ಗುರುಸ್ವಾಮಿ ಸಾಹಿತ್ಯಕ್ಕೆ ಮುಪ್ಪು, ಮೃತ್ಯು ಎರಡೂ ಇಲ್ಲ

KannadaprabhaNewsNetwork | Published : Nov 29, 2024 1:03 AM

ಸಾರಾಂಶ

ಕನ್ನಡದ ಹಿರಿಯ ಸಾಹಿತಿ ದಿವಂಗತ ಪ್ರೊ.ಮಲೆಯೂರು ಗುರುಸ್ವಾಮಿ ಅವರು ಸಾಹಿತ್ಯಕ್ಕೆ ಮುಪ್ಪು, ಮೃತ್ಯು ಎರಡೂ ಇಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಸೋಮಶೇಖರ್ ಬಿಸಲ್ವಾಡಿ ಹೇಳಿದರು. ಚಾಮರಾಜನಗರದಲ್ಲಿ ಕನ್ನಡ ರಾಜ್ಯೋತ್ಸವದ 27ನೇ ದಿನದ ಕಾರ್ಯಕ್ರಮದಲ್ಲಿ ಮಲೆಯೂರು ಗುರುಸ್ವಾಮಿ ಕುರಿತು ಮಾತನಾಡಿದರು.

ಕನ್ನಡ ರಾಜ್ಯೋತ್ಸವ । ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸೋಮಶೇಖರ್ ಬಿಸಲ್ವಾಡಿ ಹೇಳಿಕೆ । ಸಾಹಿತ್ಯ ಕಚೇರಿಯಲ್ಲಿ ಕನ್ನಡ ಹಬ್ಬದ 27ನೇ ದಿನದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕನ್ನಡದ ಹಿರಿಯ ಸಾಹಿತಿ ದಿವಂಗತ ಪ್ರೊ.ಮಲೆಯೂರು ಗುರುಸ್ವಾಮಿ ಅವರು ಸಾಹಿತ್ಯಕ್ಕೆ ಮುಪ್ಪು, ಮೃತ್ಯು ಎರಡೂ ಇಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಸೋಮಶೇಖರ್ ಬಿಸಲ್ವಾಡಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದ 27ನೇ ದಿನದ ಕಾರ್ಯಕ್ರಮದಲ್ಲಿ ಮಲೆಯೂರು ಗುರುಸ್ವಾಮಿ ಕುರಿತು ಮಾತನಾಡಿದರು.

ಮಲೆಯೂರು ಗುರುಸ್ವಾಮಿ ಅವರು ಸೃಜನಶೀಲ ಲೇಖಕ, ಸಂಪಾದಕ, ಕಾದಂಬರಿಕಾರ, ವಿಮರ್ಶಕ, ವಾಗ್ಮಿಯಾಗಿದ್ದ ಅವರು ಚಾಮರಾಜನಗರ ಜಿಲ್ಲೆಯ ಆಧುನಿಕ ಸಾಹಿತ್ಯಕ್ಕೆ ಹೊಸ ದಿಶೆ ತೋರಿದವರು. ಅವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ. ಅವರ ಸಾಹಿತ್ಯಕ್ಕೆ ಮುಪ್ಪು, ಸಾವು ಎರಡೂ ಇಲ್ಲ ಎಂದು ಹೇಳಿದರು.

ಪವಾಡ ಪುರುಷ ಮಲೆಮಹದೇಶ್ವರರ ಕುರಿತ ‘ಮಹಾಯಾತ್ರಿಕ’, ಮೈಸೂರು ಯದುವಂಶಸ್ಥರಲ್ಲಿ ಪ್ರಸಿದ್ಧರಾದ ಚಿಕ್ಕದೇವರಾಜ ಒಡೆಯರ ಬಗ್ಗೆ ಬರೆದಿರುವ ‘ಅಪ್ರತಿಮ ವೀರ’, ರಾಜ ಪ್ರಭುತ್ವದ ಕಾಲದಲ್ಲಿದ್ದ ಸಾಮಾಜಿಕ ಸ್ಥಿತಿಗತಿಗಳನ್ನು ಬಿಂಬಿಸುವ ‘ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ’, ಗಾಯಕಿ ಮತ್ತು ನರ್ತಕಿ ನಾಗರತ್ನಮ್ಮ ಜೀವನಾಧಾರಿತ ‘ಕಪಿಲೆ ಹರಿದಳು ಕಡಲಿಗೆ’, ನಾಟಕಕಾರ ಸಂಸ ಕುರಿತ ‘ಸಂಸ’, ಶ್ರೀರಂಗ‍ಪ‍ಟ್ಟಣದ ಬಳಿ ಇರುವ ಬಂಗಾರದೊಡ್ಡಿ ನಾಲೆಯ ಕುರಿತ ‘ಬಂಗಾರದೊಡ್ಡಿ’ ಅವರ ಪ್ರಮುಖ ಕಾದಂಬರಿಗಳಾಗಿವೆ ಎಂದು ತಿಳಿಸಿದರು.

ಜಿಲ್ಲೆಯ ಸಾಹಿತ್ಯ ಚರಿತ್ರೆಯನ್ನು ಒಳಗೊಂಡ ಸಾಹಿತ್ಯ ಸುವರ್ಣಾವತಿ, ಪ್ರಭುಲಿಂಗಲೀಲೆ, ಬಸವಣ್ಣ, ಕಪಿಲಾ ನದಿಯ ಎಡಬಲದಿ, ಮಾತಿನೊಳಗೊಣ, ಶರಣ ಕಿರಣ, ಮಾತೆಂಬುದು ಜ್ಯೋತಿರ್ಲಿಂಗ ಅವರ ಇತರ ಕೃತಿಗಳು. ಚಾಮರಾಜನಗರದ ಸಮಗ್ರ ಮಾಹಿತಿಯುಳ್ಳ ‘ಹೊನ್ನುಹೊಳೆ’ ಕೃತಿ ವರ ನೇತೃತ್ವದಲ್ಲಿ ರೂಪುಗೊಂಡಿತ್ತು. ಮೂಡಲ ಸೀಮೆಯ ಕಥೆಗಳು, ಕಾಡಂಚಿನ ಕೋಗಿಲೆಗಳ ಕಲರವ, ಜಂಗಮ, ಹೆಜ್ಜಿಗೆ ಸೇರಿದಂತೆ 50 ಕೃತಿಗಳನ್ನು ರಚಿಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು. ಅದರ ಮೊಟ್ಟಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಪಾರ ಶಿಷ್ಯರನ್ನು ಬೆಳೆಸಿದರು ಎಂದು ವಿವರಿಸಿದರು.

ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಮಲೆಯೂರು ಗುರುಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಶಕ್ತಿ, ಚೈತನ್ಯ ತುಂಬಿದ್ದರು. ಚಾಮರಾಜನಗರ ಪ್ರತಿನಿಧಿಯಾಗಿ ರಾಜ್ಯಾದ್ಯಂತ ಸಾಹಿತ್ಯ ಪರಿಷತ್ತು ಬೆಳೆಸಿದ್ದರು ಎಂದರು.

ಡಾ.ಪರಮೇಶ್ವರಪ್ಪ, ಪಣ್ಯದಹುಂಡಿ ರಾಜು, ಲಕ್ಷ್ಮಿನರಸಿಂಹ, ಶಿವಲಿಂಗಮೂರ್ತಿ, ಮಹೇಶ್ ಗೌಡ, ನಂಜುಂಡಶೆಟ್ಟಿ, ರಾಜ್ ಗೋಪಾಲ್, ಓಂಶಾಂತಿ ಆರಾಧ್ಯ, ವೀರಭದ್ರ, ನಾಗರಾಜು, ಮುದ್ದರಾಜು, ಸರಸ್ವತಿ, ರಾಚಪ್ಪ ಹಾಜರಿದ್ದರು.

Share this article