ಶೋಷಿತ ವರ್ಗಗಳ ಆಶಾಕಿರಣ ಎಚ್.ಸಿ.ಮಹದೇವಪ್ಪ: ಮುಡಿಗುಂಡ ಶಾಂತರಾಜು

KannadaprabhaNewsNetwork | Published : Apr 21, 2025 12:47 AM

ಸಾರಾಂಶ

ದಮನಿತ ಹಾಗೂ ಶೋಷಿತ ವರ್ಗಗಳ ಆಶಾಕಿರಣವಾಗಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ದಶಕಗಳಿಂದಲೂ ಇವರ ಸೇವೆ ಮಾಡುತ್ತಾ ಬಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ನಗರಸಭಾ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ದಮನಿತ ಹಾಗೂ ಶೋಷಿತ ವರ್ಗಗಳ ಆಶಾಕಿರಣವಾಗಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ದಶಕಗಳಿಂದಲೂ ಇವರ ಸೇವೆ ಮಾಡುತ್ತಾ ಬಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ನಗರಸಭಾ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು ಬಣ್ಣಿಸಿದರು.

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಗಂಗಾಧರೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಎಚ್.ಸಿ.ಮಹದೇವಪ್ಪ, ದಿ. ಆರ್. ಧ್ರುವನಾರಾಯಣ, ದಿ. ಎಸ್. ಜಯಣ್ಣ, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅಭಿಮಾನಿ ಬಳಗದ ಸಹಯೋಗದಲ್ಲಿ ನಡೆದ ಎಚ್.ಸಿ. ಮಹದೇವಪ್ಪರವರ 72ನೇ ಜನ್ಮದಿನಾಚರಣೆ ನಿಮಿತ್ತ ಸೋಲಿಗ ಮಹಿಳೆಯರಿಗೆ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹದೇವಪ್ಪ ಶಾಸಕರಾಗಿ, ಮಂತ್ರಿಯಾಗಿ ರಾಜ್ಯಕ್ಕೆ ಅತ್ಯುನ್ನತ ಕೊಡುಗೆಗಳನ್ನು ನೀಡಿದ್ದಾರೆ. ರಾಜಕೀಯ ಸದೃಢತೆಯನ್ನು ಹೊಂದಿ, ಸಮಾಜದಲ್ಲಿ ಅತಿ ತುಳಿತಕ್ಕೆ ಒಳಗಾದ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಪುತ್ರ ಸುನೀಲ್‌ ಬೋಸ್ ಕೂಡ ಚಾಮರಾಜನಗರದ ಸಂಸದರಾಗಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಸೋಲಿಗರ ಅಭಿವೃದ್ಧಿಗೆ ಹೆಚ್ಚು ಕಾಳಜಿ ಹೊಂದಿರುವ ಇವರು, ಮುಂದಿನ ದಿನಗಳಲ್ಲಿ ಇಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕರಾಗಿದ್ದಾರೆ. ಆದಷ್ಟು ಬೇಗ ಇಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಮಾತನಾಡಿ, ಮಹದೇವಪ್ಪ ಸಂವಿಧಾನದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಸಂವಿಧಾನದ ಪೀಠಿಕೆಯನ್ನು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳಿಸುವ ಮೂಲಕ ನಮ್ಮ ದೇಶದ ಸಂವಿಧಾನದ ಅರಿವನ್ನು ಪ್ರಾಥಮಿಕ ಹಂತದಲ್ಲೇ ನೀಡುವ ಕೆಲಸವನ್ನು ಮಾಡಿದ್ದಾರೆ ಎಂದರು.

ನಂತರ ಸೋಲಿಗ ಮಕ್ಕಳು, ಮಹಿಳೆಯರು ಕೇಕ್ ಕತ್ತರಿಸಿದರು. ಸೋಲಿಗ ಮಹಿಳೆಯರಿಗೆ ಸೀರೆಗಳನ್ನು ವಿತರಣೆ ಮಾಡಿ, ಅನ್ನದಾನವನ್ನು ಮಾಡಲಾಯಿತು.

ಜಿಪಂ ಮಾಜಿ ಉಪಾಧ್ಯಕ್ಷೆ ಕೇತಮ್ಮ, ನಗರಸಭಾ ಮಾಜಿ ಉಪಾಧ್ಯಕ್ಷ ಅಕ್ಮಲ್‌ಪಾಷ, ಮಾಜಿ ಅಧ್ಯಕ್ಷೆ ಸುಶೀಲಾ ಶಾಂತರಾಜು, ಮುಖಂಡ ಡಿ.ಎನ್. ನಟರಾಜು, ಪರಶಿವಪ್ಪ, ನಂಜುಂಡೇಗೌಡ, ಭಾಗ್ಯಮ್ಮ, ತಾಪಂ ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು, ಸೋಮಶೇಖರ್, ಕೆಸ್ತೂರು ಸಿದ್ಧರಾಜು, ಮಧು, ಪಪಂ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ ಮಾತನಾಡಿದರು. ನಗರಸಭಾ ಸದಸ್ಯರಾದ ಪುಷ್ಪಲತಾ ಶಾಂತರಾಜು, ಮನೋಹರ್, ರಾಜೇಶ್, ಮುಖಂಡರಾದ ವೆಂಕಟೇಶ್, ಚಾಮದಾಸ್, ಜಯಣ್ಣ, ದೇವಿಕಾ ವರದರಾಜು, ಮರಿಸ್ವಾಮಿ, ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ, ಸದಸ್ಯೆ ಮಾದಮ್ಮ, ನಾಗೇಶ್, ನಾಗರಾಜು, ಶಶಿಕುಮಾರ್, ಖದೀರ್ ಸೇರಿದಂತೆ ಅನೇಕರು ಇದ್ದರು.

Share this article