದ್ದಾರಿಯಲ್ಲಿ ಬಿಡಾಡಿ ದನಗಳ ಹಾವಳಿ ತಪ್ಪಿಸಲು ಆಗಿಲ್ಲ. ಪಟ್ಟಣದ ನಡುವೆ ಮೈಸೂರು-ಊಟಿ ಹೆದ್ದಾರಿ ಹಾಗೂ ಚಾಮರಾಜನಗರ ಜೋಡಿ ರಸ್ತೆ, ಜೋಡಿ ರಸ್ತೆಯ ಬದಿಯಲ್ಲಿ ಸರ್ವೀಸ್ ರಸ್ತೆ ಇರದ ಕಾರಣ ಪಾದಚಾರಿಗಳು ಹೆದ್ದಾರಿಯೇ ಫುಟ್‌ಪಾತ್‌ ಎಂದು ನಡೆದುಕೊಂಡು ಹೋಗುತ್ತಿದ್ದಾರೆ. ಹೆದ್ದಾರಿ ಬದಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರು ನಡೆದು ಹೋಗುವ ಹೆದ್ದಾರಿಯಲ್ಲಿ ಬಿಡಾಡಿ ದನ, ಕರುಗಳ ದಿಢೀರ್‌ ನುಗ್ಗುವ ಕಾರಣ ಅನಾಹುತಕ್ಕೆ ಎಡೆ ಮಾಡಿದೆ. ಕಳೆದ ತಿಂಗಳ ಹಿಂದೆ ಪಟ್ಟಣದ ಕೇರಳ ಹೆದ್ದಾರಿಯಲ್ಲಿ ಹಸುವೊಂದು ದಿಢೀರ್‌ ರಸ್ತೆಗೆ ನುಗ್ಗಿದ ಕಾರಣ ಬೈಕ್‌ ಸವಾರ ಬಿದ್ದು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಆತನ ಪ್ರಾಣ ಉಳಿದುಕೊಂಡಿದೆ.

ಬಿಡಾಡಿ ದನಗಳು ಅಡ್ಡಾದಿಡ್ಡಿ ಓಡಾಟ ಹಾಗೂ ಬಿಡಾಡಿ ದನಗಳ ಓಡಾಟದಲ್ಲಿ ದಿಢೀರ್ ರಸ್ತೆಗೆ ನುಗ್ಗವ ಕಾರಣ ವಾಹನಗಳ ಸವಾರರು ಅಪಘಾತ ನಡೆವ ಸಂಭವ ಕೂಡ ಹೆಚ್ಚಿದೆ. ಪುರಸಭೆ ಹಾಗೂ ಪೊಲೀಸರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಶಾಲಾ ಕಾಲೇಜಿನ ಮಕ್ಕಳು ಸಂಚರಿಸುವ ಸಮಯದಲ್ಲಿ ಬಿಡಾಡಿ ದನಗಳ ತಪ್ಪಿಸಿಕೊಳ್ಳಲು ಹೋಗಿ ವಾಹನಗಳ ದಿಢೀರ್ ಬಂದು ಅಪಘಾತವಾದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಪಟ್ಟಣದ ಪರಿಮಿತಿಯ ಮೈಸೂರು-ಊಟಿ ಹೆದ್ದಾರಿ ರಸ್ತೆಯ ಮಧ್ಯ ಭಾಗದಲ್ಲಿ (ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಎಂಸಿ ಡಿಸಿಸಿ ಬ್ಯಾಂಕ್‌ ವೃತ್ತ, ಗುರುಭವನ, ಪುರಸಭೆ ಕಚೇರಿ ಮುಂದೆ ದನ, ಕರುಗಳು ಮಲಗುತ್ತಿವೆ. ಕೆಲವೊಮ್ಮೆ ದಿಢೀರ್‌ ರಸ್ತೆಯಲ್ಲಿ ಓಡುವಾಗ ವಾಹನಗಳ ಸವಾರರು ದಿಢೀರ್‌ ಬ್ರೇಕ್‌ ಹಾಕಿದಾಗ ಹಿಂಬದಿ ವಾಹನಗಳು ಡಿಕ್ಕಿ ಹೊಡೆಯುತ್ತವೆ ಎಂದು ಕಾರು ಚಾಲಕ ಮಹದೇವ ಹೇಳಿದ್ದಾರೆ.

ಬಿಡಾಡಿ ದನ, ಕರುಗಳನ್ನು ಕೆಲ ಪಶು ಪೋಷಕರು ಬೇಕಂತಲೇ ಬಿಡುತ್ತಿದ್ದಾರೆ. ಪಟ್ಟಣದಲ್ಲಿ ಅಡ್ಡಾಡಿಕೊಂಡು ಹಾಲು ಕರೆವ ವೇಳೆಗೆ ಮನೆಗೆ ತಲುಪುತ್ತಿವೆ. ಇದನ್ನು ತಪ್ಪಿಸಲು ಪುರಸಭೆ ಕ್ರಮ ಜರುಗಿಸಿದರೆ ಬಿಡಾಡಿ ದನ, ಕರುಗಳ ಹಾವಳಿಗೆ ಬ್ರೇಕ್‌ ಹಾಕಲು ಸಾಧ್ಯ ಎಂದು ಪಟ್ಟಣದ ನಿವಾಸಿ ಮಹೇಶ್‌ ಹೇಳಿದ್ದಾರೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಡ್ಡಾಡಿಕೊಂಡಿರುವ ಬೀದಿ ದನ, ಕರುಗಳನ್ನು ರಸ್ತೆಗೆ ಬಿಡದಂತೆ ಪುರಸಭೆ ಪ್ರಕಟಣೆ ಹೊರಡಿಸಿ ಗಡುವು ನೀಡಿ ಮನೆಯಲ್ಲಿ ಕಟ್ಟಿಕೊಂಡರೆ ಒಳ್ಳೇಯದು. ಇಲ್ಲದಿದ್ದಲ್ಲಿ ಅಡ್ಡಾದಿಡ್ಡಿಯಾಗಿ ಬರುವ ಜಾನುವಾರುಗಳನ್ನು ಹಿಡಿದು ಪಿಂಜರಾ ಪೋಲ್‌ಗೆ ಕಳುಹಿಸಿದರೆ ದನ, ಕರು ಸಾಕುವರು ಮತ್ತೆ ಬೀದಿಗೆ ಬಿಡೋದಿಲ್ಲ ಎಂದು ಪುರಸಭೆ ಸದಸ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಪಟ್ಟಣದಲ್ಲಿ ಬಿಡಾಡಿ ದನಗಳು ಎಲ್ಲೆಂದರಲ್ಲಿ ನಿಲ್ಲುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಪತ್ರ ಬರೆಯಲಾಗಿದೆ. ಮತ್ತೆ ಪತ್ರ ಬರೆದು ಪೊಲೀಸರ ಸಹಕಾರದಲ್ಲಿ ಬಿಡಾಡಿ ದನ, ಕರುಗಳ ಹಿಡಿದು ಪಿಂಜರಾ ಪೋಲ್‌ಗೆ ಕಳುಹಿಸಲು ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.

-ಕೆ.ಪಿ. ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ