ಕನ್ನಡಪ್ರಭ ವಾರ್ತೆ ಮೈಸೂರು
ಯಾವುದೇ ವೃತ್ತಿನ್ನಾದರೂ ಆಸಕ್ತಿ ಮತ್ತು ಗೌರವದಿಂದ ನಿರ್ವಹಿಸಬೇಕು. ಅದರಲ್ಲೂ ವಕೀಲಿ ವೃತ್ತಿಯಲ್ಲಿ ಯಶಸ್ವಿಯಾಗಬೇಕಾದರೆ ಕಾನೂನು ಅರಿವಿನ ಜತೆ ಸಾಮಾಜಿಕ ಕಾಳಜಿಯೂ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.ಹಿರಿಯ ವಕೀಲ ಎ.ಎಸ್. ನಟರಾಜ್ ಅವರು 50 ವರ್ಷ ವೃತ್ತಿ ಬದುಕು ಪೂರೈಸಿದ ಹಿನ್ನೆಲೆಯಲ್ಲಿ ಅವರ ಶಿಷ್ಯವೃಂದ ನಗರದ ಸಾ.ರಾ. ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಗುರುವಂದನೆ ಮತ್ತು ವೃತ್ತಿಬದುಕಿನ ಸುವರ್ಣ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಕೀಲರಾದವರಿಗೆ ಕಾನೂನಿನ ಜ್ಞಾನದ ಜೊತೆಗೆ ಸಾಮಾಜಿಕ ಕಾಳಜಿ ಹಾಗೂ ಸಾಮಾನ್ಯ ಜ್ಞಾನ ಇರಬೇಕು. ವಕೀಲರು ಪ್ರತಿನಿತ್ಯ ಕಚೇರಿಯಲ್ಲಿದ್ದು ಕಕ್ಷಿದಾರರ ಸಂಪರ್ಕದಲ್ಲಿರಬೇಕು. ಆಗ ವಿಶ್ವಾಸಾರ್ಹತೆ ಬೆಳೆಯುತ್ತದೆ. ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ವಕೀಲ ವೃತ್ತಿಯಲ್ಲಿ ನಾನು ನಟರಾಜು ಅವರಿಗಿಂತ ಎರಡು ವರ್ಷ ಹಿರಿಯ. ನಾವಿಬ್ಬರೂ ಸ್ನೇಹಿತರಾಗಿದ್ದೆವು. ವಕೀಲ ವೃತ್ತಿಯನ್ನು ನಟರಾಜ್ ಗಂಭೀರವಾಗಿ ಪರಿಗಣಿಸಿದ್ದರು. ನಾನು 1983 ರವರೆಗೆ ವಕೀಲನಾಗಿದ್ದೆ. ಅಲ್ಲಿವರೆಗೆ ನಾನು ಮತ್ತು ನಟರಾಜ್ ನಿತ್ಯ ಸಿಗುತ್ತಿದ್ದೆವು. ಇವರು ಸ್ನೇಹಮಯಿಯಾಗಿದ್ದು, ಎಲ್ಲಾ ಸೀನಿಯರ್ ಮತ್ತು ಜೂನಿಯರ್ಗಳನ್ನೂ ಅತ್ಯಂತ ಪ್ರೀತಿ, ಅಭಿಮಾನದಿಂದ ಕಾಣುತ್ತಿದ್ದಾಗಿ ಅವರು ಹೇಳಿದರು.
ನಾನು ವಕೀಲ ವೃತ್ತಿ ಬಿಟ್ಟ ನಂತರವೂ ಆತ್ಮೀಯತೆ ಹಾಗೆಯೇ ಇದೆ. ಒಮೊಮ್ಮೆ ಅವರೂ ಏಕವಚನದಲ್ಲಿ ಮಾತನಾಡಿಸುತ್ತಾರೆ. ನನಗೆ ಏನಾದರೂ ಸಮಸ್ಯೆಯಾದಾಗ ಮೊದಲು ಶ್ರೀನಿವಾಸ್, ನಂತರ ನಟರಾಜ್ನನ್ನು ಸಂಪರ್ಕಿಸುತ್ತಿದ್ದೆ. ಹಾಗೂ ಅವರಿಬ್ಬರೂ ನನ್ನ ಸ್ನೇಹಿತರು ಎಂದರು.ನಾನು ಪಿ.ಎಂ. ಚಿಕ್ಕಬೋರಯ್ಯ ಅವರ ಜ್ಯೂನಿಯರ್ ಆಗಿದ್ದೆ. ಅವರು ವಕೀಲಿಕ ಮಾಡು ಇಲ್ಲ ರಾಜಕೀಯ ಮಾಡು ಎಂದು ಬುದ್ಧಿ ಹೇಳುತ್ತಿದ್ದರು. ನಾನೂ ಎರಡೂ ಮಾಡುವುದಾಗಿ ಹೇಳುತ್ತಿದ್ದೆ. ಲೋಕಸಭಾ ಚುನಾವಣೆಯಲ್ಲಿ ಸೋತಾಗ ವಿದ್ಯಾವರ್ಧಕ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಅದರಂತೆ ಕೆಲಕಾಲ ಕೆಲಸ ಮಾಡಿದೆ. ಬಳಿಕ ಶಾಸಕನಾಗಿ ಆಯ್ಕೆಯಾದ ಬಳಿಕ ವಕೀಲಿಕೆ ಮತ್ತು ಉಪನ್ಯಾಸಕ ಹುದ್ದೆ ಎರಡೂ ಬಿಡಬೇಕಾಯಿತು ಎಂದು ಅವರು ಹೇಳಿದರು.
ನಟರಾಜ ಅವರೊಂದಿಗೆ 35 ಕಿರಿಯ ವಕೀಲರ ದೊಡ್ಡ ಬಳಗವೇ ಇದೆ. ಅದರಲ್ಲಿ ಕೆಲವರು ನ್ಯಾಯಾಧೀಶರಾಗಿದ್ದಾರೆ. ಕೆಲವು ಮಂದಿ ಸ್ವಂತ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ನಟರಾಜ್ ಅವರಿಗೆ ಗ್ರಾಮೀಣ ಕಕ್ಷೀದಾರರೇ ಹೆಚ್ಚಿದ್ದಾರೆ. ಹಿಂದೆ ಹಳ್ಳಿಗರು ಬೆಣ್ಣೆ, ತರಕಾರಿ ತಂದುಕೊಟ್ಟರೆ ಸಾಕು ವಕೀಲರು ವಕಾಲತ್ತು ಹಾಕಿ ಕೇಸ್ ನಡೆಸುತ್ತಿದ್ದರು. ಆದರೆ ಈಗ ಬಹಳ ಕಷ್ಟ ಆಗಿದೆ ಎಂದರು.ಎ.ಎಸ್. ನಟರಾಜ್ ಅವರಿಗೆ ಶಿಷ್ಯ ವೃಂದದಿಂದ ಗುರುವಂದನೆ ಸಲ್ಲಿಸಲಾಯಿತು. ಅವರ ಆತ್ಮೀಯರು, ಸ್ನೇಹಿತರು ಸೇರಿದಂತೆ ನೂರಾರು ಮಂದಿ ಅಭಿನಂದಿಸಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನೂ ಹಲವರು ಅಭಿನಂದಿಸಿದರು.
ಹಿರಿಯ ವಕೀಲರಾದ ವೆಂಕಟರಾಜೇ ಅರಸ್, ಸಿ.ಎಂ. ಜಗದೀಶ್ ಅವರು ನಟರಾಜ್ ಅವರೊಡನೆಯ ಒಡನಾಟ ಸ್ಮರಿಸಿದರು.ಎ.ಎಸ್. ನಟರಾಜ್ ಮಾತನಾಡಿ, ಜಿಲ್ಲಾ ಪಂಚಾಯಿತಿಯನ್ನು ಬೇರೆಡೆಗೆ ಸ್ಥಳಾಂತರಿಸಿ, ಆ ಕಟ್ಟಡವನ್ನು ವಕೀಲರ ಸಂಘಕ್ಕೆ ಬಿಟ್ಟುಕೊಡುವಂತೆ ಕೋರಿದರು.
ನಟರಾಜ್ಅವರ ಪತ್ನಿ ಪ್ರೊ.ಸಿ.ಪಿ. ಸುನೀತಾ, ಹಿರಿಯ ವಕೀಲ ಅಪ್ಪಾಜಿಗೌಡ ಮೊದಲಾದವರು ಇದ್ದರು.