ಬಿ.ರಾಮಪ್ರಸಾದ್ ಗಾಂಧಿ
ಸುಮಾರು ವರ್ಷಗಳ ಹಿಂದೆ ಇಲ್ಲಿಯೇ ತಹಶೀಲ್ದಾರ, ಉಪವಿಭಾಗಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದರು. ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿ, ಸರ್ವೆ ಕಚೇರಿ ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರವಾದ ನಂತರ ಇಲ್ಲಿಯ ಕೆಲವೊಂದು ಕೋಣೆಗಳಲ್ಲಿ ಸುಮಾರು ವರ್ಷಗಳಿಂದ ಕೇವಲ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕರು, ಪಟ್ಟಣದ ಗ್ರಾಮ ಲೆಕ್ಕಿಗರು ಮತ್ತು ಆಧಾರ್ ನೋಂದಣಿ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಕಟ್ಟಡದ ಆವರಣದಲ್ಲಿ ಅಂದರೆ 10 ಮೀಟರ್ ದೂರದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಸಹ ಕಾರ್ಯ ನಿರ್ವಹಿಸುತ್ತಲಿದೆ. ಆದರೆ ಇಲ್ಲಿಯ ಕೋಣೆಗಳ ಬಾಗಿಲು ಬಳಿ ಪ್ರತಿದಿನ ರಾತ್ರಿ ಮದ್ಯಪಾನ ಪಾರ್ಟಿ ಜೋರಾಗಿ ನಡೆಯುತ್ತವೆ. ಬೆಳಿಗ್ಗೆ ಸಿಬ್ಬಂದಿ ಕಚೇರಿಗೆ ಬಂದರೆ ಮದ್ಯದ ಬಾಟಲ್‌ಗಳು, ಕುರ್‌ಕುರೆ ಖಾಲಿ ಪ್ಯಾಕೇಟ್‌ಗಳು, ನೀರಿನ ಬಾಟಲ್, ಕಸ ಕಡ್ಡಿ ತುಂಬಿರುತ್ತದೆ. ಮಲ-ಮೂತ್ರ ಸಹ ಆಗಾಗ ಕಾಣಿಸುತ್ತದೆ. ಇತರ ಅನೈತಿಕ ಚಟುವಟಿಕೆಗಳು ಸಹ ನಡೆಯುತ್ತವೆ ಎಂದು ಕಂಡ ಜನರು ಹೇಳುತ್ತಾರೆ.ಪ್ರತಿದಿನ ಕಂದಾಯ ಸಿಬ್ಬಂದಿ ಬೆಳಗ್ಗೆ ಬಂದ ಕೂಡಲೇ ಮೂಗು ಮುಚ್ಚಿಕೊಂಡು ತಾವೇ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬೀಗ ತೆಗೆದು ಒಳಗೆ ಹೋಗಿ ಕೂತು ಕೆಲಸ ಮಾಡಬೇಕು. ಇದು ಪ್ರತಿ ನಿತ್ಯ ಸರ್ಕಾರಿ ಕೆಲಸದ ಜೊತೆ ಹೆಚ್ಚುವರಿ ಕೆಲಸ ಮಾಡಬೇಕಿದೆ.
ಪಟ್ಟಣದ ಹಳೆ ತಾಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ನಮ್ಮ ಗಮನಕ್ಕೆ ಬಂದಿಲ್ಲ. ಗಮನ ಹರಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುತ್ತೇನೆ ಎನ್ನುತ್ತಾರೆ ತಹಶೀಲ್ದಾರ್ ಬಿ.ವಿ.ಗಿರೀಶಬಾಬು.