ವೇಣೂರು ಬಾಹುಬಲಿಗೆ ಹಗಲು ಮಹಾಮಜ್ಜನ; ವಿವಿಧ ಅಭಿಷೇಕಗಳಲ್ಲಿ ಕಂಗೊಳಿಸಿದ ಶ್ರೀ ಗೋಮಟೇಶ್ವರ

KannadaprabhaNewsNetwork |  
Published : Feb 26, 2024, 01:35 AM IST
ವಿವಿಧ ಅಭಿಷೇಕಗಳಲ್ಲಿ ಕಂಗೊಳಿಸುತ್ತಿರುವ ಬಾಹುಬಲಿ | Kannada Prabha

ಸಾರಾಂಶ

ವೇಣೂರಿನಲ್ಲಿ ಶ್ರೀ ಗೋಮಟೇಶನ ವಿಗ್ರಹಕ್ಕೆ ಫೆ.22ರಿಂದ ರಾತ್ರಿ ವೇಳೆ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು, ಭಾನುವಾರ ಹಗಲಿನಲ್ಲಿ ವಿಶೇಷವಾದ ಅಭಿಷೇಕ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವೇಣೂರಿನಲ್ಲಿ ಶ್ರೀ ಗೋಮಟೇಶನ ವಿಗ್ರಹಕ್ಕೆ ಫೆ.22ರಿಂದ ರಾತ್ರಿ ವೇಳೆ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು, ಭಾನುವಾರ ಹಗಲಿನಲ್ಲಿ ವಿಶೇಷವಾದ ಅಭಿಷೇಕ ನಡೆಯಿತು.

ಯುಗಳ ಮುನಿಶ್ರೀಗಳಾದ 108 ಶ್ರೀ ಅಮೋಘಕೀರ್ತಿ ಮಹಾರಾಜರ ಹಾಗೂ 108 ಶ್ರೀ ಅಮರಕೀರ್ತಿ ಮುನಿಮಹಾರಾಜರ ದೀಕ್ಷಾ ಮಹೋತ್ಸವದ ರಜತ ಸಂಭ್ರಮದ ದಿನವಾಗಿದ್ದರಿಂದ ಸ್ವತಃ ಶ್ರೀಗಳೇ ಅಟ್ಟೋಳಿಗೆ ಮೇಲೇರಿ ಬಾಹುಬಲಿಯ ಶಿರಕ್ಕೆ ಅಭಿಷೇಕ ಮಾಡಿದರಲ್ಲದೆ ನೇತೃತ್ವ ವಹಿಸಿದರು. ಮಾತಾಜಿಯವರೂ ಪಾಲ್ಗೊಂಡಿದ್ದರು.

ಪರಮಜಿನದೇವನಿಗೆ ಜಲಾಭಿಷೇಕವು ಹಿಮಗಿರಿಯಿಂದ ಗಂಗಾ, ಸಿಂಧು ನದಿಗಳು ಹರಿದು ಬಂದಂತೆ ಧಾರೆಯಾಗಿ ಜಲವು ಹರಿದು ಬಂತು. ಪಂಚಾಮೃತ ಅಭೀಷೇಕದ ನಂತರ ಕರ್ಮ ನಾಶ ಮಾಡುವ ಎಳನೀರನ್ನು, ಭಕ್ತಿಭಾವನೆ ಮೂಡಿಸುವ ಇಕ್ಷುರಸದಿಂದ ಮಜ್ಜನ ಮಾಡಲಾಯಿತು. ನಂತರ ನೊರೆಹಾಲಿನ ಮಹಾಮಜ್ಜನ ನಡೆಯಿತು. ನಂತರ, ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಿ, ಕೊನೆಯಲ್ಲಿ ಮಂದಾರ, ಮಲ್ಲಿಗೆ, ಕುಂದ, ಸೇವಂತಿಗೆ, ಜಾಜಿ ಮೊದಲಾದ ಹೂಗಳಿಂದ ಪುಷ್ಪವೃಷ್ಟಿ ನಡೆದಾಗ ಮತ್ತು ಬೃಹತ್ ಹಾರವನ್ನುತೊಡಿಸುವುದರ ಮೂಲಕ ಅಭಿಷೇಕದ ಪ್ರಕ್ರಿಯೆಗಳು ಕೊನೆಗೊಂಡವು. ಮಂಗಳಾರತಿಯೊಂದಿಗೆ ಹಗಲು ಹೊತ್ತಿನ ಮಹಾಮಜ್ಜನ ಸಂಪನ್ನಗೊಂಡಿತು.

===ಮುನಿಶ್ರೀಗಳೊಂದಿಗೆ ಬೆಂಗಳೂರು, ತುಮಕೂರು ಪ್ರದೇಶದ ಜಿನಬಂಧುಗಳು ಅಭಿಷೇಕದಲ್ಲಿ ಪಾಲ್ಗೊಂಡು ಹಗಲು ಹೊತ್ತಿನ ಅಪೂರ್ವ ಮಜ್ಜನಕ್ಕೆ ಕಾರಣರಾದರು.

ಮುನಿವೃಂದದ ಇಚ್ಛೆ ಪೂರ್ಣ:

ಶ್ರವಣಬೆಳಗೊಳ ಹಾಗೂ ಧರ್ಮಸ್ಥಳದಲ್ಲಿ ಹಗಲು ಹೊತ್ತಿನಲ್ಲಿ ಅಭಿಷೇಕ ಸಂಪನ್ನವಾದರೆ, ಕಾರ್ಕಳ ಹಾಗೂ ವೇಣೂರಿನಲ್ಲಿ ರಾತ್ರಿ ಹೊತ್ತು ಅಭಿಷೇಕ ನಡೆಸಲಾಗುತ್ತದೆ. ಮುನಿವೃಂದದವರು ರಾತ್ರಿ ವೇಳೆಯ ಅಭಿಷೇಕವನ್ನು ವೀಕ್ಷಿಸುವ ಪರಿಪಾಠವಿಲ್ಲ. ಹೀಗಾಗಿ ಮುನಿಶ್ರೀಗಳು, ಮಾತಾಜಿಯವರು ಅಭಿಷೇಕ ನಡೆಸಬೇಕು ಮತ್ತು ವೀಕ್ಷಿಸಬೇಕು ಎಂಬ ಉದ್ದೇಶದಿಂದ ಮತ್ತು ಅವರ ಇಚ್ಛೆಯಂತೆ ಒಂದು ದಿನ ಹಗಲು ಹೊತ್ತಿನಲ್ಲಿ ಮಹಾಭಿಷೇಕವನ್ನು ನಡೆಸುವ ಪದ್ಧತಿ ಹಾಕಿಕೊಳ್ಳಲಾಗಿದೆ.

ಮಸ್ತಕಾಭಿಷೇಕದಲ್ಲಿ ಇಂದಿನ ಕಾರ್ಯಕ್ರಮ:

ಸೋಮವಾರ ನಿತ್ಯ ವಿಧಿ ಸಹಿತ ಬೃಹತ್ ಯಾಗ ಮಂಡಲ ಯಂತ್ರಾರಾಧನಾ ವಿಧಾನ, ಮಂಟಪ ಪ್ರತಿಷ್ಠೆ, ವೇದಿ ಪ್ರತಿಷ್ಠೆ, ಅಗ್ರೋದಕ ಮೆರವಣಿಗೆ ನಡೆಯಲಿದೆ. ಸಂಜೆ 6.30ರಿಂದ ಜಲಯಾತ್ರಾ ಮಹೋತ್ಸವ, ಮಾತು ರಾಹ್ವಾನಾದಿ ಕ್ರಿಯಾಯುಕ್ತ ಗರ್ಭಾವತರಣ ಕಲ್ಯಾಣ ನಡೆದು ಬಳಿಕ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ