ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧ ರೊಟ್ಟಿ ಜಾತ್ರೆ ಆರಂಭಿಸಿದ್ದ ಶ್ರೀಗಳು
ನರಗುಂದ: ತಾಲೂಕಿನ ಶಿರೋಳ ತೋಂಟದಾರ್ಯ ಮಠ ಹಾಗೂ ಚಿಂಚಣಿ ಮಠದ (ಕನ್ನಡದ ಸ್ವಾಮೀಜಿ) ಗುರುಬಸವ ಮಹಾಸ್ವಾಮಿಗಳು 63ನೇ ವರ್ಷದಲ್ಲಿ ಭಾನುವಾರ ಬೆಳಗ್ಗೆ 7.30ಕ್ಕೆ ಬೆಳಗಾವಿ ಕೆಎಲ್‌ಇ ಆಸ್ಪತ್ರೆಯಲ್ಲಿ ನಿಧನರಾದರು.ಬಿಪಿ, ಶುಗರ್ ಹೆಚ್ಚಾದ ಹಿನ್ನೆಲೆಯಲ್ಲಿ ಶನಿವಾರ ಶ್ರೀಗಳನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಟ್ಟಾಧಿಕಾರ ವಹಿಸಿಕೊಂಡ ಆನಂತರ ಶಿರೋಳ ಶ್ರೀ ತೋಂಟದಾರ್ಯ ಮಠವು ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಿತು. ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದ ರೊಟ್ಟಿ ಜಾತ್ರೆ ಪ್ರಾರಂಭಿಸಿದ್ದು ಇದೇ ಶ್ರೀಗಳು. ಶ್ರೀಮಠವನ್ನು ಭಾವೈಕ್ಯತೆ ಕೇಂದ್ರವನ್ನಾಗಿ ಪರಿವರ್ತಿಸಿದರು. ಶ್ರೀಗಳ ಪುಸ್ತಕ ವ್ಯಾಮೋಹ, ಪುಸ್ತಕ ಓದುವ ಹವ್ಯಾಸವು ಶ್ರೀಗಳನ್ನು ಕನ್ನಡದ ಬಗ್ಗೆ ಹೆಚ್ಚು ಆಸಕ್ತಿ ಹೊಂದುವಂತೆ ಮಾಡಿತು. ಶ್ರೀಗಳ ಇಂತಹ ಕಾರ್ಯವನ್ನು ಗಮನಿಸಿದ ಜಗದ್ಗುರುಗಳು ಹಾಗೂ ಬೆಳಗಾವಿಯ ಶಿವಬಸವ ಮಹಾಸ್ವಾಮಿಗಳು ಗಡಿನಾಡ ಭಾಗದ ಚಿಕ್ಕೋಡಿ ತಾಲೂಕಿನ ಚಿಂಚಣಿಯ ಸಿದ್ದಸಂಸ್ಥಾನಮಠಕ್ಕೆ ಅಲ್ಲಮ ಪ್ರಭುಸ್ವಾಮಿಗಳಾಗಿ ಪೀಠಾಧಿಪತಿಗಳನ್ನಾಗಿ ನೇಮಕ ಮಾಡಿದರು.
ಚಿಂಚಣಿಮಠದ ಪೀಠಾಧಿಪತಿಗಳಾದ ಆನಂತರ ಇವರ ಕನ್ನಡ ಪ್ರೇಮವು ಗಡಿನಾಡ ಭಾಗದಲ್ಲಿ ಪ್ರಕಾಶಿಸಿತು. ಕನ್ನಡವನ್ನು ಬೆಳೆಸಿ ಪೋಷಿಸುವ ಒಂದು ಮಹಾತ್ಕಾರ್ಯವನ್ನು ಕೈಗೊಂಡು ಚಿಂಚಣಿ ಮಠದಿಂದ, ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯಿಂದ ಕನ್ನಡ ಜಾಗೃತಿ ಮೂಡಿಸುವ ಸುಮಾರು ೪೦ಕ್ಕಿಂತ ಹೆಚ್ಚು ಅಧಿಕ ಪುಸ್ತಕಗಳನ್ನು ಪ್ರಕಟಿಸಿದರು. ಹಲವಾರು ಕನ್ನಡ ಸಾಹಿತಿಗಳನ್ನು, ಲೇಖಕರನ್ನು ಮಠಕ್ಕೆ ಕರೆಯಿಸಿ ಕನ್ನಡದ ಮಹತ್ವ ಸಾರುವ ಕೆಲಸವನ್ನು ಮಾಡಿದರು. ಗಡಿನಾಡ ಭಾಗದಲ್ಲಿ ಕನ್ನಡವನ್ನು ಉಳಿಸುವ ಬೆಳೆಸುವ ಮಹತ್ಕಾರ್ಯವನ್ನು ಮಾಡಿದರು. ಅಷ್ಟೇ ಅಲ್ಲದೆ ಕನ್ನಡದ ತೇರನ್ನು ತಯಾರಿಸಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಎಳೆಯುತ್ತಾರೆ. ಅಷ್ಟೇ ಅಲ್ಲದೆ ಗೋವಾದಲ್ಲಿದ್ದ ಕನ್ನಡಿಗರ ಪರವಾಗಿ ಹೋರಾಟ ಮಾಡಿ ಅವರಿಗೆ ನೆಲೆ ಸಿಗುವಂತಹ ಕಾರ್ಯವನ್ನು ಶ್ರೀಗಳು ಮಾಡಿದ್ದಾರೆ.ಪೂರ್ವಾಶ್ರಮದಲ್ಲಿ ಶಂಕ್ರಯ್ಯ:
ಗದಗ ಜಿಲ್ಲೆ ಗಜೇಂದ್ರಗಡದ ಹಿರೇಮಠದ ಗುರುಲಿಂಗಯ್ಯ ಮತ್ತು ಬಸಮ್ಮನವರ ಉದರದಲ್ಲಿ ಶ್ರೀಗಳು ೨೨-೦೬-೧೯೬೧ರಂದು ಜನಿಸಿದರು. ಇವರಿಗೆ ಶಂಕರಯ್ಯ ಎಂಬ ನಾಮಕರಣ ಮಾಡಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಗಜೇಂದ್ರಗಡದಲ್ಲಿಯೇ ಮುಗಿಸಿ ವೈದಿಕ ಶಿಕ್ಷಣಕ್ಕಾಗಿ ಗದುಗಿನ ಶ್ರೀ ತೋಂಟದಾರ್ಯ ಮಠಕ್ಕೆ ಸೇರಿದರು. ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಆಶೀರ್ವಾದದಲ್ಲಿ ಶ್ರೀಮಠದಲ್ಲಿಯೇ ವೈದಿಕ ಶಿಕ್ಷಣವನ್ನು ಕಲಿಯಲು ಪ್ರಾರಂಭಿಸಿದರು. ಜಗದ್ಗುರುಗಳವರು ಶಂಕರಯ್ಯ ಅವರ ಕಾರ್ಯ ಚಟುವಟಿಕೆ ಗಮನಿಸಿ ಅವರನ್ನು ತಮ್ಮ ಆಪ್ತ ಶಿಷ್ಯನನ್ನಾಗಿ ಸ್ವೀಕರಿಸಿ, ''''ನಿನಗೆ ಓದುವ ಹವ್ಯಾಸ ಇದೆ, ನೀನು ಸ್ವಾಮಿಯಾದರೆ ಚೊಲೋ ಆಕೈತಿ, ಒಂದು ಮನಿ ಉದ್ಧಾರ ಮಾಡೋ ವೈದಿಕ ಸಂಸಾರಿಯಾಗುವುದಕ್ಕಿಂತ ಸಮಾಜ ಉದ್ಧಾರ ಮಾಡೋ ಸ್ವಾಮಿಯಾಗು, ನಾ ಹೇಳತೀನಿ ಅಂತ ಆಗಬೇಡ, ನಿನ್ನ ಮನಸ್ಸು ಒಪ್ಪಿದರೆ ಆಗು'''' ಎಂದು ಅವರನ್ನು ಸನ್ಯಾಸಿ ಮಾಡಬೇಕೆಂಬ ಮಹಾದಾಸೆಯನ್ನು ವ್ಯಕ್ತಪಡಿಸಿದರು. ಜಗದ್ಗುರುಗಳ ವಿಚಾರವನ್ನು ದೀರ್ಘವಾಗಿ ವಿಚಾರಿಸಿ ಸ್ವಾಮಿಯಾಗುವುದೇ ಸೂಕ್ತವೆಂದು ನಿರ್ಧರಿಸಿದರು. ಯಾದವಾಡದ ಹಿರಿಯ ಪಟ್ಟದೇವರಿಂದ ಕಾವಿ ಧಾರಣೆ ಮಾಡಿ ಶಂಕರ ದೇವರು ಎಂಬ ನಾಮಕರಣ ಮಾಡಲಾಯಿತು. ಜಗದ್ಗುರುಗಳೊಂದಿಗೆ ಪ್ರವಾಸ ಮಾಡುತ್ತಾ ಹಲವಾರು ಶಿವಾನುಭವ ಕಾರ್ಯಕ್ರಮಗಳಲ್ಲಿ ಪ್ರವಚನ ಮಾಡುತ್ತಾ ಜಗದ್ಗುರುಗಳ ಆಶಯದಂತೆ ಧಾರ್ಮಿಕ ವಿಚಾರಧಾರೆಗಳನ್ನು ಹಾಗೂ ಬಸವ ತತ್ವದ ವಿಚಾರಧಾರೆಗಳನ್ನು ಓದಿಕೊಂಡು ಪರಿಣತರಾದರು.ಶಿರೋಳದ ಶ್ರೀ ತೋಂಟದಾರ್ಯ ಶಾಖಾಮಠಕ್ಕೆ ಉತ್ತರಾಧಿಕಾರಿಗಳಾಗಿ ನೇಮಿಸಿ ಶಿರೋಳಕ್ಕೆ ಕಳುಹಿಸಿದರು. ಶಿರೋಳದಲ್ಲಿ ಭಕ್ತ ಸಮೂಹದೊಂದಿಗೆ ಶ್ರೀಮಠದ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡು ಶ್ರೀಮಠದಲ್ಲಿ ಪ್ರತಿವಾರ ಶಿವಾನುಭವ ಏರ್ಪಡಿಸಿ ಭಕ್ತ ಸಮೂಹದಲ್ಲಿ ಧಾರ್ಮಿಕ ಜಾಗೃತಿಯನ್ನಂಟು ಮಾಡಿದರು. ಜಗದ್ಗುರು ತೋಂಟದಾರ್ಯ ವಿದ್ಯಾಪೀಠದಿಂದ ಶಿರೋಳದಲ್ಲಿ ೧೯೮೪ರಲ್ಲಿ ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಗುರುಬಸವ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ಜಗದ್ಗುರುಗಳವರು ಶಂಕರದೇವರನ್ನು ೧೯೯೦ರಲ್ಲಿ ಶಿರೋಳದ ತೋಂಟದಾರ್ಯಮಠದ ಪೀಠಾಧಿಪತಿಯಾಗಿ ಪಟ್ಟಾಧಿಕಾರ ವಹಿಸಿಕೊಟ್ಟು ''''ಗುರುಬಸವ ಸ್ವಾಮಿಗಳು'''' ಎಂದು ನಾಮಕರಣ ಮಾಡಿದರು.
ಶ್ರೀಗಳು ಹಳೆಯ ಅಂಚೆ ಚೀಟಿ ಸಂಗ್ರಹ, ಹಳೆ ತಲೆಮಾರಿನ ಸಾಮಗ್ರಿಗಳ ಸಂಗ್ರಹ ಮತ್ತು ಕರಕುಶಲ ಕಲೆಯನ್ನು ಹೊಂದಿದ್ದರು. ಅದರಿಂದ ಅವರು ತಾವೇ ಸ್ವತಃ ಚಿತ್ರಿಸಿದ ಹಲವಾರು ಕೈಬರಹಗಳನ್ನು ಒಳಗೊಂಡ ಕಲಾಕೃತಿಗಳ ಅಲ್ಲಮನ ಚಿತ್ತಾರ ಪುಸ್ತಕವನ್ನು ಮುದ್ರಿಸಿದ್ದಾರೆ. ಅಷ್ಟೇ ಅಲ್ಲದೆ ಶಿರೋಳ ತೋಂಟದಾರ್ಯಮಠ ಕುರಿತಾದ ನಮ್ಮೂರು-ನಮ್ಮಮಠ ಪುಸ್ತಕವನ್ನು ಬರೆದು ಪ್ರಕಟಗೊಳಿಸಿದ್ದಾರೆ.ನರಗುಂದ ಭಾಗದ ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸುವ ಮತ್ತು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯುವ ಸಲುವಾಗಿ ಪಾದಯಾತ್ರೆಗಳನ್ನು ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಶ್ರೀಗಳ ಅಗಲಿಕೆಯಿಂದ ಶಿರೋಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತ ಸಮೂಹವು ಶೋಕ ಸಾಗರದಲ್ಲಿ ಮುಳುಗಿದೆ.