ಗುರು ಪರಂಪರೆ ಪಾಲಿಸಲು ವಿಖ್ಯಾತಾನಂದ ಶ್ರೀ ಕರೆ

KannadaprabhaNewsNetwork |  
Published : Aug 19, 2024, 12:50 AM IST
 18ಕೆಡಿವಿಜಿ1-ದಾವಣಗೆರೆ ವಿನೋಬ ನಗರದಲ್ಲಿ ಭಾನುವಾರ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ನೂತನವಾಗಿ ನಿರ್ಮಿಸಿರುವ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು, ಸಮಾಜದ ಗಣ್ಯರು, ದೂಡಾ ಅಧ್ಯಕ್ಷರು.  | Kannada Prabha

ಸಾರಾಂಶ

ದಾವಣಗೆರೆ ವಿನೋಬ ನಗರದಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ನೂತನವಾಗಿ ನಿರ್ಮಿಸಿರುವ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು, ಸಮಾಜದ ಗಣ್ಯರು, ದೂಡಾ ಅಧ್ಯಕ್ಷರು ಭಾಗಿಯಾಗಿದ್ದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಆರ್ಯ ಈಡಿಗ ಸಮಾಜದ ಸಂಸ್ಕೃತಿ, ಗುರು ಪರಂಪರೆಯನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ನಾರಾಯಣ ಗುರುಗಳ ತತ್ವ, ಸಿದ್ಧಾಂತದಡಿ ಸಾಗೋಣ ಎಂದು ಸೋಲೂರು ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕರೆ ನೀಡಿದರು.

ಇಲ್ಲಿನ ವಿನೋಬ ನಗರದಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ನೂತನವಾಗಿ ನಿರ್ಮಿಸಿರುವ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆರ್ಯ ಈಡಿಗರು ಸಂಸ್ಕೃತಿ ಪಥದಲ್ಲಿ ಸಾಗುವ ಜೊತೆಗೆ ಸಮಾಜದ ಆದರ್ಶ, ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡದೇ, ಸಂಸ್ಕೃತಿ ಕಲಿಸಿ, ಸಮಾಜಕ್ಕೆ ಕೊಡುಗೆ ನೀಡಬೇಕು. ಸಮಾಜದಿಂದ ನಮಗೆ ಏನು ಬಂದಿದೆ ಎನ್ನದೇ, ಸಮಾಜಕ್ಕೆ ನಾವೇನು ಕೊಡುಗೆ ನೀಡಿದ್ದೇವೆಂಬ ಚಿಂತನೆಯನ್ನು ಬಾಂಧವರು ಮಾಡಬೇಕು ಎಂದು ತಿಳಿಸಿದರು. ಸಮಾಜದ ಬಗ್ಗೆ ಸದಾ ಕಾಳಜಿ ಇರಬೇಕು. ಆದರೆ, ಅಂತಹ ಮನೋಭಾವ ಬಹುತೇಕರಲ್ಲಿ ಕಂಡು ಬರದೇ ಇರುವುದು ವಿಷಾದದ ಸಂಗತಿ. ಕಾಣದ ದೇವರ ಪೂಜೆ, ಪುರಸ್ಕಾರ ಮಾಡುವಂತೆ ಹಾಸ್ಟೆಲ್‌ಗಳಲ್ಲಿ ಜನ್ಮ ದಿನ, ವಿವಾಹ ವಾರ್ಷಿಕೋತ್ಸವ ಸೇರಿ ಇತರೆ ಕಾರ್ಯಕ್ರಮಗಳ ವೇಳೆ ಹಾಸ್ಟೆಲ್‌ ಮಕ್ಕಳಿಗೆ ಒಂದು ಹೊತ್ತಿನ ಅನ್ನದಾನದ ವ್ಯವಸ್ಥೆ ಮಾಡಿ, ನೇರವಾಗಿ. ದಾವಣಗೆರೆ ಸಂಘದಿಂದ ಅಭ್ಯುದಯ ಕೆಲಸ ಆಗಲಿ. ಸುಸಂಸ್ಕೃತ ಸಮಾಜವಾಗಲಿ ಎಂದು ಕಿವಿಮಾತು ಹೇಳಿದರು.

ರಾಜ್ಯದ ವಿವಿಧ ಭಾಗಗಳ ಆರ್ಯ ಈಡಿಗ ವಿದ್ಯಾರ್ಥಿಗಳಿಗೆ ಕಾರ್ಕಳದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯದಲ್ಲಿ ಉಚಿತ ಶಿಕ್ಷಣ, ವಸತಿ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆ ಸೇರಿ ಸುತ್ತಮುತ್ತಲಿನ ಜಿಲ್ಲೆಗಳ ಆರ್ಯ ಈಡಿಗ ಸಮುದಾಯದ ಬಡ ಪಾಲಕರು ತಮ್ಮ ಮಕ್ಕಳನ್ನು ಕಾರ್ಕಳದ ವಿದ್ಯಾರ್ಥಿ ನಿಲಯಕ್ಕೆ ಕಳಿಸಿ ಕೊಡಿ. ಅಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ವ್ಯವಸ್ಥೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಸ್ವಾಮೀಜಿ ಭರವಸೆ ನೀಡಿದರು.

ಚಿತ್ರದುರ್ಗ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಚ್.ಜೀವನ್ ಮಾತನಾಡಿ, ಜಿಲ್ಲಾ ಆರ್ಯ ಈಡಿಗರ ಸಂಘದಿಂದ ನೂತನ ವಿದ್ಯಾರ್ಥಿ ನಿಲಯ ಕಟ್ಟಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಖಾಲಿ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಭಾಭವನ ಆದಷ್ಟು ಬೇಗನೆ ಕಾರ್ಯಾರಂಭ ಮಾಡುವಂತಾಗಲಿ. ಈ ಮೂಲಕ ಸಮಾಜ ಸಂಘಟನೆಯೂ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಸಮಾಜದ ವಿಚಾರ ಬಂದಾಗ ಆರ್ಯ ಈಡಿಗ ಬಾಂಧವರು ಒಂದಾಗಿ ನಿಲ್ಲೋಣ ಎಂದು ಮನವಿ ಮಾಡಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮಾತನಾಡಿ, ದಾವಣಗೆರೆ ಸಂಘ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದು, ಹಾಸ್ಟೆಲ್ ಕಟ್ಟಡವೂ ಗುಣಮಟ್ಟದಿಂದ ಕೂಡಿದೆ. ರಾಜ್ಯದ 6ನೇ ದೊಡ್ಡ ಸಮಾಜವಾದ ಆರ್ಯ ಈಡಿಗ ಬಾಂಧವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಮನೋಭಾವದಿಂದ ಕೈಲಾದ ನೆರವು, ಸಹಾಯ ಮಾಡಿದರೆ ಸಮಾಜವು ಎಲ್ಲಾ ರೀತಿಯಲ್ಲೂ ಮುಂದೆ ಬರುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಅಭ್ಯುದಯವೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತೀರ್ಥಹಳ್ಳಿ ತಾ. ಗರ್ತಿಕೆರೆಯ ಶ್ರೀ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಎಚ್.ಶಂಕರ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಸಂಘದ ಸದಸ್ಯ ಎ.ನಾಗರಾಜ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಖಜಾಂಚಿ ಈ.ದೇವೇಂದ್ರಪ್ಪ, ಎಸ್‌.ಭರಮಪ್ಪ, ಟಿ.ಜೆ.ಜಯಪ್ರಕಾಶ, ಎಸ್.ವಿ.ರಾಮದಾಸ್‌, ಬಿ.ಸೋಮಶೇಖರ, ಈ.ಪದ್ಮನಾಭ, ಎಸ್.ಮಂಜಪ್ಪ, ಸುಮಾ ಭರಮಪ್ಪ, ಶಿವಕುಮಾರ, ಲಕ್ಷ್ಮಿ ತಿಮ್ಮಪ್ಪ ಇತರರು ಇದ್ದರು. ವೇದ ಪ್ರಾರ್ಥಿಸಿದರು.

ಬೆಂಗಳೂರಿನಲ್ಲಿ ಬೃಹತ್ ಆರ್ಯ ಈಡಿಗರ ಹಾಸ್ಟೆಲ್‌

ದಾವಣಗೆರೆ: ಇತರೆ ಸಮಾಜಗಳಿಗೆ ಹೋಲಿಸಿದರೆ ಆರ್ಯ ಈಡಿಗ ಸಮಾಜ ಹಿಂದುಳಿದಿದ್ದು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ, ರಾಜಕೀಯವಾಗಿ ಮುಖ್ಯವಾಹಿನಿಗೆ ತರಲು ಬಾಂಧವರು ಮುಂದಾಗಬೇಕು ಎಂದು ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ ಕರೆ ನೀಡಿದರು.

ಇಲ್ಲಿನ ವಿನೋಬ ನಗರದಲ್ಲಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, 75 ವರ್ಷದ ಹಿಂದೆ ಬೆಂಗಳೂರಿನಲ್ಲಿ ವೆಂಕಟಸ್ವಾಮೆಪ್ಪ, ಮುನಿಸ್ವಾಮೆಪ್ಪ ಮತ್ತಿತರರು ವಿದ್ಯಾರ್ಥಿ ನಿಲಯ ಕಟ್ಟಿಸಿ, ಉನ್ನತ ಶಿಕ್ಷಣ ಪಡೆಯಲು ಸಮಾಜಕ್ಕೆ ಅನುವು ಮಾಡಿಕೊಟ್ಟರು ಎಂದರು.

ಸಮಾಜದ ಹಾಸ್ಟೆಲ್‌ನಲ್ಲಿದ್ದು, ಓದಿ ಉನ್ನತ ಸ್ಥಾನ ಪಡೆದವರು ಸಮಾಜವನ್ನೂ ಬೆಳೆಸುವಂತಾಗಬೇಕು. ಸಮಾಜದ ಅಭಿವೃದ್ಧಿಯನ್ನು ಕರ್ತವ್ಯದಂತೆ ಮಾಡಬೇಕು. ಆ.20ರಂದು ನಾರಾಯಣ ಗುರುಗಳ ಜಯಂತಿಯಂದು ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಬೆಂಗಳೂರಿನಲ್ಲಿ ₹30 ಕೋಟಿ ವೆಚ್ಚದಲ್ಲಿ 400 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಸ್ಟೆಲ್ ನಿರ್ಮಿಸಲಾಗುವುದು. 200 ಬಾಲಕಿಯರಿಗೂ ಅ‍ವಕಾಶ ನೀಡಲಾಗುವುದು ಎಂದು ತಿಳಿಸಿದರು.

ಆರ್ಯ ಈಡಿಗ ಸಮಾಜದ ಜೊತೆಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸದಾ ಇರುತ್ತಾರೆ. ಈ ಸಮಾಜಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ. ಆರ್ಯ ಈಡಿಗ ಸಮಾಜಕ್ಕೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನ ನೀಡಲಾಗುವುದು.

ದಿನೇಶ ಕೆ.ಶೆಟ್ಟಿ, ಅಧ್ಯಕ್ಷರು, ದೂಡಾ

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ