ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಗುರು- ಶಿಷ್ಯರ ಸಂಬಂಧ ಇನ್ನಷ್ಟು ಬಲಗೊಳ್ಳಬೇಕಾದ್ದು ಈ ಕ್ಷಣದ ಅಗತ್ಯ. ಈ ಉದ್ದೇಶದಿಂದ ಶಿಷ್ಯರು, ಭಕ್ತರು ನೇರವಾಗಿ ಪಾಲ್ಗೊಳ್ಳುವ ಹಲವಾರು ಕಾರ್ಯಕ್ರಮಗಳನ್ನು ಸಂಸ್ಥಾನದಿಂದ ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ರಾಮಚಂದ್ರಾಪುರ ಮಠದ ಶಂಕರಾಚಾರ್ಯ ರಾಘವೇಶ್ವರ ಭಾರತಿ ಮಹಾಸ್ವಾಮೀಜಿ ಕರೆ ನೀಡಿದರು.ಇಲ್ಲಿನ ಹವ್ಯಕ ಭವನದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು ಈ ಉದ್ದೇಶದಿಂದ ಡಿ. ೩೦ ರಿಂದ ಜನವರಿ ೯ರ ವರೆಗೆ ಗೋಕರ್ಣದ ಅಶೋಕೆಯ ಮೂಲ ಮಠದಲ್ಲಿ ಹಮ್ಮಿಕೊಳ್ಳಲಾಗಿರುವ ಅತಿರುದ್ರ ಅಭಿಷೇಕ ಸಾಮೂಹಿಕ ರುದ್ರಪಠಣ ಕಾರ್ಯಕ್ರಮದಲ್ಲಿ ಎಲ್ಲ ಸದ್ಭಕ್ತರೂ ಪಾಲ್ಗೊಳ್ಳುವ ಮೂಲಕ ಕೃತಾರ್ಥರಾಗಬೇಕು ಎಂದರು. ಜ. 9ರಂದು ಎಲ್ಲ ಶಿಷ್ಯ ಭಕ್ತರು ಸೇರಿ ಮೂಲ ಮಠದಲ್ಲಿ ಪ್ರಾರ್ಥನೆ ಸಲ್ಲಿಸೋಣ ಎಂದರು.
ಭಕ್ತರು ಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕು. ಕೇವಲ ಮಂತ್ರಾಕ್ಷತೆಯನ್ನಷ್ಟೇ ಸ್ವೀಕರಿಸಿದರೆ ಸಾಲದು. ಶ್ರೀರಾಮನ ಪೂಜೆ, ಗುರು ದರ್ಶನ ಮತ್ತು ಮಂತ್ರಾಕ್ಷತೆಯ ಮೂಲಕ ಇಚ್ಛಿತ ಫಲವನ್ನು ಪಡೆಯಬಹುದು ಎಂದು ನುಡಿದರು.ಇದಕ್ಕೂ ಮುನ್ನ ಶುಕ್ರವಾರ ಮುಂಜಾನೆ ಆಗಮಿಸಿದ ಶ್ರೀಗಳನ್ನು ಸ್ವಾಗತಿಸಿ, ಧೂಳಿ ಪೂಜೆ ನೆರವೇರಿಸಿದ ಬಳಿಕ ಶ್ರೀರಾಮ ಪೂಜೆಯನ್ನು ರಾಘವೇಶ್ವರ ಭಾರತೀ ಸ್ವಾಮೀಜಿಗಳು ನೆರವೇರಿಸಿದರು. ಭಕ್ತರು, ಶಿಷ್ಯರು ಫಲ ಸಮರ್ಪಿಸಿದರು. ಶ್ರೀಗಳು ಫಲ ಮಂತ್ರಾಕ್ಷತೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ವಲಯದ ಸಭೆ ಶ್ರೀಗಳ ಸನ್ನಿಧಿಯಲ್ಲಿ ನಡೆಯಿತು. ಮಠದ ವಿವಿಧ ಯೋಜನೆಗಳ ಕುರಿತು ವಿವರಗಳನ್ನು ಮಠದ ಹವ್ಯಕ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ನೀಡಿದರು.ಸ್ವರ್ಣ ಪಾದುಕೆ ಕುರಿತಂತೆ ಭಾಸ್ಕರ್ ಹೆಗಡೆ ಅವರು ಸವಿಸ್ತಾರವಾಗಿ ವಿವರಿಸಿದರಲ್ಲದೇ ಸ್ವರ್ಣ ಪಾದುಕೆಯ ಕಾಣಿಕೆ ನೇರವಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೇ ಸೇರಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸ್ವರ್ಣಪಾದುಕೆ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು. ಗವ್ಯೋತ್ಪನ್ನದ ಮಹತ್ವ ಹಾಗೂ ಪ್ರಯೋಜನ ಕುರಿತು ದತ್ತಾತ್ರೇಯ ಭಟ್ಟ ವಿವರಿಸಿದರು.
ಹವ್ಯಕ ಮಹಾಮಂಡಳದ ವಲಯ ಅಧ್ಯಕ್ಷ ಆರ್.ಜಿ. ಭಟ್, ಪ್ರಧಾನ ಕಾರ್ಯದರ್ಶಿ ಗಜಾನನ ಭಾಗವತ ಹುಬ್ಬಳ್ಳಿ- ಧಾರವಾಡ- ಹಾವೇರಿ ವಲಯದ ಕಾರ್ಯ ಚಟುವಟಿಕೆ ಬಗ್ಗೆ ವಿವರಿಸಿದರು. ಹವ್ಯಕ ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್, ಭಾಸ್ಕರ ಹೆಗಡೆ, ಹವ್ಯಕ ಮಂಡಳದ ಖಜಾಂಚಿ ಜಿ.ಪಿ. ನಾಗರಾಜ ಯಲ್ಲಾಪುರದ ಪ್ರಮೋದ ಹೆಗಡೆ, ಮೊದಲಾದವರು ಉಪಸ್ಥಿತರಿದ್ದರು.