ಕುಮಟಾ: ಅಧ್ಯಾತ್ಮದ ಆನಂದವನ್ನು ನೀಡುವವರೇ ಗುರುಗಳು, ಸನ್ಯಾಸಿಗಳು. ಚಾತುರ್ಮಾಸ್ಯ ಎಂದರೆ ಸಾಕ್ಷಾತ್ ಭಗವಂತನೇ ಭೂಮಿಗೆ ಬರುವಂಥ ಸನ್ನಿವೇಶ. ಚಾತುರ್ಮಾಸ್ಯ ನಡೆಯುವಲ್ಲಿ ದುರ್ಭಿಕ್ಷವಿಲ್ಲ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಮಹಾಮಂಡಲೇಶ್ವರ ಪದವಿ ಪಡೆದ ಮಹಾಕುಂಭಮೇಳದ ಸಂದರ್ಭದಲ್ಲಿ ನಿರಂತರ ಅಧ್ಯಾತ್ಮ ಸಾಧನೆಯಲ್ಲಿ ಸುಮಾರು ೨ ತಿಂಗಳ ಕಾಲ ನಿದ್ರಾಹೀನತೆ, ಅನಾರೋಗ್ಯ ಎದುರಿಸಲು ಸಾಧ್ಯವಾಗಿದೆ. ಈ ಬಾರಿ ಕೋನಳ್ಳಿಯಲ್ಲಿ ಚಾತುರ್ಮಾಸ್ಯವನ್ನು ಅರ್ಥಪೂರ್ಣವಾಗಿ ನಡೆಸಲು ಭಕ್ತರು ತೀರ್ಮಾನಿಸಿದ್ದು ಭಗವಂತನ ಸಂಕಲ್ಪವೇ ಆಗಿದೆ. ಚಾತುರ್ಮಾಸ್ಯ ನಡೆಯುವ ಕ್ಷೇತ್ರದಲ್ಲಿ ದುರ್ಭಿಕ್ಷ ಬರುವುದಿಲ್ಲ. ನೆಮ್ಮದಿ ಶಾಂತಿಯಿಂದ ಜನರು ಇರುತ್ತಾರೆ. ಆನಾರೋಗ್ಯಗಳ ಕಡಿಮೆಯಾಗಿ ಧನಾತ್ಮಕತೆ ಪಸರಿಸುತ್ತದೆ ಎಂಬ ಕಾರಣಕ್ಕೆ ಚಾತುರ್ಮಾಸ್ಯ ಆಚರಣೆಗೆ ವಿಶೇಷ ಮಹತ್ವ ಇದೆ ಎಂದು ಹಿಂದಿನ ಋಷಿಮುನಿಗಳೇ ನಿರ್ಧರಿಸಿದ್ದಾರೆ. ಪಾಂಡವರ ಕಥೆ ಶುರುವಾಗುವುದೇ ಋಷಿ ದೂರ್ವಾಸರ ಚಾತುರ್ಮಾಸ್ಯದಿಂದ. ಇಂದಿನ ಕಾಲಕ್ಕೆ ಚಾತುರ್ಮಾಸದ ಮಹತ್ವವನ್ನು ಯಕ್ಷಗಾನ ನಾಟಕದಂತಹ ಪರಿಣಾಮಕಾರಿ ಮಾಧ್ಯಮಗಳ ಮೂಲಕ ತೋರ್ಪಡಿಸಬೇಕು. ರಾಮಾಯಣ ಮಹಾಭಾರತದಂತಹ ಕಥಾನಕಗಳ ಪಾತ್ರಗಳ ಸತ್ವವನ್ನು ಪ್ರಚುರಪಡಿಸಬೇಕು. ಚಾತುರ್ಮಾಸ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಶ್ರೀರಾಮಕ್ಷೇತ್ರ ಸೇವಾ ಸಮಿತಿ ಸಂಚಾಲಕ ಆರ್.ಜಿ. ನಾಯ್ಕ, ಪೀಠಾಧೀಶರಾದ ಕೇವಲ 15 ವರ್ಷಗಳಲ್ಲಿ ಬ್ರಹ್ಮಾನಂದ ಶ್ರೀ ಉತ್ತರ ಪ್ರದೇಶದಲ್ಲಿ ಮಠ ಸ್ಥಾಪಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ದಕ್ಷಿಣ ಭಾರತದ ಸ್ವಾಮೀಜಿಯೊಬ್ಬರು ಉತ್ತರ ಭಾರತದಲ್ಲಿ ಮಠ ಸ್ಥಾಪಿಸಿರುವುದು ಮತ್ತು ಮಹಾಮಂಡಲೇಶ್ವರರಾಗಿ ಕೀರ್ತಿಪದವಿ ಪಡೆದಿರುವುದು ಸಣ್ಣ ವಿಚಾರವಲ್ಲ. ಶ್ರೀಗಳು ಶೈಕ್ಷಣಿಕ, ಆಧ್ಯಾತ್ಮಿಕ ಆಲೋಚನೆಗಳ ಮೂಲಕ ಎಲ್ಲಡೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.ತಾಲೂಕು ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ದಂಪತಿಗಳು ಶ್ರೀಗಳ ಪಾದಪೂಜೆ ನೆರವೇರಿಸಿದರು. ಶಾಸಕ ದಿನಕರ ಶೆಟ್ಟಿ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಉದ್ಯಮಿ ಮುರಳೀಧರ ಪ್ರಭು, ನಾಮಧಾರಿ ಸಮಾಜ ಪ್ರಮುಖರಾದ ಎಚ್.ಆರ್.ನಾಯ್ಕ, ಸೂರಜ ನಾಯ್ಕ, ರತ್ನಾಕರ ನಾಯ್ಕ, ಸತೀಶ ನಾಯ್ಕ, ಯುವ ನಾಮಧಾರಿ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಸಂತೋಷ ನಾಯ್ಕ, ವೈಭವ ನಾಯ್ಕ, ಸಂಘದ ನಿರ್ದೆಶಕರಾದ ಕಮಲಾಕರ ನಾಯ್ಕ, ಗಜಾನನ ನಾಯ್ಕ, ಸುರೇಶ ನಾಯ್ಕ ಇನ್ನಿತರರು ಇದ್ದರು.