ಮನದ ಅಂಧಕಾರ ಹೋಗಲಾಡಿಸಲು ಗುರು ಅವಶ್ಯ

KannadaprabhaNewsNetwork |  
Published : Jul 23, 2024, 12:33 AM IST
ಗದಗ ನಗರದ ಆದಿಶಕ್ತಿ ನಗರದ ಶಿವಶರಣೆ ಡಾ. ನೀಲಮ್ಮ ತಾಯಿ ಅಮ್ಮನವರ ಅಧ್ಯಾತ್ಮ ವಿದ್ಯಾಶ್ರಮದಲ್ಲಿ ಗುರುಪೂರ್ಣಿಮೆ ಹಾಗೂ ಮೌನ ಅನುಷ್ಠಾನ ಮಂಗಳ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಗುರು ಎಲ್ಲರ ಬದುಕಿನಲ್ಲಿ ಬೆಳಕನ್ನು ನೀಡಬಲ್ಲ ಒಂದು ಬಹುದೊಡ್ಡ ಶಕ್ತಿ

ಗದಗ: ಮನದ ಅಂಧಕಾರ ಹೋಗಲಾಡಿಸಲು ಗುರು ಅವಶ್ಯ. ಗುರುವಿನ ಮಾರ್ಗದರ್ಶನವಿಲ್ಲದೇ ಯಾರೂ ಮುಂದೆ ಬರಲು ಸಾಧ್ಯವಿಲ್ಲ ಎಂದು ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಹೇಳಿದರು.

ಅವರು ಗದಗ ನಗರದ ಆದಿಶಕ್ತಿ ನಗರದ ಶಿವಶರಣೆ ಡಾ. ನೀಲಮ್ಮ ತಾಯಿ ಅಮ್ಮನವರ ಅಧ್ಯಾತ್ಮ ವಿದ್ಯಾಶ್ರಮದಲ್ಲಿ ಗುರುಪೂರ್ಣಿಮೆ ಹಾಗೂ ಮೌನ ಅನುಷ್ಠಾನ ಮಂಗಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರು ಎಲ್ಲರ ಬದುಕಿನಲ್ಲಿ ಬೆಳಕನ್ನು ನೀಡಬಲ್ಲ ಒಂದು ಬಹುದೊಡ್ಡ ಶಕ್ತಿ. ಅದು ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಯಾವುದೇ ರಂಗದ ಮಾರ್ಗ ತೋರುವ ಗುರುವಾಗಿರಬಹುದು ಎಂದು ಹೇಳಿದರು.

ಮನುಷ್ಯ ಇಂದು ಎಲ್ಲವನ್ನು ಪಡೆದಿದ್ದಾನೆ, ಆದರೆ ಮನುಷ್ಯನಾಗಿ ಬದುಕುವ ಮೌಲ್ಯ ಕಳೆದುಕೊಳ್ಳುತ್ತ ಸಾಗಿದ್ದಾನೆ. ಇಂತಹ ಅಧ್ಯಾತ್ಮ ಹಿನ್ನೆಲೆ ಇರುವ ಗುರುವಿನ ಕೃಪೆ, ಮಾರ್ಗದರ್ಶನದಿಂದ ಮನದ ಅಂಧಕಾರವನ್ನು ಹೋಗಲಾಡಿಸಲು, ಸಚ್ಚಾರಿತ್ರ್ಯವನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಉಚ್ಚ ನ್ಯಾಯಲಯದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್ ಮಾತನಾಡಿ, ಇಂದಿನ ಯುವ ಜನಾಂಗದ ಚಿತ್ತ ಯಾವ ಕಡೆ ಸಾಗುತ್ತದೆ ಎನ್ನುವುದರ ಬಗ್ಗೆ ಹಿರಿಯರು ವಿಚಾರ ಮಾಡಬೇಕಾಗಿದೆ. ಇಂದು ಬಹಳಷ್ಟು ಅವಕಾಶಗಳ ಮಧ್ಯೆ ವ್ಯಸನಿಗಳಾಗುತ್ತಿರುವುದು ದುರಂತವಾಗಿದೆ. ಹಾಗಾಗಿ ಗುರುವಿನ ಮಹತ್ವವನ್ನು ಅರಿತು ಬದುಕಿನಲ್ಲಿ ಅರ್ಥಪೂರ್ಣ ಜೀವನ ಮಾರ್ಗವನ್ನು ಅನುಸರಿಸುವುದು ಎಲ್ಲರ ಕರ್ತವ್ಯವಾಗಬೇಕು ಎಂದರು.

ಜಿಲ್ಲಾ ಕ್ಷಯರೋಗ ವಿಭಾಗದ ಅಧಿಕಾರಿ ಡಾ. ಅರುಂಧತಿ ಕುಲಕರ್ಣಿ ಮಾತನಾಡಿ, ಇಂದು ಎಲ್ಲರೂ ಜೀವನಕ್ಕೆ ಸನ್ಮಾರ್ಗವನ್ನು ಅನುಸರಿಸಬೇಕು. ಅದರಲ್ಲೂ ವಿಶೇಷವಾಗಿ ಆರೋಗ್ಯದ ಕಡೆಗೆ ಹೆಚ್ಚು ಮಹಿಳೆಯರು ಗಮನಹರಿಸಬೇಕು. ಎಲ್ಲ ಭಾಗ್ಯಗಳಿಗಿಂತಲೂ ಮನುಷ್ಯನಿಗೆ ಆರೋಗ್ಯ ಭಾಗ್ಯ ಮುಖ್ಯ. ಹಾಗಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಮೇಲು-ಕೀಳು ಎನ್ನದೆ ಸಮಾನ ಮನಸ್ಥಿತಿಯಿಂದ ಪರಸ್ಪರ ಗೌರವ ಆದರಗಳಿಂದ ಬದುಕುವುದು ಅವಶ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ 11 ದಿನಗಳ ಕಾಲ ನಿರಾಹಾರಿಗಳಾಗಿ ಮೌನ ಅನುಷ್ಠಾನಗೊಂಡ ಶರಣೆ ಮೈತ್ರಾದೇವಿ ಅಮ್ಮನವರು, ಭಗವಂತನ ಪಯಣ ಅದು ಆತ್ಮ ಸಾಕ್ಷಾತ್ಕಾರದ ಮಾರ್ಗವಾಗಿದೆ. ಮೌನ ಮನಸ್ಸಿನ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಲೌಕಿಕ ಜಂಜಡದಲ್ಲಿ ಕಳೆದುಹೋಗದೆ, ಪಾರಮಾರ್ಥಿಕ ಮಾರ್ಗ ಅವಶ್ಯ. ಗುರು ಸರ್ವವನ್ನು ಕಾಯುವ ಮಹಾಶಕ್ತಿ ಎಂದರು.

ಸಾನ್ನಿಧ್ಯ ವಹಿಸಿದ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು ಗುರುವಿನ ಮಹತ್ವವನ್ನು ಕುರಿತು ಮಾತನಾಡಿದರು. ಶಿವಶರಣೆ ಡಾ. ನೀಲಮ್ಮ ತಾಯಿ ಅಮ್ಮನವರು ಅಧ್ಯಕ್ಷತೆ ವಹಿಸಿದ್ದರು. ಎಸ್.ಪಿ. ದೊಡ್ಡಣ್ಣವರ ಪ್ರಾರ್ಥಿಸಿದರು. ಶಾರದಾ ಕಾತರ್ಕಿ ಸ್ವಾಗತಿಸಿದರು. ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು. ಮಲ್ಲನಗೌಡ ಪರಡ್ಡಿ, ಹೇಮಗಿರಿ ಶಾಸ್ತ್ರಿಗಳು, ಹುಲಿ ಆಚಾರ್ಯರು, ಬಸಣ್ಣ ಸೊಲ್ಲಾಪುರದ ಭಕ್ತರು, ಐ.ಬಿ. ಬೆನಕೊಪ್ಪ, ರೇಷ್ಮೆ ಬೆಂಗಳೂರು, ಬಿ.ಬಿ. ಹೂಗಾರ, ಲಕ್ಷ್ಮೀದೇವಿ ಮುಳುಗುಂದ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ