ರಾಮಾನುಜರು ಭಾರತವನ್ನು ಒಗ್ಗೂಡಿಸಿದ ಸಂತ

KannadaprabhaNewsNetwork |  
Published : May 25, 2025, 01:53 AM IST
60 | Kannada Prabha

ಸಾರಾಂಶ

ರಾಮಾನುಜರು ವರ್ಣಾಶ್ರಮಧರ್ಮ ವಿರೋಧಿಸದಿದ್ದರೂ, ಈ ನೆಲದ ಎಲ್ಲಾ ಜಾತಿ, ಮತ, ಲಿಂಗ, ವಯಸು, ಕಾಲಗಳ ಎಲ್ಲರಿಗೂ ಮೋಕ್ಷ ಪಡೆಯುವ ಅರ್ಹತೆ ಇದೆ ಎಂದು ಸಮಾನತೆಯ ಸಿದ್ದಾಂತ ಸಾರಿದರು

ಕನ್ನಡಪ್ರಭ ವಾರ್ತೆ ಹುಣಸೂರುಎಲ್ಲಾ ಜಾತಿ, ಮತ, ಪಂಥ, ಕಾಲ, ಲಿಂಗಗಳನ್ನು ಮೀರಿ ಎಲ್ಲರೂ ಮೋಕ್ಷಕ್ಕೆ ಅರ್ಹರು ಎನ್ನುವ ನೀತಿಯೊಂದಿಗೆ ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಿಸಿದ ಶ್ರೀ ರಾಮಾನುಜಾಚಾರ್ಯರು ಭಾರತವನ್ನು ಒಗ್ಗೂಡಿಸಿದ ಸಂತರಾಗಿದ್ದಾರೆ ಎಂದು ಮುಕ್ತ ವಿವಿಯ ಡಾ. ಶಲ್ವಪಿಳ್ಳೆ ಅಯ್ಯಂಗಾರ್ ಅಭಿಪ್ರಾಯಪಟ್ಟರು.ಗುರುಬೂದಿ ಮಂಗಳಮಂಟಪದಲ್ಲಿ ಶನಿವಾರ ಅಖಿಲ ಕರ್ನಾಟಕ ಶೀ ವೈಷ್ಣವ ಮಹಾಸಭಾ ಮತ್ತು ತಾಲೂಕು ಶ್ರೀ ವೈಷ್ಣವ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿ ಅವರು ಮಾತನಾಡಿದರು.ರಾಮಾನುಜರು ವರ್ಣಾಶ್ರಮಧರ್ಮ ವಿರೋಧಿಸದಿದ್ದರೂ, ಈ ನೆಲದ ಎಲ್ಲಾ ಜಾತಿ, ಮತ, ಲಿಂಗ, ವಯಸು, ಕಾಲಗಳ ಎಲ್ಲರಿಗೂ ಮೋಕ್ಷ ಪಡೆಯುವ ಅರ್ಹತೆ ಇದೆ ಎಂದು ಸಮಾನತೆಯ ಸಿದ್ದಾಂತ ಸಾರಿದರು. ಮೇಲುಕೋಟೆಯಲ್ಲಿ ದಲಿತರ ಪ್ರವೇಶಕ್ಕೆ ಅವಕಾಶ ನೀಡುವ ಮೂಲಕ ಇತಿಹಾಸ ನಿರ್ಮಿಸಿದರು. ಅವರ ಕಾಲದಲ್ಲಿ 58ಕ್ಕೂ ಹೆಚ್ಚು ಜಾತಿಗಳ ಜನರಿಗೆ ದೀಕ್ಷಾ ಸಂಸ್ಕಾರ ನೀಡಿದರು. ಮೋಕ್ಷಕ್ಕೆ ದಾರಿ ಯಾವುದು ಎನ್ನುವ ಪ್ರಶ್ನೆ ಬಂದಾಗ ಭಕ್ತಿ ಮತ್ತು ಶರಣಾಗತಿಯೊಂದೇ ಮೋಕ್ಷಕ್ಕೆ ದಾರಿ ಎಂದು ಪ್ರತಿಪಾದಿಸಿದ್ದಾಗಿ ಅವರು ಹೇಳಿದರು.ಇದಕ್ಕೆ ಪೂರಕವಾಗಿ ದಾಸಶ್ರೇಷ್ಠ ಕನಕದಾಸರು ತಮ್ಮ ಕವನದಲ್ಲಿ ಎಲ್ಲರಿಗೂ ಅನುಕೂಲಕರ ಮತಯಾವುದಾದರೂ ಇದ್ದರೆ ಅದು ರಾಮಾನುಜ ಮತ ಎಂದು ಸಾರಿದರು ಎಂದರು. ಹುಣಸೂರು ಶ್ರೀವೈಷ್ಣವ ನೆಲೆಶ್ರೀ ರಾಮಾನುಜನರ ಅನುಯಾಯಿಗಳು ಹುಣಸೂರು, ಪಿರಿಯಾಪಟ್ಟಣ, ಸಾಲಿಗ್ರಾಮ, ಮಿರ್ಲೆ, ಮೈಸೂರು ಸಂಸ್ಥಾನದಲ್ಲೂ ಇದ್ದರು. ಹುಣಸೂರಿನ ಧರ್ಮಾಪುರ, ದೊಡ್ಡಹೆಜ್ಜೂರು, ಕಟ್ಟೆಮಳಲವಾಡಿ, ರತ್ನಪುರಿಯಲ್ಲಿನ ಶ್ರೀ ಆಂಜನೇಯಸ್ವಾಮಿ, ಚಲುವರಾಯಸ್ವಾಮಿ, ರಂಗನಾಥಸ್ವಾಮಿ ದೇವಾಲಯಗಳೇ ಇದಕ್ಕೆ ಸಾಕ್ಷಿ. ಇಂದು ಪ್ರತಿಹಳ್ಳಿಯಲ್ಲೂ ಹನುಮನ ಗುಡಿ ಇರುತ್ತದೆ. ಆಂಜನೇಯ ಶ್ರೀರಾಮನ ದಾಸ. ದಾಸ ಸಂಸ್ಕೃತಿಯ ಪ್ರತೀಕ ಹನುಮ. ರಾಮದಾಸರೂ ಕೂಡ ದಾಸಪರಂಪರೆಯ ಪ್ರೇರಕರಾಗಿ ಹನುಮನ ಗುಡಿಗಳನ್ನು ಸ್ಥಾಪಿಸಲು ಪ್ರೇರೇಪಿಸಿದರು. ಭಕ್ತಿಯ ಮೂಲಕ ಜ್ಞಾನಪ್ರಾಪ್ತಿಯಾಗುತ್ತದೆ. ಜ್ಞಾನ ವ್ಯಕ್ತಿಯ ವೈಯಕ್ತಿಕ ಭಕ್ತಿಯ ಪರಾಕಾಷ್ಠೆಯನ್ನು ತಿಳಿಸಿದರೂ, ಶರಣಾಗತಿಯಿಂದ ಮಾತ್ರ ಮೋಕ್ಷ ಸಾಧ್ಯ. ಹಾಗಾಗಿ ಎಲ್ಲರೂ ಭಗವಂತನ ದಾಸರಾಗಬೇಕು ಎಂದರು.ಮೇಲುಕೋಟೆ ಯದುಗಿರಿ ಯತಿರಾಜಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು ಆಶೀರ್ವಚನ ನೀಡಿ, ಯಾವ ಕಾಲಘಟ್ಟದಲ್ಲಿ ಕೆಲವರನುರೀ ಸಮಾಜ ನಿಕೃಷ್ಟವಾಗಿ ನೋಡುತ್ತಿತ್ತೋ ಅಂತಹವರಿಗೆ ದನಿಯಾಗಿ ಶ್ರೀ ರಾಮಾನುಜರು ನಿಂತರು. ಸಮತಾವಾದ, ಅಂತ್ಯೋದಯದಂತಹ ಪರಿಕಲ್ಪನೆಯನ್ನು ಒಂದು ಸಾವಿರ ವರ್ಷಗಳ ಹಿಂದೆಯೇ ಜಗತ್ತಿಗೆ ನೀಡಿದ್ದಾಗಿ ಹೇಳಿದರು.ಕಾರ್ಯಕ್ರಮದಲ್ಲಿ ಶ್ರೀವೈಷ್ಣವ ಮಹಾಸಭಾದ ರಾಜ್ಯಾಧ್ಯಕ್ಷ ರವಿ ನರಸಿಂಹನ್, ಜಿಲ್ಲಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷ ಎಚ್.ವಿ. ಫಾಲಾಕ್ಷ, ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ, ಹೊಳೆನರಸೀಪುರದ ಅಧ್ಯಕ್ಷ ಜಗನ್ನಾಥ, ಅಗಸ್ತ್ಯ ಕೋ ಆಪರೇಟಿವ್‌ ಬ್ಯಾಂಕ್‌ ಪಾರ್ಥಸಾರಥಿ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಭಾಸ್ಕರ್ ಭಟ್, ಮುಖಂಡರಾದ ಗೋಪಾಲ್, ರಂಗಾಚಾರ್ಯ, ಕುಮಾರ್, ಶ್ರೀಕಾಂತ್ ಕಶ್ಯಪ್, ಪ್ರೇಮ್‌ ಕುಮಾರ್, ಸೋಮಣ್ಣ, ಸುಗಂಧರಾಜ್, ಪ್ರಾಧ್ಯಾಪಕ ಲಕ್ಷ್ಮೀಕಾಂತ್, ಮುರಳೀಧರ್ ಮೊದಲಾದವರು ಇದ್ದರು.----------------------eom/mys/dnm/

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ