ರಾಮನಗರ: ನಾಡೋಜ ಎಚ್.ಎಲ್.ನಾಗೇಗೌಡ ಅವರ ಸಮಗ್ರ ಕೃತಿಗಳನ್ನು ಹಂತ ಹಂತವಾಗಿ ಪುನರ್ ಪ್ರಕಟಿಸುವ ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.
ಎಚ್.ಎಲ್.ನಾಗೇಗೌಡರ ಅಪರೂಪದ ಕೃತಿಗಳು ಓದುಗರಿಗೆ ಸಿಗುತ್ತಿಲ್ಲ. ಹೀಗಾಗಿ ಓದುಗರ ಅಪೇಕ್ಷೆಯ ಹಿನ್ನೆಲೆಯಲ್ಲಿ ಅವರ ಕೃತಿಗಳ ಪುನರ್ ಮುದ್ರಣದ ಅವಶ್ಯಕತೆ ಮನಗಂಡು ಅವರ ಸಮಗ್ರ ಕೃತಿಗಳನ್ನು ಪ್ರಕಟಿಸುವ ಯೋಜನೆ ರೂಪಿಸಿದ್ದೇವೆ. ಇದಕ್ಕಾಗಿ ಅವರ ಕುಟುಂಬದವರಿಂದ ಅನುಮತಿ ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ಚಿತ್ರ ಕುಟೀರ ಮರು ನಿರ್ಮಾಣ:ನಾಗೇಗೌಡರ ಜೀವನ ಮತ್ತು ಸಾಧನೆಗಳನ್ನು ಚಿತ್ರ ಮತ್ತು ವಸ್ತುಗಳ ಸಮೇತ ಪರಿಚಯಿಸುವ ಚಿತ್ರ ಕುಟೀರ ಶಿಥಿಲಾವಸ್ಥೆಯಲ್ಲಿದೆ. ಅದನ್ನು 35 ಲಕ್ಷ ರುಪಾಯಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈ ಆರ್ಥಿಕ ವರ್ಷದ ಅಂತ್ಯಕ್ಕೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಜಾನಪದ ಲೋಕದ ಪ್ರಕಟಣೆಗಳ ಪ್ರದರ್ಶನ, ಮಾರಾಟ, ಜನಪದ ಮತ್ತು ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ಪ್ರತ್ಯೇಕ ಮಳಿಗೆ ತೆರೆಯಲು ಚಿಂತನೆ ನಡೆಸಲಾಗಿದೆ.
ಡಿಪ್ಲೊಮಾ ತರಗತಿಗಳು ಪ್ರಾರಂಭ:
ಕಳೆದ ಎರಡು ವರ್ಷದಿಂದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್ ನಡೆಸುತ್ತಿದ್ದು, ಶೈಕ್ಷಣಿಕ ವರ್ಷಕ್ಕೆ ವಿಶ್ವವಿದ್ಯಾಲಯದ ನಿಯಮಾನುಸಾರ ಒಟ್ಟು 70 ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ನೀಡಲಾಗಿದೆ ಎಂದರು.
ಸರ್ಕಾರದ ಅನುದಾನ ಸಾಲುತ್ತಿಲ್ಲ:
ಮುಖ್ಯಮಂತ್ರಿ ಸಿದ್ದರಾಮಯ್ಯ ಜಾನಪದ ಲೋಕಕ್ಕೆ 2 ಕೋಟಿ ವಿಶೇಷ ಅನುದಾನ ಘೋಷಣೆ ಮಾಡಿದ್ದರು. ಇದರಲ್ಲಿ 1 ಕೋಟಿ ರುಪಾಯಿ ಮಾತ್ರ ಬಂದಿದ್ದು, ಉಳಿಕೆ 1 ಕೋಟಿ ಇನ್ನೂ ಬಿಡುಗಡೆಯಾಗಿಲ್ಲ. ನಾಗೇಗೌಡರ ಕೃತಿಗಳ ಮರು ಮುದ್ರಣಕ್ಕೂ ಹೆಚ್ಚಿನ ಹಣ ಖರ್ಚಾಗಲಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅನುದಾನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಬಾಕ್ಸ್..............
ರಾಮನಗರ: ನಗರದ ಹೊರ ವಲಯದ ಜಾನಪದ ಲೋಕದಲ್ಲಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ದಸರಾ ಬೊಂಬೆಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಆಯೋಜಿಸಿರುವ ದಸರಾ ಬೊಂಬೆಗಳು ಇಂದಿನಿಂದ ಒಂದು ತಿಂಗಳ ಕಾಲ ಪ್ರದರ್ಶನವಿರಲಿದೆ.
ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಜಾನಪದ ಲೋಕದಲ್ಲಿ ಕಳೆದ 28 ವರ್ಷಗಳಿಂದಲೂ ಗೊಂಬೆ ಕೂರಿಸಲಾಗುತ್ತಿದೆ. ಇದರ ಅಂಗವಾಗಿ ನವರಾತ್ರಿಯ 9 ದಿನಗಳಲ್ಲದೇ ಒಂದು ತಿಂಗಳ ಕಾಲ ಬೊಂಬೆ ಪ್ರದರ್ಶನ ಜಾನಪದ ಲೋಕದಲ್ಲಿ ಇರಲಿದೆ ಎಂದರು.ಈ ಪ್ರದರ್ಶನದಲ್ಲಿ ವಿಶ್ವದ ವಿವಿಧ ದೇಶಗಳ ವೇಷ-ಭೂಷಣದ ಆಕೃತಿಗಳು ಕಾಣಸಿಗಲಿವೆ. ಇಲ್ಲಿ ಪಟ್ಟದ ಗೊಂಬೆಗಳು, ಶಿವ, ಪಾರ್ವತಿ, ವಿಷ್ಣು, ಲಕ್ಷ್ಮಿ, ಸರಸ್ವತಿ, ಗೋವರ್ಧನ ಗಿರಿ ಎತ್ತಿದ ಕೃಷ್ಣ, ವಿಷ್ಣು ಪರಿವಾರ, ರಾವಣನ ದರ್ಬಾರ್, ದೇವಸ್ಥಾನದ ಮುಂದೆ ಕುಣಿತ, ಮೈಸೂರು ಅರಮನೆ... ಹೀಗೆ ಹತ್ತು ಹಲವು ವಿಶೇಷ ಬೊಂಬೆಗಳು ಅನಾವರಣಗೊಳ್ಳಲಿವೆ ಎಂದು ತಿಳಿಸಿದರು.
ಬಾಕ್ಸ್.............ಅ.2ರಂದು ಬನ್ನಿಪೂಜೆ:
ವಿಜಯದಶಮಿಯಂದು ಬನ್ನಿ ಪೂಜೆ ಆಚರಿಸಲಾಗುತ್ತಿದೆ. ಈ ಬನ್ನಿ ಎಲೆಯನ್ನು ಕಿರಿಯರು - ಹಿರಿಯರು ಪರಸ್ಪರ ಹಂಚಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಜಾನಪದ ಲೋಕದಲ್ಲಿ ವಿಜಯದಶಮಿಯಂದು ಅಂದರೆ ಅ.2ರಂದು ಆರತಿ ಮತ್ತು ದೇವರ ಮೆರವಣಿಗೆಯೊಂದಿಗೆ ಬನ್ನಿಮರದ ಪೂಜಾ ಕಾರ್ಯಕ್ರಮ ನೆರವೇರಲಿವೆ ಎಂದು ಬೋರಲಿಂಗಯ್ಯ ಹೇಳಿದರು.(ಎರಡೂ ಫೋಟೊ ಬಳಸಿ)
22ಕೆಆರ್ ಎಂಎನ್ 3,4.ಜೆಪಿಜಿ3.ಜಾನಪದ ಲೋಕದಲ್ಲಿ ದಸರಾ ಬೊಂಬೆಗಳ ಪ್ರದರ್ಶನಕ್ಕೆ ಕರ್ನಾಟಕ ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಚಾಲನೆ ನೀಡಿದರು.
4.ಜಾನಪದ ಲೋಕದಲ್ಲಿ ದಸರಾ ಬೊಂಬೆಗಳ ಪ್ರದರ್ಶನ.