ಗುರುಕುಲ ಶಿಕ್ಷಣ ಪದ್ಧತಿ ಇಂದಿನ ಅವಶ್ಯ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಬ್ರಿಟಿಷ್ ಆಡಳಿತದಲ್ಲಿ ಲಾರ್ಡ್‌ ಮೆಕಾಲೆ ಜಾರಿಗೆ ತಂದಿರುವ ಶಿಕ್ಷಣದ ವ್ಯವಸ್ಥೆಯನ್ನು ಭಾರತೀಯರು ಮುಂದುವರೆಸಿಕೊಂಡು ಹೊಗುತ್ತಿರುವುದು ದುರಂತದ ಸಂಗತಿ. ಪ್ರಾಚೀನ ಸನಾತನ ಗುರುಕುಲದ ಶಿಕ್ಷಣ ಪದ್ಧತಿ ಇಂದಿನ ಮಕ್ಕಳಿಗೆ ಅತ್ಯ ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಕಾಶಿ ಜಗದ್ಗುರುಗಳು ಕಾಶ್ಮೀರದಿಂದ ರಾಮೇಶ್ವರದವರೆಗೆ ಶಾಖಾಮಠಗಳನ್ನು ತೆರೆದು ತಮ್ಮ ವ್ಯಾಪ್ತಿಯನ್ನು ದೇಶದಾದ್ಯಂತ ಪಸರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಕಾಶಿ ಡಾ. ಚಂದ್ರಶೇಖರ ಶಿವಾಚಾರ್ಯರು ತಮ್ಮ ವಾಸಕ್ಕಾಗಿ ಮಠ ನಿರ್ಮಾಣ ಮಾಡದೇ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಭಕ್ತಸಮೂಹಕ್ಕೆ ವಿಕಾಸ ನೀಡುವ ಪಾಠಶಾಲೆ ತೆರೆದು ಮಠದ ಅರ್ಥಕ್ಕೆ ಸ್ಫೂರ್ತಿ ನೀಡಿದ್ದಾರೆ ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.

ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಸಾಮೂಹಿಕ ಇಷ್ಠಲಿಂಗ ಮಹಾಪೂಜೆ, ಧರ್ಮ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬ್ರಿಟಿಷ್ ಆಡಳಿತದಲ್ಲಿ ಲಾರ್ಡ್‌ ಮೆಕಾಲೆ ಜಾರಿಗೆ ತಂದಿರುವ ಶಿಕ್ಷಣದ ವ್ಯವಸ್ಥೆಯನ್ನು ಭಾರತೀಯರು ಮುಂದುವರೆಸಿಕೊಂಡು ಹೊಗುತ್ತಿರುವುದು ದುರಂತದ ಸಂಗತಿ. ಪ್ರಾಚೀನ ಸನಾತನ ಗುರುಕುಲದ ಶಿಕ್ಷಣ ಪದ್ಧತಿ ಇಂದಿನ ಮಕ್ಕಳಿಗೆ ಅತ್ಯ ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಕಾಶಿ ಜಗದ್ಗುರುಗಳು ಕಾಶ್ಮೀರದಿಂದ ರಾಮೇಶ್ವರದವರೆಗೆ ಶಾಖಾಮಠಗಳನ್ನು ತೆರೆದು ತಮ್ಮ ವ್ಯಾಪ್ತಿಯನ್ನು ದೇಶದಾದ್ಯಂತ ಪಸರಿಸಿದ್ದಾರೆ. ಅದೇ ತೆರನಾಗಿ ಮಕ್ಕಳ ಅಭಿರುಚಿಗೆ ತಕ್ಕಹಾಗೆ ಹಿಂದಿನ ಗುರುಕುಲ ಪದ್ದತಿಯಂತೆ ೬೪ ಮಾದರಿ ಶಿಕ್ಷಣ ನೀಡುವ ಸನಾತನ ಗುರುಕುಲ ಪಾಠಶಾಲೆಗಳನ್ನು ತೆರೆಯುವಂತೆ ಕಾಶೀ ಜಗದ್ಗುರುಗಳಲ್ಲಿ ಮನವಿ ಮಾಡಿದರು.

ಗುಳೇದಗುಡ್ಡದ ಡಾ. ನೀಲಕಂಠ ಶಿವಾಚಾರ್ಯರು ಮಾತನಾಡಿ, ಬೆರಳೆಣಿಕೆಯ ವಟುಗಳಿಂದ ತಗಡಿನ ಶೆಡ್ಡಿನಲ್ಲಿ ಪ್ರಾರಂಭವಾದ ಈ ಪಾಠಶಾಲೆ, ವಿಶಾಲವಾದ ಆರ್.ಸಿ.ಸಿ. ಕಟ್ಟಡ ಹೊಂದಿ ೨00ಕ್ಕೂ ಹೆಚ್ಚುಸಂಖ್ಯೆಯ ವಟುಗಳನ್ನು ಹೊಂದುವ ಜತೆಗೆ ದಶಮಾನೋತ್ಸವ ಆಚರಿಸುತ್ತಿದೆ. ಇದು ಭಕ್ತರು ನೀಡಿದ ದೇಣಿಗೆ, ಶ್ರಮದ ಪ್ರತಿಫಲವಾಗಿದೆ. ಮಕ್ಕಳನ್ನು ಹೇರುವುದು ದೊಡ್ಡದಲ್ಲ. ಅವರಿಗೆ ಸಂಸ್ಕಾರಯುತ ಜೀವನ ನೀಡುವುದು ಮುಖ್ಯವಾಗಿದೆ. ಆ ಕಾರ್ಯವನ್ನು ಶ್ರೀ ಕಾಶಿ ಜಗದ್ಗುರುಗಳು ವೇದ, ಸಂಸ್ಕೃತ ಪಾಠಶಾಲೆ ತೆರೆಯುವ ಮೂಲಕ ಮಾಡುತ್ತಿರುವುದು ಅವರ ಸೇವಾ ಮನೋಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಹಾವೇರಿ ಜಿ.ಎಚ್. ಕಾಲೇಜಿನ ಉಪನ್ಯಾಸಕ ಸಿದ್ದೇಶ್ವರ ಹುಣಸೀಕಟ್ಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಕಾರ ಎಂದರೆ ದೇಹ ಮತ್ತು ಮನಸ್ಸುಗಳನ್ನು ಸುಂದರಗೊಳಿಸುವ ಮಹತ್ತರವಾದ ಕ್ರಿಯೆಯಾಗಿದೆ. ಗುರು ಉಪದೇಶಾಮೃತದಿಂದ ಸಿಗುವ ಸಂಸ್ಕಾರಗಳು ವ್ಯಕ್ತಿಯ ವ್ಯಕ್ತಿತ್ವ ದೇಹ, ಮನಸುಗಳನ್ನು ಸಂಸ್ಕರಿಸುತ್ತವೆ. ಮನುಷ್ಯನ ಅಂತರಂಗವನ್ನು ಪರಿಶುದ್ಧಗೊಳಿಸುವುದೇ ಸಂಸ್ಕಾರವಾಗಿದೆ ಎಂದು ಹೇಳಿದರು.

ಜೋಳ ಪ್ರಕೃತಿಯಾದರೆ ಹಿಟ್ಟು ಸಂಸ್ಕೃತಿಯಾಗಲಿದೆ. ಹಿಟ್ಟಿಗೆ ಸಂಸ್ಕಾರ ಸಿಕ್ಕಾಗ ರೊಟ್ಟಿಯಾಗಲಿದೆ. ಭತ್ತ ಪ್ರಕೃತಿಯಾದರೆ, ಅಕ್ಕಿ ಸಂಸ್ಕೃತಿಯಾಗಲಿದೆ. ಅಕ್ಕಿಗೆ ಸಂಸ್ಕಾರ ಸಿಕ್ಕಾಗ ಅನ್ನವಾಗಿ ಪ್ರಸಾದವಾಗಲಿದೆ. ಕಲ್ಲು ಪ್ರಕೃತಿಯಾದರೆ, ವಿಗ್ರಹ ಸಂಸ್ಕೃತಿಯಾಗಲಿದೆ, ಆ ವಿಗ್ರಹಕ್ಕೆ ಕಾಶಿ ಜಗದ್ಗುರುಗಳಿಂದ ಸಂಸ್ಕಾರ ಸಿಕ್ಕಾಗ ದೇವರಮೂರ್ತಿಯಾಗಿ ಹೊರಹೊಮ್ಮಲಿದೆ. ಹಾಗೆಯೇ ಮನುಷ್ಯ ಕೂಡ ಗುರುವಿನ ಮಾರ್ಗದರ್ಶನಲ್ಲಿ ನಡೆದಾಗ ಮಾನವನಾಗಬಲ್ಲ. ಅವರು ನೀಡಿದ ಉಪದೇಶಾಮೃತವನ್ನು ಮೈಗೂಡಿಸಿಕೊಂಡು ನಡೆದಾಗ ಮಹದೇವನಾಗಿ ಅವನೇ ಪರಶಿವನಾಗಬಲ್ಲ ಎಂದು ಹೇಳಿದರು.

ಇದೇ ವೇಳೆ ಶಿಗ್ಗಾಂವಿಯ ಸಿ.ವಿ. ಮತ್ತಿಗಟ್ಟಿಯವರಿಗೆ ಧರ್ಮ ಸೇವಾ ಪ್ರಭಾಕರ ಹಾಗೂ ಕುರಬರಮಲ್ಲೂರಿನ ಶಿವಪ್ರಕಾಶ ಹಿರೇಮಠರಿಗೆ ನ್ಯಾಯ ಸೇವಾ ರತ್ನ ಪ್ರಶಸ್ತಿ ಪ್ರದಾನಿಸಲಾಯಿತು. ಕೇರೂರಿನ ಡಾ. ಶಿವಕುಮಾರ ಶಿವಾಚಾರ್ಯರು, ಧಾರವಾಡದ ಎಸ್.ಬಿ. ಗಿರಿಮಠ ಮಾತನಾಡಿದರು.

ಶ್ರೀ ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಭೆಯ ಸಾನಿಧ್ಯ ವಹಿಸಿದ್ದರು. ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಶ್ರೀಗಳು ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾಡಿನ ಹರಗುರು ಚರಮೂರ್ತಿಗಳು, ಗಣ್ಯರು ಉಪಸ್ಥಿತರಿದ್ದರು. ಮುರಗೇಶ ಆಜೂರ ಸ್ವಾಗತಿಸಿದರು. ಗಂಗೂಬಾಯಿ ದೇಸಾಯಿ ನಿರೂಪಿಸಿದರು.

Share this article