ಐಹೊಳೆ ಗ್ರಾಮ ಸ್ಥಳಾಂತರಿಸುವ ಎಚ್‌.ವೈ. ಮೇಟಿ ಕನಸು ಶೀಘ್ರ ನನಸು: ವಿಜಯಾನಂದ ಕಾಶಪ್ಪನವರ

KannadaprabhaNewsNetwork |  
Published : Jan 22, 2026, 03:30 AM IST
ಚಾಲುಕ್ಯ ಉತ್ಸವದ 3ನೇ ದಿನದ ಸಮಾರೋಪದ ಉದ್ಘಾಟನೆ - | Kannada Prabha

ಸಾರಾಂಶ

ದೇವಾಲಯಗಳ ವಾಸ್ತುಶಿಲ್ಪಗಳ ತೊಟ್ಟಿಲು ಖ್ಯಾತಿಯ ಐಹೊಳೆಯ ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು ಎನ್ನುವುದು ದಿ.ಶಾಸಕ ಎಚ್.ವೈ. ಮೇಟಿ ಅವರ ಕನಸಾಗಿತ್ತು. ಅವರ ಕನಸು ನನಸಾಗುವ ನಿರ್ಣಯವನ್ನು ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇವಾಲಯಗಳ ವಾಸ್ತುಶಿಲ್ಪಗಳ ತೊಟ್ಟಿಲು ಖ್ಯಾತಿಯ ಐಹೊಳೆಯ ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು ಎನ್ನುವುದು ದಿ.ಶಾಸಕ ಎಚ್.ವೈ. ಮೇಟಿ ಅವರ ಕನಸಾಗಿತ್ತು. ಅವರ ಕನಸು ನನಸಾಗುವ ನಿರ್ಣಯವನ್ನು ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವಿಶ್ವಾಸ ವ್ಯಕ್ತಪಡಿಸಿದರು.

ಹುನಗುಂದ ತಾಲೂಕಿನ ಐಹೊಳೆ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಚಾಲುಕ್ಯ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

11 ವರ್ಷಗಳಿಂದ ನಿಂತುಹೋಗಿದ್ದ ಚಾಲುಕ್ಯ ಉತ್ಸವ ಐಹೊಳೆಯಲ್ಲಿ ನಡೆಯುತ್ತಿದೆ ಎಂದರೆ ಇದಕ್ಕೆ ಮುಖ್ಯ ಕಾರಣವೇ ದಿ. ಎಚ್.ವೈ.ಮೇಟಿ ಅವರು. ಇಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಟಿ ಅವರು ವಹಿಸಬೇಕಿತ್ತು. ಆದರೆ, ಅವರ ಅಕಾಲಿಕ ನಿಧನರಾಗಿದ್ದರಿಂದ ದುಃಖದಿಂದ ಅಧ್ಯಕ್ಷ ಸ್ಥಾನ ನಾನು ವಹಿಸಿಕೊಳ್ಳಬೇಕಾಯಿತು ಎಂದರು.

ಐಹೊಳೆ ಗ್ರಾಮ ಸ್ಥಳಾಂತರ ಮಾಡಿ, ಸ್ಮಾರಕಗಳನ್ನು ಸಂರಕ್ಷಿಸುವ ಬಗ್ಗೆ ಎಚ್.ವೈ.ಮೇಟಿ ಅವರಿಗೆ ಅತೀವ ಕಾಳಜಿ ಇತ್ತು. ಇದಕ್ಕಾಗಿ 2013ರಲ್ಲಿ ನನ್ನನ್ನು ಕರೆದುಕೊಂಡು ಮುಖ್ಯಮಂತ್ರಿಗಳ ಬಳಿಗೆ ಹೋಗಿ ಒತ್ತಾಯ ಮಾಡಿದ್ದರು. ಅವರ ಕನಸನ್ನು ಈಗ ಮುಖ್ಯಮಂತ್ರಿಗಳು ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.

ಬಾಗಲಕೋಟೆ ಜಿಲ್ಲೆ ಚಾಲುಕ್ಯ ಅರಸರ ನಾಡು, ಅಣ್ಣ ಬಸವಣ್ಣನ ನಾಡಾಗಿದೆ. ಇಂತಹ ಧೀಮಂತರನ್ನು ಸ್ಮರಿಸುವ ಕೆಲಸ ಈ ನೆಲದಲ್ಲೇ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ ಬಸವ ಜಯಂತಿಯನ್ನು ಕೂಡಲಸಂಗಮದಲ್ಲಿ ನಡೆಸಿದರು. ನಿಂತುಹೋಗಿದ್ದ ಚಾಲುಕ್ಯ ಉತ್ಸವವನ್ನು ಬಜೆಟ್‌ ನಲ್ಲಿ ಘೋಷಿಸಿ ಹೆಚ್ಚಿನ ಅನುದಾನ ಒದಗಿಸಿದರು ಎಂದು ಹೇಳಿದರು.

ಚಾಲುಕ್ಯರ ಪ್ರಮುಖ ಸ್ಮಾರಕಗಳು ಇರುವ ಅಂದಿನ ವಾತಾಪಿ(ಬಾದಾಮಿ), ಕಿಸುವೊಳಲ್(ಪಟ್ಟದಕಲ್ಲು) ಆರ್ಯಪುರ(ಐಹೊಳೆ) ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮುಖ್ಯವಾಗಿ ಐಹೊಳೆ ಗ್ರಾಮಸ್ಥರು ಇಲ್ಲಿನ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಅನೇಕ ಕಡೆಗೆ ಸ್ಮಾರಕಗಳಿಗೆ ಸೆಗಣಿಯ ಕುಳ್ಳು ತಟ್ಟಿರುವ ದೃಶ್ಯ ಕಂಡು ಬರುತ್ತಿದೆ. ಸ್ಥಳೀಯರೇ ಹೀಗೆ ಮಾಡಿದರೆ ಹೇಗೆ? ಇವುಗಳನ್ನು ರಕ್ಷಿಸುವ ಕೆಲಸವನ್ನು ಗ್ರಾಮಸ್ಥರು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಐಹೊಳೆಗೆ ತನ್ನದೆ ಆದ ಇತಿಹಾಸ ಇದೆ. ಪರಶುರಾಮ ಕ್ಷತ್ರೀಯರನ್ನು ನಾಶ ಪಡಿಸಿದ ಬಳಿಕ ತನ್ನ ಕೊಡಲಿಯನ್ನು ಇದೇ ಹೊಳೆಯಲ್ಲಿ ತೊಳೆದರಂತೆ. ಬೆಳಗ್ಗೆ ತಾಯಂದಿರುವ ಇಲ್ಲಿಗೆ ಬಂದಾಗ ಆ ದೃಶ್ಯ ನೋಡಿ ಐ... ಹೊಳೆ ಎಂದು ಉದ್ಘರಿಸಿದರಂತೆ. ಆ ಬಳಿಕ ಆರ್ಯಪುರಕ್ಕೆ ಐಹೊಳೆ ಹೆಸರು ಬಂತು ಎಂಬ ಐತಿಹ್ಯವಿದೆ ಎಂದು ತಿಳಿಸಿದರು.

ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಚಾಲುಕ್ಯ ಉತ್ಸವ ಮೂರು ದಿನಗಳ ಕಾಲ ಅತ್ಯಂತ ಸಂಭ್ರಮದಿಂದ ನಡೆದಿದೆ. ಈ ಉತ್ಸವ ನಡೆಯಲು ಶ್ರಮ ವಹಿಸಿದವರ ಪೈಕಿ ಎಚ್.ವೈ. ಮೇಟಿ ಅವರ ಪ್ರಮುಖರು. ಆದರೆ, ಇವತ್ತು ಅವರು ನಮ್ಮೊಂದಿಗೆ ಇಲ್ಲ. ಆದರೆ, ಅವರ ಕೆಲಸ ಕಾರ್ಯಗಳು ನಮ್ಮ ನಡುವೆ ಇವೆ. ರಾಜಕೀಯ ಜೀವನದಲ್ಲಿ ನಮಗೆಲ್ಲ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಸ್ಮರಿಸಿಕೊಂಡರು.

ಐಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನಮಂತಗೌಡ ಪಾಟೀಲ, ಕೆಎಂಎಫ್‌ ಅಧ್ಯಕ್ಷ ಕರಿಗೌಡರ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ, ಆರ್ ಆ್ಯಂಡ್ ಆರ್ ಇಲಾಖೆ ಜಿಎಂ ಮಹಾದೇವ ಮುರಗಿ, ಎಸಿ ಸಂತೋಷ ಜಗಲಾಸರ್, ಕಾಂಗ್ರೆಸ್ ಮುಖಂಡ ಉಮೇಶ ಮೇಟಿ ಮತ್ತಿತರರು ಇದ್ದರು.

ಎಚ್.ವೈ.ಮೇಟಿ ಅವರಿಗೆ ಶ್ರದ್ಧಾಂಜಲಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ತಮ್ಮ ಭಾಷಣ ಆರಂಭಕ್ಕೂ ಮುನ್ನ ಎಚ್.ವೈ.ಮೇಟಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಿ, ವೇದಿಕೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಉದ್ಘಾಟನೆ ಉತ್ಸಾಹ ಸಮಾರೋಪಕ್ಕೆ ಇರಲಿಲ್ಲ:11 ವರ್ಷಗಳ ನಂತರ ಶುರುವಾದ ಚಾಲುಕ್ಯ ಉತ್ಸವಕ್ಕೆ ಬಾದಾಮಿಯಲ್ಲಿ 19ರಂದು ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರಿಂದ ಅಂದು ವೇದಿಕೆ ಜನಪ್ರತಿನಿಗಳಿಂದ ತುಂಬಿ ತುಳಕಿತು. 2ನೇ ದಿನ ಪಟ್ಟದಕಲ್ಲಿನಲ್ಲಿ ನಡೆದ ಕಾರ್ಯಕ್ರಮದ ವೇದಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೊರತು ಪಡಿಸಿ ಆವ್ಹಾನಿತ ಯಾವೊಬ್ಬ ಸಚಿವರು ಆಗಮಿಸಲಿಲ್ಲ. ಬೆಳಗ್ಗೆ ಬಾಗಲಕೋಟೆಯಲ್ಲಿ ಸಮುದಾಯದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಾಲುಕ್ಯ ಉತ್ಸವದ ಪ್ರಮುಖ ಆವ್ಹಾನಿತ ಸಚಿವರೂ ಸಹ ವೇದಿಕೆಗೆ ಆಗಮಿಸಲಿಲ್ಲ. 3ನೇ ದಿನ ಸಮಾರೋಪಕ್ಕೆ ಐಹೊಳೆಯ ಕಾರ್ಯಕ್ರಮಕ್ಕೆ ಆವ್ಹಾನಿತ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಸುಳಿಯಲೇ ಇಲ್ಲ. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತ್ರ ಉಪಸ್ಥಿತರಿದ್ದರು. ಹೀಗಾಗಿ ಸಮಾರೋಪದ ಸಭೆ ವೇದಿಕೆ ಖಾಲಿ ಖಾಲಿಯಾಗಿತ್ತು. ಅಧಿಕಾರಿಗಳು ಮಾತ್ರ ಇದ್ದರು. ಒಟ್ಟಾರೆ, ಒಲ್ಲದ ಮನಸ್ಸಿನಿಂದ ಶುರುವಾದ ಚಾಲುಕ್ಯ ಉತ್ಸವ ಅಂತೂ ಇಂತೂ ನಡೆಯಿತಲ್ಲ ಎನ್ನುವುದೊಂದೇ ಸಮಾಧಾನ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌