ಬಡವರಿಗಾಗಿ ಧರ್ಮಛತ್ರ ನಿರ್ಮಿಸಿದ ಗುರುರಾಜ್ ಹೆಬ್ಬಾರ್‌

KannadaprabhaNewsNetwork |  
Published : Sep 04, 2026, 02:00 AM IST
3ಎಚ್ಎಸ್ಎನ್15 :  | Kannada Prabha

ಸಾರಾಂಶ

ವೈದ್ಯರಾಗಿ ಬಡ ರೋಗಿಗಳ ಸೇವೆ ಮಾಡುವುದರ ಜತೆಗೆ, ಆಸ್ಪತ್ರೆಗೆ ಬರುವ ರೋಗಿಗಳ ಆರೈಕೆದಾರರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅವರ ನೇತೃತ್ವದಲ್ಲಿ ಹಾಸನಾಂಬ ಧರ್ಮಛತ್ರ ನಿರ್ಮಿಸಲಾಯಿತು. ಇಲ್ಲಿ ಉಳಿದುಕೊಳ್ಳಲು ಕೊಠಡಿಗಳು, ಸ್ನಾನಗೃಹಗಳು ಹಾಗೂ ತಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಕೀ-ಲಾಕರ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಸಾವಿರಾರು ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು. ಹೆಬ್ಬಾರ್ ಅವರ ಆದರ್ಶ ಮತ್ತು ಸೇವಾ ಮನೋಭಾವವನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು. ಸಮಾಜಕ್ಕೆ ಮರಳಿ ನೀಡುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಡಾ. ರಾಜಣ್ಣ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ವೈದ್ಯ ವೃತ್ತಿಯ ಜತೆಗೆ ಸಮಾಜ ಸೇವೆಯನ್ನೂ ಜೀವನದ ಉದ್ದೇಶವನ್ನಾಗಿಸಿಕೊಂಡು, ಬಡ ರೋಗಿಗಳು ಹಾಗೂ ಅವರ ಆರೈಕೆದಾರರಿಗೆ ನೆರವಾಗುವ ಹಲವು ಕಾರ್ಯಗಳನ್ನು ಕೈಗೊಂಡಿದ್ದ ದಿವಂಗತ ಡಾ. ಗುರುರಾಜ್ ಹೆಬ್ಬಾರ್ ಅವರ ಸೇವೆ ಇಂದಿಗೂ ಸ್ಮರಣೀಯ ಎಂದು ಹಿಮ್ಸ್ ಆಸ್ಪತ್ರೆ ಡೀನ್ ಡಾ. ರಾಜಣ್ಣ ಹೇಳಿದರು.

ಹಾಸನಾಂಬಾ ಧರ್ಮಛತ್ರ ಸಮಿತಿ, ಹಿಮ್ಸ್ ಹಾಗೂ ಹಿಮ್ಸ್ ಸರ್ಕಾರಿ ಆಸ್ಪತ್ರೆ ವತಿಯಿಂದ ಸಮಾಜ ಸೇವಕ ಹಾಗೂ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ದಿವಂಗತ ಡಾ. ಗುರುರಾಜ್ ಹೆಬ್ಬಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಿಮ್ಸ್ ಆವರಣದಲ್ಲಿರುವ ಹಾಸನಾಂಬ ಧರ್ಮಛತ್ರ ಕಟ್ಟಡದ ಎರಡನೇ ಮಹಡಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ‘ವೈದ್ಯೋ ನಾರಾಯಣ ಹರಿಃ’ ಎಂಬ ಮಾತಿಗೆ ಡಾ. ಗುರುರಾಜ್ ಹೆಬ್ಬಾರ್‌ ಅವರ ಬದುಕೇ ಅರ್ಥಪೂರ್ಣ ಅನ್ವಯವಾಗಿತ್ತು. ವೈದ್ಯರಾಗಿ ಬಡ ರೋಗಿಗಳ ಸೇವೆ ಮಾಡುವುದರ ಜತೆಗೆ, ಆಸ್ಪತ್ರೆಗೆ ಬರುವ ರೋಗಿಗಳ ಆರೈಕೆದಾರರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅವರ ನೇತೃತ್ವದಲ್ಲಿ ಹಾಸನಾಂಬ ಧರ್ಮಛತ್ರ ನಿರ್ಮಿಸಲಾಯಿತು. ಇಲ್ಲಿ ಉಳಿದುಕೊಳ್ಳಲು ಕೊಠಡಿಗಳು, ಸ್ನಾನಗೃಹಗಳು ಹಾಗೂ ತಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಕೀ-ಲಾಕರ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಸಾವಿರಾರು ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು. ಹೆಬ್ಬಾರ್ ಅವರ ಆದರ್ಶ ಮತ್ತು ಸೇವಾ ಮನೋಭಾವವನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು. ಸಮಾಜಕ್ಕೆ ಮರಳಿ ನೀಡುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಡಾ. ರಾಜಣ್ಣ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಡಾ. ಗುರುರಾಜ್ ಹೆಬ್ಬಾರ್ ಅಭಿನಂದನಾ ಸಮಿತಿ ಅಧ್ಯಕ್ಷ ಹೆಮ್ಮಿಗೆ ಮೋಹನ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಡಾ. ಗುರುರಾಜ್ ಹೆಬ್ಬಾರ್ ಅವರಂತಹ ದೂರದೃಷ್ಟಿಯ ಸಮಾಜ ಸೇವಕರು ಅಪರೂಪ. ‘ಜನಸೇವೆಯೇ ಜನಾರ್ದನ ಸೇವೆ’ ಎಂಬ ತತ್ವಕ್ಕೆ ಬದ್ಧರಾಗಿದ್ದ ಅವರು, ಸಮಾನ ಮನಸ್ಕರನ್ನು ಒಗ್ಗೂಡಿಸಿ ಹಾಸನಾಂಬಾ ಧರ್ಮಛತ್ರದಂತಹ ಮಹತ್ವದ ಯೋಜನೆಯನ್ನು ಸಾಕಾರಗೊಳಿಸಿದ್ದರು ಎಂದರು. ಡಾ. ಹೆಬ್ಬಾರ್ ಅವರು ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ಸಂಜೀವಿನಿ ಸಹಕಾರಿ ಆಸ್ಪತ್ರೆ, ಚೈತನ್ಯ ಮಂದಿರ, ಕಾಮಧೇನು ಸಹಕಾರಿ ವಿದ್ಯಾಶ್ರಮ, ರೈತ ಬಂಧು ಸಹಕಾರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿದೆ. ಇಂತಹ ವ್ಯಕ್ತಿ ನಮ್ಮೊಂದಿಗೆ ಬದುಕಿದ್ದದ್ದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.

ಜನಪ್ರಿಯ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ವಿ.ಕೆ. ಅಬ್ದುಲ್ ಬಶೀರ್‌ ಮಾತನಾಡಿ, ೧೯೯೬ರಲ್ಲಿ ಹಾಸನದಲ್ಲಿ ಡಿಪ್ಲೊಮಾ ಪದವಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಡಾ. ಗುರುರಾಜ್ ಹೆಬ್ಬಾರ್ ಅವರ ಸಂಪರ್ಕಕ್ಕೆ ಬಂದೆ. ಹಿರಿಯ ವೈದ್ಯರಾಗಿದ್ದರೂ ತಮ್ಮನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು ಗೌರವದಿಂದ ಮಾತನಾಡಿಸಿದ ರೀತಿ ಇಂದಿಗೂ ನೆನಪಿದೆ ಎಂದರು. ಸಂಜೀವಿನಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಅವಕಾಶ ಕೇಳಿದಾಗ ಯಾವುದೇ ವಿಳಂಬವಿಲ್ಲದೆ ಮರುದಿನವೇ ನೇಮಕಾತಿ ಪತ್ರ ನೀಡಿದ್ದರು. ಅಲ್ಲಿ ಒಂದು ವರ್ಷ ಕೆಲಸ ಮಾಡಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆಎಂಸಿ ಮಣಿಪಾಲ್‌ಗೆ ತೆರಳಿದ್ದೆ. ನಂತರವೂ ನನ್ನ ವೃತ್ತಿಜೀವನದ ಪ್ರತಿ ಹಂತದಲ್ಲೂ ಹೆಬ್ಬಾರ್ ಅವರು ಪ್ರೋತ್ಸಾಹ ಮತ್ತು ಬೆಂಬಲ ನೀಡಿದರು. ಅವರ ಮೃದು ಸ್ವಭಾವ, ನೇರ ನುಡಿ, ಸರಳ ನಡತೆ ಹಾಗೂ ಮಾನವೀಯ ಗುಣಗಳು ಎಲ್ಲರಿಗೂ ಮಾದರಿಯಾಗಿದ್ದವು. ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು ಎಂದು ತಮ್ಮ ಗುರುವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪ್ರತಿಭಾ ರಾಘವೇಂದ್ರ, ಡಾ. ಕಾವ್ಯಶ್ರೀ, ಹಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ರಾಘವೇಂದ್ರ ಪ್ರಸಾದ್, ಪ್ರಾಂಶುಪಾಲೆ ಡಾ. ಕವಿತಾ, ನಿವಾಸಿ ವೈದ್ಯಕೀಯ ಅಧಿಕಾರಿ ಡಾ. ಪ್ರವೀಣ್, ಡಾ. ಮನುಪ್ರಕಾಶ್, ಡಾ. ಪ್ರಕಾಶ್, ನಿಶ್ಚಿತ ಕುಮಾರಿ, ಸಮಾಜ ಸೇವಕರಾದ ಮುತ್ತತ್ತಿ ರಾಜಣ್ಣ, ಮಹಾವೀರ್ ಬನ್ಸಾಲಿ, ಚಂದ್ರಶೇಖರ್, ಶಬೀರ್ ಅಹಮದ್ ಸೇರಿದಂತೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಕ ಸಮ್ಮೇಳನದಲ್ಲಿ ಕನ್ನಡದ ಸಾಧಕರ ಹೆಸರಲ್ಲಿ ವೇದಿಕೆ
ಶೂಟೌಟ್‌: ಘಟನಾ ಸ್ಥಳಕ್ಕೆ ಸಿಐಡಿ ಎಸ್‌ಪಿ