ಬೀದರ್: ಗುರುನಾನಕರ 554ನೇ ಜಯಂತಿ ಅಂಗವಾಗಿ ಸೋಮವಾರ ಇಲ್ಲಿನ ಪವಿತ್ರ ಗುರುದ್ವಾರಾದಿಂದ ನಗರದ ವಿವಿಧ ಮುಖ್ಯರಸ್ತೆಗಳ ಮೂಲಕ ಪ್ರಮುಖ ವೃತ್ತಗಳ ಮಾರ್ಗವಾಗಿ ಭವ್ಯ ಮೆರವಣಿಗೆ, ಮೈನವಿರೇಳಿಸಿದ ಸಿಖ್ ಯುವಕರ ಖಡ್ಗದ ವರಸೆ ಪ್ರದರ್ಶನ ಗಮನ ಸೆಳೆಯಿತು.
ಸೋಮವಾರ ಬೆಳಿಗ್ಗೆಯಿಂದಲೇ ನಗರದ ಗುರುದ್ವಾರ ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು. ಗುರುದ್ವಾರದಲ್ಲಿ ಗುರುಗ್ರಂಥ ಸಾಹೀಬ್ ಪಠಣ, ವಿಶೇಷ ಪ್ರಾರ್ಥನೆಗಳು, ಗುರುದ್ವಾರಕ್ಕೆ ವಿಶೇಷ ದೀಪಾಲಂಕರ ಎಲ್ಲರ ಗಮನ ಸೆಳೆಯಿತು.ಸಂಜೆ 3ರ ಸುಮಾರಿಗೆ ಗುರುದ್ವಾರದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನಿಶಾನ್ ಸಾಹೇಬ, ಸಿಖ ಯುವಕರ ಖಡ್ಗದ ವರಸೆ ಪ್ರದರ್ಶನ, ಕೈಯಲ್ಲಿ ಖಡ್ಗ ಹಿಡಿದು ಓಡುವುದು, ಹೈದ್ರಾಬಾದ್‌ನ ಬ್ಯಾಂಡ್, ಸಾಂಪ್ರದಾಯಿಕ ಹಲಿಗೆ, ಕುದರೆ ಸವಾರಿ, ಲಾಠಿ, ಚಕ್ರ ತಿರುಗಿಸುವುದು ಸಿಖ ಧರ್ಮೀಯ ಗಣ್ಯವ್ಯಕ್ತಿಗಳು, ಪ್ರಮುಖರ ಪಾದಯಾತ್ರೆ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.
ಬೀದರ್‌ನ ಗುರುದ್ವಾರಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಿಖ್ ಧರ್ಮೀಯರು ಆಗಮಿಸಿ ಗುರುನಾನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಲ್ಲದೆ, ಪವಿತ್ರ ಗುರುದ್ವಾರಾದಿಂದ ಆರಂಭಗೊಂಡ ಮೆರವಣಿಗೆಯುದ್ದಕ್ಕೂ ಕೈಯಲ್ಲಿ ಖಡ್ಗ ಹಿಡಿದು ''''''''ಬೋಲೆ ಸೋನಿಹಾಲ್ ಸಸ್ರಿಯಾಕಾಲ್'''''''' ಎಂಬ ಘೋಷಣೆಗಳನ್ನು ಕೂಗುತ್ತ ಸಾಗಿದ್ದು ಎಲ್ಲರ ಮೈನವಿರೇಳಿಸುವಂತಿತ್ತು.ಸೋಮವಾರ ಮಧ್ಯಾಹ್ನ ಪಂಚ ಪ್ಯಾರೆಗಳ ಭವ್ಯ ಮೆರವಣಿಗೆಯು ಪವಿತ್ರ ಗುರುದ್ವಾರಾದಿಂದ ಆರಂಭಗೊಂಡು ಮಡಿವಾಳ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಮರಳಿ ಗುರುನಾನಕ ಕಾಲೋನಿಯಲ್ಲಿರುವ ಪಹಾಡಿ ನಿಶಾನ್ ಸಾಹೇಬ್‌ಗೆ ತಲುಪಿ ಸಮಾರೋಪಗೊಂಡಿತು.
ಇನ್ನು ಸೋಮವಾರ ಬೆಳಗಿನ ಜಾವ 1 ಗಂಟೆಗೆ ಗುರುಗ್ರಂಥ ಸಾಹೇಬರ ದೀಪ ಬೆಳಗಿಸಲಾಯಿತು. ಬೆಳಗ್ಗೆ 2ರಿಂದ 3ರ ವರೆಗೆ ಹಜೂರಿ ರಾಗಿ ಜತ್ಥಾ ತಂಡದಿಂದ ಕೀರ್ತನ, ಬೆಳಗ್ಗೆ 3.30ರಿಂದ 5.30ರ ವರೆಗೆ ಪಾಠ ಜರುಗಿತು ಕಳೆದ ಮೂರು ದಿನಗಳಿಂದ ಭಕ್ತರಿಗಾಗಿ ನಿರಂತರ ಲಂಗರ್ (ಪ್ರಸಾದ) ವ್ಯವಸ್ಥೆ ಮಾಡಲಾಗಿತ್ತು.ಗುರುದ್ವಾರಕ್ಕೆ ಸಚಿವರ ಭೇಟಿ, ದರ್ಶನ: ಗುರುನಾನಕ ಜಯಂತಿ ಅಂಗವಾಗಿ ಸೋಮವಾರ ಮಧ್ಯಾಹ್ನವೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿಕ ಸಚಿವ ರಹೀಮ್ ಖಾನ್ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಕೂಡ ಗುರುದ್ವಾರಕ್ಕೆ ಭೇಟಿ ನೀಡಿ ದರ್ಶನ ಪಡೆದು ಸಿಖ ಸಮುದಾಯದವರಿಗೆ ಶುಭ ಕೋರಿದರು.
ಭವ್ಯ ಮೆರವಣಿಗೆಯಲ್ಲಿ ಪಕ್ಕದ ತೆಲಂಗಾಣಾ, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳ ಸಾವಿರಾರು ಭಕ್ತರಲ್ಲದೇ ಬೀದರ್ ಗುರುದ್ವಾರಾ ಪ್ರಬಂಧಕ ಕಮಿಟಿಯ ಅಧ್ಯಕ್ಷರಾದ ಸರದಾರ ಬಲಬೀರಸಿಂಗ್, ಸದಸ್ಯರಾದ ಮನಪ್ರೀತಸಿಂಗ್ (ಬಂಟಿ), ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಪುನೀತ ಸಿಂಗ್, ಪವಿತಸಿಂಗ್ ಅಲ್ಲದೇ ಗುರುದ್ವಾರಾದ ಅನೇಕ ಸದಸ್ಯರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.ಪೊಲೀಸ್ ಬಂದೋಬಸ್ತ್: ಗುರುನಾನಕ ಜಯಂತಿ ನಿಮಿತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್ ಹಾಗೂ ಎಎಸ್ಪಿ ಮಹೇಶ ಮೇಘಣ್ಣನವರ್, ಡಿಎಸ್‌ಪಿ ಶಿವಾನಂದ ಪಾಟೀಲ್ ಅವರು ಬೆಳಿಗ್ಗೆಯಿಂದಲೇ ಪೊಲೀಸ್ ಬಂದೋಬಸ್ತ ಮಾಡಿ ಖುದ್ದು ನಿಗಾ ವಹಿಸಿ ಸ್ಥಳದಲ್ಲಿಯೇ ಇದ್ದರು.