ಧರ್ಮದ ಹಾದಿಯಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ ಅಗತ್ಯ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಆಧುನಿಕ ದಿನಗಳಲ್ಲಿ ಅಜ್ಞಾನ ಮಡುವಿನಲ್ಲಿ ಬಿದ್ದು, ಸಂಕುಚಿತ ಮನೋಭಾವನೆ ರೂಢಿಸಿಕೊಂಡಿರುವ ಮನುಷ್ಯ ಜಾಗೃತನಾಗಿ ಧರ್ಮದ ಹಾದಿಯಲ್ಲಿ ನಡೆಯಬೇಕಾದರೇ ಗುರುವಿನ ಮಾರ್ಗದರ್ಶನ ಅಗತ್ಯ

ಕನ್ನಡಪ್ರಭ ವಾರ್ತೆ ಅಕ್ಕಿಆಲೂರು

ಆಧುನಿಕ ದಿನಗಳಲ್ಲಿ ಅಜ್ಞಾನ ಮಡುವಿನಲ್ಲಿ ಬಿದ್ದು, ಸಂಕುಚಿತ ಮನೋಭಾವನೆ ರೂಢಿಸಿಕೊಂಡಿರುವ ಮನುಷ್ಯ ಜಾಗೃತನಾಗಿ ಧರ್ಮದ ಹಾದಿಯಲ್ಲಿ ನಡೆಯಬೇಕಾದರೇ ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಹೇರೂರಿನ ಗುಬ್ಬಿನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.

ಸಮೀಪದ ತಿಳವಳ್ಳಿ ಗ್ರಾಮದ ಮುರುಘರಾಜೇಂದ್ರ ಕಲ್ಮಠದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಮ್ಮುಖ ವಹಿಸಿ ಅವರು ಮಾತನಾಡಿದರು. ಜಗತ್ತಿನ ಕಲ್ಯಾಣಕ್ಕಾಗಿ ಜನ್ಮ ತಳೆದ ಹಿಂದೂ ಧರ್ಮ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದು, ಧರ್ಮದ ಆಚರಣೆಗಳು ಪ್ರತಿಯೊಬ್ಬ ವ್ಯಕ್ತಿಗೂ ಶಾಶ್ಚತ ನೆಮ್ಮದಿಯನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗಿವೆ. ಕಾಲಕ್ರಮೇಣ ಆಚರಣೆಗಳಲ್ಲಿ ವ್ಯತ್ಯಾಸವಾಗುತ್ತಿದೆ. ಯುವಸಮೂಹದ ಧರ್ಮದ ಬಗೆಗಿನ ನಿಷ್ಕಾಳಜಿ ಇದಕ್ಕೆ ಪ್ರಮುಖ ಕಾರಣವಾಗಿದೆ. ವಿಶ್ವಕ್ಕೆ ಗುರು ಪರಂಪರೆಯನ್ನು ಪರಿಚಯಿಸಿಕೊಟ್ಟ ಶ್ರೇಷ್ಠ ಧರ್ಮ ಸಾರ್ವಭೌಮತ್ವ ಸಾಧಿಸಬೇಕಾದರೇ ನಮ್ಮೆಲ್ಲರ ಪರಿಶ್ರಮ ಅಗತ್ಯವಾಗಿದೆ. ಹಿಂದೆ ಗುರು, ಮುಂದೆ ಗುರಿ ಇದ್ದಾಗ ಮಾತ್ರ ಜೀವನ್ಮುಕ್ತಿ ಲಭಿಸಲು ಸಾಧ್ಯವಾಗುತ್ತದೆ ಎಂಬ ಸತ್ಯವನ್ನು ಅರಿತು ನಾವೆಲ್ಲರೂ ಗುರುವಿನ ಆಶೋತ್ತರಗಳಿಗೆ ಸ್ಪಂದಿಸುವ ಪರಿಪಾಠವನ್ನು ರೂಢಿಸಿಕೊಳ್ಳಬೇಕಿದೆ ಎಂದರು.

ಮುರುಘರಾಜೇಂದ್ರ ಕಲ್ಮಠದ ಬಸವ ನಿರಂಜನ ಶ್ರೀಗಳು ಮಾತನಾಡಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಗಳಿಂದಾಗಿ ವಿಶ್ವದ ದೇವರ ಮನೆ ಎನಿಸಿಕೊಂಡಿರುವ ದೇಶದಲ್ಲಿಂದು ಧರ್ಮಾಚರಣೆಗಳು ಮರೆಯಾಗುತ್ತಿರುವುದು ವಿಷಾದನೀಯ. ಮನುಕುಲದ ಉದ್ಧಾರಕ್ಕೆ ಶ್ರೇಷ್ಠ ಚಿಂತನೆಗಳ ಅಗತ್ಯತೆ ಇದ್ದು, ಹಿಂದೂ ಧರ್ಮದಲ್ಲಿ ಇವೆಲ್ಲ ಅಡಗಿವೆ. ಶಾಂತಿ, ಸಹಬಾಳ್ವೆಯ ತತ್ವ ಸಾರುವ ಧರ್ಮ ನಮ್ಮದಾಗಿದ್ದು, ಯುವಶಕ್ತಿ ಧಾರ್ಮಿಕ, ಆದ್ಯಾತ್ಮಿಕ ಆಚರಣೆಗಳಲ್ಲಿ ಒಲವು ತೋರಿಸಬೇಕಿದೆ ಎಂದರು.

ಇದಕ್ಕೂ ಮುನ್ನ ಶಿವಲಿಂಗೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ಮಹಾರುದ್ರಾಭಿಷೇಕ ಸೇರಿದಂತೆ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಬೈಲಹೊಂಗಲ ತಾಲೂಕು ಸೋಮಾಪುರ ಸಿದ್ಧಾರೂಢ ಮಠದ ಜಯದೇವ ಶ್ರೀಗಳು ಸಾನಿಧ್ಯ ವಹಿಸಿದ್ದರು. ಹಾವೇರಿ ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಚಿತ್ರದುರ್ಗದ ಅಕ್ಕಮಹಾದೇವಿ ತಾಯಿಯವರು, ವೀರಭದ್ರಯ್ಯ ಶಾಸ್ತ್ರೀ, ಎಂ.ಎನ್. ಬಣಕಾರ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Share this article