-ಶಾಸಕ ಮತ್ತಿಮೂಡ್ ಮಾಹಿತಿ । ರೈತರ ಸಹಭಾಗಿತ್ವದ ವಸತಿ ಯೋಜನೆ । ಡಿಸಿ ಇಕ್ರಮ ಶರೀಫ್ ಚಾಲನೆ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ (ಜಿಡಿಎ) ವತಿಯಿಂದ ಡಾ. ಖಮರ-ಉಲ್-ಇಸ್ಲಾಂ ಹಾಗರಗಾ ೫೦:೫೦ ರೈತರ ಸಹಭಾಗಿತ್ವದ ವಸತಿ ಯೋಜನೆಯಡಿ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಬಸವರಾಜ ಮತ್ತಿಮೂಡ್ ಹೇಳಿದರು.ಗುವಿವಿ ಅಂಬೇಡ್ಕರ್ ಸಭಾಂಗಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಡಾ.ಖಮರ-ಉಲ್-ಇಸ್ಲಾಂ ಹಾಗರಗಾ ೫೦-೫೦ ರೈತರ ಸಹಭಾಗಿತ್ವದ ವಸತಿ ಯೋಜನೆ, ಲಾಟರಿ ಮೂಲಕ ನೀವೇಶನ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿವೇಶನ ಹಂಚಿಕೆಯಲ್ಲಿ ಮಾಜಿ ಸೈನಿಕರು, ಬಡವರು ಹಾಗೂ ವಸತಿ ರಹಿತರಿಗೆ ಸರ್ಕಾರಿ ನಿಯಮದಂತೆ ಸಬ್ಸಿಡಿ ಮತ್ತು ಆದ್ಯತೆ ನೀಡಬೇಕು. ಹಾಗರಗಾ ಬಡಾವಣೆಗೆ ರಸ್ತೆ, ಕುಡಿವ ನೀರು ಮೂಲಸೌಕರ್ಯ ಕಲ್ಪಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಜಿಲ್ಲಾಧಿಕಾರಿ ಇಕ್ರಮ ಶರೀಫ್ ಸಸಿಗೆ ನೀರೆರೆದು ಚಾಲನೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಸುಬ್ಬರಾವ್ ಮಾತನಾಡಿ, ನಗರದಲ್ಲಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗಬಾರದು, ಅಧಿಕೃತ ಬಡಾವಣೆಗಳೇ ಬರಬೇಕು ಎಂಬಲ್ಲಿ ರಾಜ್ಯ ಸರ್ಕಾರವು ೫೦:೫೦ ಯೋಜನೆ ಜಾರಿಗೆ ತಂದಿದ್ದೆ. ಒಟ್ಟು ೧೧೭ ಎಕರೆ ೫ ಗುಂಟೆ ಜಮೀನಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದ್ದು, ಪ್ರಾಧಿಕಾರದ ವಶದಲ್ಲಿರುವ ೭೬೯ ನಿವೇಶನ ಜನರಿಗೆ ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಸಾರ್ವಜನಿಕರು ಲಾಟರಿ ಪ್ರಕ್ರಿಯೆ ಮುಗಿದ ನಂತರ ಏನೇ ಸಮಸ್ಯೆ ಅಥವಾ ಸಂದೇಹಗಳಿದ್ದರೂ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದರು.
ಈ ಲಾಟರಿ ಪ್ರಕ್ರಿಯೆಯಲ್ಲಿ ಎಸ್‌ಟಿ ಮೀಸಲಾತಿ ವರ್ಗದಡಿ ಸಂಗೀತಾ ಶರಣಪ್ಪ ಮೇತ್ರೆ ಅರ್ಜಿ ಸಂಖ್ಯೆ ೨೬೦ ಅವರಿಗೆ ನಿವೇಷನ ಸಂಖ್ಯೆ ೫೫೫ ಹಂಚಿಕೆಯಾದರೆ, ಎಸ್‌ಸಿ ವರ್ಗದಡಿ ಪ್ರೇಮಲತಾ ಗಂಡ ದತ್ತು ಅರ್ಜಿ ಸಂಖ್ಯೆ ೨೧೯ ಅವರಿಗೆ ನಿವೇಶನ ಸಂಖ್ಯೆ ೫೫೧ ಲಭಿಸಿತು.
ಮೇಯರ್ ವರ್ಷ ರಾಜೀವ ಜಾನೆ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಆಯುಕ್ತ ಅವಿನಾಶ್ ಸಿಂಧೆ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶೈಲೇಂದ್ರ ಸಿಂಗ್, ಡಿ.ಎಫ್.ಒ ಆಶಿಶ್ ರೆಡ್ಡಿ, ಪಾಲಿಕೆಯ ಸದಸ್ಯರಾದ ಅಯಾಜ್ ಖಾನ್ (ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು), ರಿಯಾಜ್ ಅಹಮದ್, ಖುಸ್ರೋ ಜಾಗೀರ್ದಾರ್, ಲಿಯಾಕತ್ ಪಾಟೀಲ್, ಸಾಜಿದ್ ಕಲ್ಯಾಣಿ, ಸಚಿನ್ ಶಿರವಾಳ್ ಇದ್ದರು.ಫೋಟೊ