)
ಕನ್ನಡ ಪ್ರಭ ವಾರ್ತೆ ಬೆಂಗಳೂರು
ಸಂಜೆ ಜನರು ಕೆಲಸ ಮುಗಿಸಿ ಮನೆಗಳಿಗೆ ತೆರಳುತ್ತಿದ್ದ ಸಮಯ ತುಂತುರು ಹನಿಗಳಿಂದ ಆರಂಭವಾದ ಮಳೆ ಬಿರುಸಿನಿಂದ ಆಲಿಕಲ್ಲು ಸಹಿತ ರಭಸವಾಗಿ ಸುರಿಯಲು ಆರಂಭಿಸಿತು. ಮಳೆಗೆ ವಾಹನ ಸವಾರರು ಅಲ್ಲಲ್ಲಿ ಆಶ್ರಯ ಪಡೆದುಕೊಂಡರೆ, 10 ನಿಮಿಷಗಳ ನಂತರ ಗಾಳಿ ಬೀಸುತ್ತಿದ್ದಂತೆ ಅಲ್ಲಲ್ಲಿ ಮರಗಳು ಧರೆಗೆ ಉರುಳಿವೆ. ಸುಮಾರು 58 ನಿಮಿಷಗಳ ಕಾಲ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಕೆ.ಆರ್.ವೃತ್ತದ ಸಮೀಪ ಅಂಡರ್ ಪಾಸ್ ನಲ್ಲಿ ನೀರು ತುಂಬಿದ ಪರಿಣಾಮ ವಾಹನಗಳು ಸಂಚರಿಸಲು ಸಾಧ್ಯವಾಗದೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಶೇಷಾದ್ರಿಪುರಂ ಸಮೀಪ ರೈಲ್ವೆ ಅಂಡರ್ ಪಾಸ್ ನಲ್ಲಿಯೂ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಮಳೆಯಿಂದ ಮೆಜೆಸ್ಟಿಕ್, ಕೆಂಪೇಗೌಡ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಶೇಷಾದ್ರಿರಸ್ತೆ, ವಿಧಾನಸೌಧ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಚರಂಡಿ ನೀರು ಮಳೆ ನೀರು ರಸ್ತೆ ತುಂಬಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿತ್ತು.ಇಂದಿರಾನಗರ ನಗರದಲ್ಲಿ ಬೃಹತ್ ಮರಬಿದ್ದು ಕಾರು ಜಖಂಗೊಂಡಿದ್ದು, ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಿಟಿ ಆಸ್ಪತ್ರೆ ಸಮೀಪ ಮರವೊಂದು ಧರೆಗುರುಳಿದೆ. ಕೆ.ಆರ್.ಪುರಂನ ದೂರವಾಣಿ ನಗರದಲ್ಲಿ ಮರ ಹಾಗೂ ವಿದ್ಯುತ್ ಕಂಬ ರಸ್ತೆ ಮಧ್ಯೆಯೇ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸವಾರರು ಪರದಾಡಬೇಕಾಯಿತು. ಸ್ಥಳೀಯರು ಆತಂಕಗೊಂಡಿದ್ದು, ಪೊಲೀಸರು ಹಾಗೂ ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ಕರೆ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದರು.
ಮಹದೇವಪುರದಲ್ಲಿ ಗಾಳಿಗೆ ಬೃಹತ್ ಮರ ಉರುಳಿಬಿದ್ದ ಪರಿಣಾಮ ಆರು ಕಾರುಗಳು, 2 ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಕ್ವೀನ್ಸ್ ರಸ್ತೆಯಲ್ಲಿ ಮರದ ಕೊಂಬೆ ಬಿದ್ದು ಸಂಚಾರ ಅಡಚಣೆ ಉಂಟಾಗಿತ್ತು. ಗಾಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ವೃಷಭಾವತಿ ನದಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿತ್ತು ಮಳೆಯಿಂದಾಗಿ ಹೂಳು ಮತ್ತೊಮ್ಮೆ ಮೋರಿ ಸೇರಿಕೊಂಡಿದೆ. ವಿಷಯ ತಿಳಿದ ಕೂಡಲೆ ಪಾಲಿಕೆ ಸಿಬ್ಬಂದಿ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಲು ಆರಂಭಿಸಿದರು.
ಇನ್ನೂ ಮೂರು ದಿನ ಮಳೆ
ಗುರುವಾರ (ಮೇ21) ನಗರದಲ್ಲಿ ಸರಾಸರಿ 44.2 ಮಿಲಿಮೀಟರ್ ಮಳೆಯಾಗಿದೆ. ಏಪ್ರಿಲ್ 29ರಂದು ನಗರದಲ್ಲಿ 111.5 ಮಿಲಿಮೀಟರ್ ಮಳೆಯಾಗಿತ್ತು.