ಕನ್ನಡಪ್ರಭ ವಾರ್ತೆ ಶಿವಮೊಗ್ಗ
12 ನೇ ಶತಮಾನದಲ್ಲಿ ಅನುಭವ ಮಂಟಪದ ಕಾರ್ಯದರ್ಶಿಯಾಗಿದ್ದ ಶ್ರೇಷ್ಠ ವಚನಕಾರ ಹಡಪದ ಅಪ್ಪಣ್ಣ ಅವರು ಸಮಾಜದಲ್ಲಿನ ಶೋಷಿತ ವರ್ಗಗಳ ಬೆಳವಣಿಗೆಗೆ ವಚನಗಳ ಮೂಲಕ ಕ್ರಾಂತಿಕಾರಿ ಹೋರಾಟ ನಡೆಸಿದ ಶಿವಶರಣ ಎಂದು ಸೂಡಾ ಎಚ್.ಎಸ್.ಸುಂದರೇಶ್ ಹೇಳಿದರು.ನಗರದ ಕುವೆಂಪು ರಮಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ಮಾಡುವ ಹಡಪದ ಅಪ್ಪಣ ಅನುಭವ ಮಂಟಪದಲ್ಲಿ ಕಾರ್ಯದರ್ಶಿಯಾಗಿದ್ದರು. 12ನೇ ಶತಮಾನದಲ್ಲಿ ಬಸವಣ್ಣನ ಅನುಯಾಯಿಯಾಗಿ ಸಮಾಜದ ಕ್ರಾಂತಿಕಾರಿ ಮತ್ತು ವಚನದ ಕ್ರಾಂತಿಕಾರಿ ಶರಣರಾಗಿ ಬೆಳೆದವರು. ಸಮಾಜದಲ್ಲಿನ ಶೋಷಣೆಯನ್ನು ಹೋಗಲಾಡಿಸಲು ಹಲವಾರು ಜನರು ಶ್ರಮಿಸಿದ್ದಾರೆ, ಅದರಲ್ಲಿ ಹಡಪದ ಅಪ್ಪಣ್ಣನವರು ಕೂಡ ಒಬ್ಬರು ಎಂದು ಬಣ್ಣಿಸಿದರು.
ಸಮಾಜದಲ್ಲಿ ಒಡೆದು ಆಳುವ ನೀತಿಯನ್ನು ಹೋಗಲಾಡಿಸಲು ಬಸವಣ್ಣನವರ ಜೊತೆಗೆ ಹೋರಾಟ ನಡೆಸಿದ ಇವರು, 250ಕ್ಕೂ ಹೆಚ್ಚು ವಚನಗಳನ್ನು ಸಮಾಜ ದಲ್ಲಿನ ತಾರತಮ್ಯ ಭಾವನೆ ಇರಬಾರದು ಎಂಬ ಅರ್ಥದಲ್ಲಿ ರಚನೆ ಮಾಡಿದ್ದಾರೆ. ಬಡ ಕುಟುಂಬದಿಂದ ಸಮಾಜದ ಮುಖ್ಯ ವಾಹಿನಿಗೆ ಬಂದು ಸಮಾನತೆಯ ಬಗ್ಗೆ ಅರಿವು ಮೂಡಿಸಿದ ವಚನಕಾರ. ಹಡಪದ ಸಮಾಜದವರು ಇವರನ್ನು ಮಾದರಿಯಾಗಿಟ್ಟುಕೊಂಡು ಮುಂದೆ ಬರಬೇಕು ಎಂದು ಹೇಳಿದರು.ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಮಾತನಾಡಿ, ಹಡಪದ ಸಮುದಾಯದಲ್ಲಿ ಹುಟ್ಟಿದ ಅಪ್ಪಣ್ಣ ಅವರಿಗೆ ಬಸವಣ್ಣ ಉತ್ತಮ ಹುದ್ದೆ ನೀಡಿದರು. 12ನೇ ಶತಮಾನ ದಲ್ಲಿ ಚಂಪೂ, ರಗಳೆ ಕಾವ್ಯಗಳು ಸಾಮಾನ್ಯ ಜನರಿಗೆ ಅರ್ಥೈಸಿಕೊಳ್ಳಲು ಕಷ್ಟಕರವಾಗುತ್ತಿತ್ತು. ಅದಕ್ಕಾಗಿ ಬಸವಣ್ಣನವರು ವಚನಗಳ ಮೂಲಕ ಸಾಮಾನ್ಯರಿಗೆ ಅರ್ಥೈಸಿದರು. ಹಡಪದ ಅಪ್ಪಣ್ಣ ಬಂದ ನಂತರ ಸಮಾಜದಲ್ಲಿ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡರು ಎಂದು ತಿಳಿಸಿದರು.
ಮಹಾನ್ ವ್ಯಕ್ತಿಗಳ ವಚನದಿಂದ ಜಾತಿ ನಿಂದನೆ, ಅನೇಕ ಕಟ್ಟುಪಾಡುಗಳು ಸಾಮಾನ್ಯರಿಗೆ ಅರ್ಥವಾಯಿತು. ಅವರ ಮಡದಿ ಲಿಂಗಮ್ಮ ವಚನಗಾರ್ತಿ ಆಗಿರುವುದು ಹೆಮ್ಮೆಯ ವಿಷಯ. ಇವರ ಸಾಹಿತ್ಯಗಳನ್ನು ನಿಮ್ಮ ಮನೆಯಲ್ಲಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದು ಸಾರ್ಥಕ ಜೀವನವಾಗುತ್ತದೆ. ಹಾಗೂ ಅದು ಅವರಿಗೆ ಗೌರವನ್ನು ನೀಡುವ ಅಂಶವಾಗಿದೆ ಎಂದು ಹೇಳಿದರು.ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ಬಸವಣ್ಣ ಮತ್ತು ಅಂಬೇಡ್ಕರ್ ಒಂದೇ ಭಾವನೆ. ಅವರು ಸಮಾಜದ ಕ್ರಾಂತಿಕಾರರು. ಬಸವಣ್ಣನವರು ಹಡಪದ ಅಪ್ಪಣನವರನ್ನು ತುಂಬಾ ನಂಬಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಅಪ್ಪಣ್ಣನವರು ನಿಷ್ಠೆಯಿಂದ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದರು ಎಂದು ಸ್ಮರಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ. ಎಸ್ ಚಂದ್ರ ಭೂಪಾಲ್ ಮಾತನಾಡಿ, 12ನೇ ಶತಮಾನದಲ್ಲಿ ಕಾಯಕ ನಿಷ್ಠೆ ಮತ್ತು ನೇರ ನುಡಿಯಿಂದ ಬಸವಣ್ಣನವರ ಜೊತೆಗೆ ಗುರುತಿಸಿ ಕೊಂಡ ಶರಣರು ಅಪ್ಪಣ್ಣ. ಬಸವಣ್ಣನವರ ಆಪ್ತ ಸಹಾಯಕರಾಗಿ, ಅನುಭವ ಮಂಟಪದ ಕಾರ್ಯ ದರ್ಶಿಯಾಗಿ ಸೇವೆ ಸಲ್ಲಿಸಿದವರು. ಸಮಾಜದ ಅಂಕುಡೊಂಕು, ನಿರುದ್ಯೋಗದ ಬಗ್ಗೆ ತಮ್ಮ ವಚನದಲ್ಲಿ ಅರಿವು ಮೂಡಿಸಿದವರು. ಅವರ ವಚನಗಳಲ್ಲಿನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಸಂಘದ ಜಿಲ್ಲಾ ಮಟ್ಟದ ಅಧ್ಯಕ್ಷರಾದ ಮಲ್ಲೇಶಪ್ಪ, ಹಡಪದ ಅಪ್ಪಣ್ಣ ಸಂಘದ ತಾಲೂಕು ಅಧ್ಯಕ್ಷರಾದ ಎಚ್.ಎಸ್ ವೀರಭದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್. ಪ್ರಿಯದರ್ಶಿನಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ವೀರೇಶ್ ಮತ್ತಿತರರಿದ್ದರು.