ಕನ್ನಡಪ್ರಭ ವಾರ್ತೆ ಮೈಸೂರು
ಗುರು ಪ್ರತಿಯೊಬ್ಬರಿಗೂ ಸರಿಯಾದ ದಾರಿ ತೋರಿಸುವ ವ್ಯಕ್ತಿ. ಕತ್ತಲಿನಿಂದ ಬೆಳಕಿನೊಡನೆ ಕೊಂಡೊಯ್ಯುವನೇ ಗುರು ಎಂದು ಶ್ರೀ ಸವಿತಾನಂದ ಸ್ವಾಮೀಜಿ ತಿಳಿಸಿದರು.ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದಲ್ಲಿ ಜೈ ಭೀಮ್ ಜನಸ್ಪಂದನ ವೇದಿಕೆಯು ಭಾನುವಾರ ಆಯೋಜಿಸಿದ್ದ ಗುರುಪೂರ್ಣಿಮೆಯಲ್ಲಿ ಮಾತನಾಡಿದ ಅವರು, ಗುರುಗಳು ತಮ್ಮ ಪಾಠ ಮತ್ತು ಬುದ್ಧಿವಂತಿಕೆಯಿಂದ ಜಗತ್ತನ್ನು ನಿರಂತರವಾಗಿ ಬೆಳಗಿಸುವ ವ್ಯಕ್ತಿಯಾಗಿದ್ದಾನೆ ಎಂದರು.
ಗುರು ಓರ್ವ ವ್ಯಕ್ತಿಗೆ ಸದಾಚಾರದ ಮಾರ್ಗವನ್ನು ಅನುಸರಿಸಲು ಯಾವಾಗಲೂ ಪ್ರೋತ್ಸಾಹಿಸುತ್ತಾನೆ ಹಾಗೂ ಜೀವನದ ಪ್ರತಿಯೊಂದು ಪಾಠವನ್ನು ನಮಗೆ ಕಲಿಸುತ್ತಾನೆ. ಅವನ ಸೂಚನೆಯಿಲ್ಲದೆ, ನಮ್ಮ ದಾರಿಯಲ್ಲಿ ಬರುವ ಕತ್ತಲೆಯನ್ನು ಹೋಗಲಾಡಿಸುವುದು ಕಷ್ಟ. ಇಲ್ಲಿ ಕತ್ತಲೆಯು ಗೊಂದಲ ಮತ್ತು ಬುದ್ಧಿವಂತಿಕೆಯ ಕೊರತೆಯನ್ನು ಪ್ರತಿನಿಧಿಸುತ್ತದೆ. ಕತ್ತಲಿನಿಂದ ಬೆಳಕಿನೊಡನೆ ಕೊಂಡೊಯ್ಯುವನೇ ಗುರು ಎಂದರು.ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜ್, ಹಿರಿಯರಾದ ಎಂ. ಸ್ವಾಮಿ, ಪುಟ್ಟಸ್ವಾಮಿ, ಶಿವಣ್ಣ, ಮಾರ್ತಾಂಡಪ್ಪ, ಮರಿಯಪ್ಪ, ಸತೀಶ್ ಕುಮಾರ್, ಜಗದೀಶ್, ಕಾಶಿನಾಥ್, ಸಾಗರ್, ಶಿವಕುಮಾರ್, ಕಿರಣ್ ಮೊದಲಾದವರು ಇದ್ದರು.
ಗುರುವಿನ ಅನುಗ್ರಹ ಮುಖ್ಯ: ನಟರಾಜ್ ಜೋಯಿಸ್ಕನ್ನಡಪ್ರಭ ವಾರ್ತೆ ಮೈಸೂರು
ಮಾನವ ಜನ್ಮವನ್ನು ವ್ಯರ್ಥ ಮಾಡಿಕೊಳ್ಳದೆ ಸದುಪಯೋಗಪಡಿಸಿಕೊಳ್ಳಬೇಕಾದರೆ ಗುರುವಿನ ಅನುಗ್ರಹಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಿ.ಆರ್. ನಟರಾಜ್ ಜೋಯಿಸ್ ತಿಳಿಸಿದರು.ನಗರದ ರಾಮಾನುಜ ರಸ್ತೆಯಲ್ಲಿ ಶ್ರೀ ಸದ್ಗುರು ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುಗಳನ್ನು ಸ್ಮರಿಸುತ್ತಾ ಶ್ರೀ ಸಾಯಿ ಸದ್ಗುರು ಸೇವಾಶ್ರಮ ಹಾಗೂ ಅರಿವು ಸಂಸ್ಥೆ ವತಿಯಿಂದ ಶ್ರೀ ಸತ್ಯಸಾಯಿ ವ್ರತ ಮಾಲಾ ಪುಸ್ತಕವನ್ನು ಬಿಡುಗಡೆಗೊಳಿಸಿ, ಭಕ್ತಾದಿಗಳಿಗೆ ವಿತರಿಸಿ ಅವರು ಮಾತನಾಡಿದರು.
ನಮ್ಮಲ್ಲಿರುವ ಚಂಚಲ ಬುದ್ಧಿ ಹೋಗಲಾಡಿಸಲು ಗುರುಗಳ ಧ್ಯಾನ ಮಾಡುತ್ತಾ, ಆತ್ಮ ಚಿಂತನೆಯನ್ನು ಮಾಡಬೇಕು. ನಮ್ಮ ಸಂಸ್ಕೃತಿಯಲ್ಲಿ ಗುರುವಿನ ಸಂಪ್ರದಾಯಕ್ಕೆ ವಿಶಿಷ್ಟ ಸ್ಥಾನ ಇದೆ. ಗುರು ವ್ಯಕ್ತಿ ಅಲ್ಲ ಶಕ್ತಿ. ಗುರುವಿನ ಸನ್ಮಾರ್ಗದಲ್ಲಿ ನಡೆದು ಉತ್ತಮ ಸಮಾಜ ನಿರ್ಮಿಸಬೇಕು ಎಂದರುಸಮಾಜ ಸೇವಕ ಕೆ. ರಘುರಾಂ ಮಾತನಾಡಿ, ಭಾರತ ಸಂಸ್ಕೃತಿಯಲ್ಲಿ ಗುರು ಶಿಷ್ಯ ಪರಂಪರೆ ಮಹತ್ವವನ್ನು ಪಡೆದುಕೊಂಡಿದೆ. ಗುರುಗಳಿಗೆ ಗೌರವ, ಪೂಜ್ಯ ಭಾವನೆ ಇತ್ತು. ಜೊತೆಗೆ ಗುರುವನ್ನು ದೇವರ ಸಮಾನ ಎಂದು ಪೂಜಿಸಿದ್ದ ಸಂಸ್ಕೃತಿ ನಮ್ಮದಾಗಿದೆ. ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಈ ಯುವಕರ ಕಾರ್ಯ ಮಹತ್ವವಾಗಿದೆ ಎಂದು ಹೇಳಿದರು.
ತಂದೆ- ತಾಯಿ ನಮ್ಮನ್ನು ಹೊತ್ತು ಹೆತ್ತು ಜನ್ಮ ಬದುಕಿಸಿದರೆ, ಮಾನವ ಜನ್ಮ ಸಾರ್ಥಕತೆ ಮಾಡಿಕೊಳ್ಳುಲು ಸದ್ಗುರುಗಳು ನಮಗೆ ಮೋಕ್ಷದ ದಾರಿಯನ್ನು ತೋರಿಸಿದವರು. ಆಧ್ಯಾತ್ಮಿಕತೆಯಲ್ಲಿ ಕಾಲ ಕಳೆದರೆ ಅದರಲ್ಲಿ ಸಿಗೋ ನೆಮ್ಮದಿಯೇ ಬೇರೆ. ಶಾಸ್ತ್ರ ಪ್ರವಚನ ಕೇಳುವುದರಿಂದ ನಮ್ಮ ಮನಸ್ಸು ದೇವನ ಕಡೆಗೆ ಒಲಿಯುತ್ತದೆ. ಆಡಂಬರದ ಜೀವನ ಬಿಟ್ಟು ಸಂತ ಶರಣರ ದರ್ಶನ ಪಡೆದು ಪಾರಮಾರ್ತದಲ್ಲಿ ಪರಮಾನಂದ ಸವಿಯಬೇಕು ಎಂದರು.ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಸತ್ಯನಾರಾಯಣ್, ರಾಜಕುಮಾರ್, ಯದುಕುಮಾರ್, ಎಸ್.ಎನ್. ರಾಜೇಶ್ ಮೊದಲಾದವರು ಇದ್ದರು.