ಕನ್ನಡಪ್ರಭ ವಾರ್ತೆ ಪುತ್ತೂರುಭಗವಾನ್ ವೇದವ್ಯಾಸರ ಜನ್ಮದಿನವನ್ನು ಗುರು ಪೂರ್ಣಮಿಯೆಂದು ಆಚರಿಸುತ್ತೇವೆ. ನಮ್ಮ ಅಜ್ಞಾನವನ್ನು ದೂರಗೊಳಿಸಲು ವ್ಯಾಸರನ್ನು ಅರಿಯಬೇಕು. ಈ ಪ್ರಪಂಚ ಹುಟ್ಟಿರುವುದು ಗುರು ಪರಂಪರೆಯಿಂದ. ಆದ್ದರಿಂದ ಗುರುವಿಲ್ಲದೆ ಈ ಪ್ರಪಂಚವೇ ಇಲ್ಲ. ಹೂವಿನ ಮೊಗ್ಗು ಅರಳಲು ಸೂರ್ಯನ ಕಿರಣ ಎಷ್ಟು ಮುಖ್ಯವೋ ಒಬ್ಬ ವಿದ್ಯಾರ್ಥಿಯ ಜೀವನ ಅರಳಲು ಕೂಡ ಗುರು ಅತ್ಯಗತ್ಯ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಕುಲಸಚಿವ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಧರ್ ಭಟ್ ಹೇಳಿದರು.ಅವರು ವಿವೇಕಾನಂದ ಮಹಾವಿದ್ಯಾಲಯ, ವಿವೇಕಾನಂದ ಸಂಶೋಧನಾ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರ ಹಾಗೂ ಐಕ್ಯೂಎಸಿ ಘಟಕ ಸಹಯೋಗದಲ್ಲಿ ನಡೆದ ಗುರು ಪೂರ್ಣಿಮಾ ಆಚರಣೆ ‘ಗುರುಸ್ಮರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ, ಸಮಾಜದಲ್ಲಿ ದೇವರನ್ನು ನಂಬುವವರು ಇದ್ದಾರೆ ನಂಬದವರು ಇದ್ದಾರೆ. ಆದರೆ ದೇವರು ಮತ್ತು ಮನುಷ್ಯರ ನಡುವೆ ಇರುವ ಒಂದೇ ಸಂಗತಿ ಎಂದರೆ ಗುರು. ನಮ್ಮೆಲ್ಲರ ಯಶಸ್ಸಿನ ಹಿಂದೆ ಗುರುಹಿರಿಯರ ಶ್ರಮ ಇದ್ದು ಬದುಕಿನ ಉನ್ನತಿಗೆ ಇವರ ಅನುಗ್ರಹ ಅಗತ್ಯ ಎಂದು ಹೇಳಿದರು.ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಮಾತನಾಡಿ, ನಾವಿಂದು ಆಧುನಿಕ ಶಿಕ್ಷಣದ ಧಾವಂತದಲ್ಲಿ ಗುರುಕುಲ ಶಿಕ್ಷಣವನ್ನು ಮರೆಯುತ್ತಿದ್ದೇವೆ. ಭಾರತೀಯ ಶಿಕ್ಷಣವನ್ನು ಅರಿಯ ಬೇಕಾದರೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯ ಜೊತೆಗೆ ನಮ್ಮ ದೇಶದ ಪರಂಪರೆಯ ಬಗ್ಗೆ ತಿಳಿದುಕೊಳ್ಳಬೇಕು. ಬದುಕಿಗೆ ಆಸರೆಯಾಗುವ ಗುರುವನ್ನು ಅನುದಿನ ಪೂಜಿಸಿ ಗುರು ಶಿಷ್ಯರ ಸಂಬಂಧವನ್ನು ಉಳಿಸಿ ಬೆಳೆಸಬೇಕಿದೆ ಎಂದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯಕ್, ಉಪಪ್ರಾಂಶುಪಾಲ ಪ್ರೊ. ಶ್ರೀ ಕೃಷ್ಣ ಗಣರಾಜ್ ಭಟ್, ಪರೀಕ್ಷಾಂಗ ಕುಲಸಚಿವ ಡಾ. ಎಚ್.ಜಿ. ಶ್ರೀಧರ್ ಉಪಸ್ಥಿತರಿದ್ದರು. ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಬಿ. ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀಶ ಕುಮಾರ್ ವಂದಿಸಿದರು. ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್. ನಿರೂಪಿಸಿದರು.