ಕನ್ನಡಪ್ರಭ ವಾರ್ತೆ ಬೆಳಗಾವಿ
ನಾವೆಲ್ಲ ಇಂದಿನ ಆಧುನಿಕ ಯುಗದಲ್ಲಿ ಒತ್ತಡದಿಂದ ಬಳಲುತ್ತಿದ್ದೇವೆ. ಇದರಿಂದಾಗಿ ಮನುಷ್ಯ ಅನೇಕ ರೋಗಗಳಿಂದ ಬಳಲುತ್ತಿದ್ದಾನೆ. ಕಾರಣ ನಾವೆಲ್ಲ ಯೋಗ, ಧ್ಯಾನ, ಪ್ರಾಣಾಯಾಮ ಇವುಗಳನ್ನೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ವ ರೋಗಕ್ಕೂ ಯೋಗ ರಾಮಬಾಣವಿದ್ದಂತೆ ಎಂದು ಹಿಂಡಲಗಾ ಕೇಂದ್ರ ಕಾರಾಗೃಹ ಅಧೀಕ್ಷಕ ಬಿ.ಎಂ.ಕೊಟ್ರೇಶ ಹೇಳಿದರು.ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ನೂರಾರು ಕಾಲ ಬಾಳುತ್ತಿದ್ದರು. ಅವರ ದೀರ್ಘಾಯುಷ್ಯದ ಗುಟ್ಟು ಏನೆಂದರೆ ಯೋಗ. ವ್ಯಕ್ತಿಯು ಉನ್ನತ ಸಾಧನೆ ಮಾಡಲು ಯೋಗ ಮತ್ತು ಧ್ಯಾನ ಅತಿ ಮುಖ್ಯವಾದ ಪಾತ್ರ ವಹಿಸುತ್ತದೆ. ಕಾರಣ ದೇಹ ಮತ್ತು ಮನಸನ್ನು ಒಂದುಗೂಡಿಸಿ ಏಕಾಗ್ರತೆಗೊಳಿಸುವುದೇ ಯೋಗದ ಗುರಿ ಎಂದರು.ಇದರಿಂದ ಆಧ್ಯಾತ್ಮಿಕ ಜ್ಞಾನೋದಯವಾಗುತ್ತದೆ. ಕಾರಣ ಪ್ರತಿಯೊಬ್ಬರು ಒತ್ತಡರಹಿತ ಜೀವನ ಸಾಗಿಸಲು ಯೋಗದ ಮೋರೆ ಹೋಗಬೇಕು. ಕೇವಲ ವಿಶ್ವ ಯೋಗ ದಿನಾಚರಣೆ ನಿಮಿತ್ತ ಒಂದು ದಿನ ಯೋಗ ಮಾಡಿದರೆ ಸಾಲದು. ಪ್ರತಿದಿನ ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ವಿವರಿಸಿದರು.ಆರ್ಟ್ ಆಫ್ ಲಿವ್ಹಿಂಗ್ ಸಂಸ್ಥೆಯ ಯೋಗ ಶಿಕ್ಷಕ ಮಹೇಶ ಕೆರಕರ, ಮಲ್ಲನಗೌಡ ಪಾಟೀಲ ಹಾಗೂ ಪ್ರವೀಣ ಶೇರಿ ಅವರು ಯೋಗದ ಮಹತ್ವ ಹಾಗೂ ವಿವಿಧ ಯೋಗಾಸನಗಳ ಪ್ರಕಾರಗಳ ಕುರಿತು ಮಾಹಿತಿ ನೀಡಿದರು. ವಿವಿಧ ಯೋಗಾಸನ ಹಾಗೂ ಪ್ರಾಣಾಯಾಮ ಕುರಿತು. ಪ್ರಾತ್ಯಕ್ಷಿತೆ ನೀಡಿದರು. ಬಂಧಿಗಳು ತುಂಬಾ ಉತ್ಸಾಹದಿಂದ ಯೋಗದಿನಾಚರಣೆಯಲ್ಲಿ ಪಾಲ್ಗೊಂಡು ವಿವಿಧ ಯೋಗಾಸನಗಳನ್ನು ಮಾಡಿದರು.ಕಾರಾಗೃಹ ಸಹಾಯಕ ಅಧೀಕ್ಷ ವಿ.ಕೃಷ್ಣಮೂರ್ತಿ, ಶಿಕ್ಷಕ ಶಶಿಕಾಂತ ಯಾದಗೂಡೆ, ಜೈಲರ್ ಬಸವರಾಜ ಭಜಂತ್ರಿ, ಎಫ್.ಟಿ.ದಂಡಯ್ಯನವರ, ಹಾಗೂ ರಮೇಶ ಕಾಂಬಳೆ ಉಸ್ಥಿತರಿದ್ದರು.