ನರಗುಂದ: ವಚನ ಪಿತಾಮಹ ಡಾ. ಫ.ಗು ಹಳಕಟ್ಟಿ ಅವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಮನೆ ಮನೆ ತಿರುಗಿ ಸಂಗ್ರಹಿಸಿ, ಸಂರಕ್ಷಿಸಿ, ಪ್ರಕಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಗದುಗಿನ ಸರ್ ಸಿದ್ದಪ್ಪ ಕಂಬಳಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿದಾರ ವೀರನಗೌಡ ಮರಿಗೌಡರ ತಿಳಿಸಿದರು.
ಅಂದಿನ ಕಾಲದಲ್ಲಿ ಮರೆತುಹೋಗಿದ್ದ ಮತ್ತು ಧೂಳು ಹಿಡಿಯುತ್ತಿದ್ದ ಶರಣರ ವಚನಗಳ ತಾಳೆಗರಿ ಹಾಗೂ ಹಸ್ತಪ್ರತಿಗಳನ್ನು ಹುಡುಕಲು ಹಳ್ಳಿ ಹಳ್ಳಿಗೆ ಸೈಕಲ್ ಮೇಲೆ ಸುತ್ತಿ ಮನೆ- ಮನೆಗಳಿಂದ ಸಂಗ್ರಹಿಸಿದರು. ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ಹಣದ ಕೊರತೆಯಾದಾಗ ತಮ್ಮ ಸ್ವಂತ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯವನ್ನು ಸ್ಥಾಪಿಸಿದ ಮಹಾನುಭಾವರು. ಅವರು ಸ್ಥಾಪಿಸಿದ ಹಿತಚಿಂತಕ ಮುದ್ರಣಾಲಯಕ್ಕೆ ಇಂದಿಗೆ ನೂರು ವರ್ಷ ಸಂದಿವೆ ಎಂದರು.
ರಾಮದುರ್ಗ ತಾಲೂಕು ಕುರುಬರ ಸಂಘದ ಅಧ್ಯಕ್ಷ ಪಡಿಯಪ್ಪ ಕ್ವಾರಿ ಮಾತನಾಡಿ, ಶಾಂತಲಿಂಗ ಶ್ರೀಗಳು ಪುಟ್ಟ ಹಳ್ಳಿಯಲ್ಲಿದ್ದುಕೊಂಡು ಕನ್ನಡ ಸೇವೆಗಾಗಿ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ತಾಯಿ ಕನ್ನಡಾಂಬೆಯ ಸೇವೆಯನ್ನು ನಿರಂತರವಾಗಿ ಮಾಡುತ್ತಿರುವುದು ಅಭಿನಂದನೀಯ ಎಂದರು.ಈ ಸಂದರ್ಭದಲ್ಲಿ ಶ್ರದ್ಧಾಸ್ವರ ವೆಲ್ಫೇರ್ ಸಂಸ್ಥೆಯಿಂದ ಹಾಗೂ ಹಲವಾರು ಬಾಲಕಲಾವಿದರಿಂದ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು, ಭಜನಾ ಮಂಡಳಿಯವರಿಂದ ವಚನ ಸಂಗೀತ ನೆರವೇರಿತು. ಶಾಂತಲಿಂಗ ಶ್ರೀಗಳು, ಚನ್ನಬಸಪ್ಪ ಕಂಠಿ, ಎಸ್.ಜಿ. ಮಣ್ಣೂರಮಠ, ಸುಕನ್ಯಾ ಸಾಲಿ, ಮಹೇಶ ಸಾಲಿಮಠ, ಮಾಲಾ ಪಾಟೀಲ, ಮಂಗಳಾ ಪಾಟೀಲ, ಭಾರತಿ ಹೊಂಗಲ್, ಡಾ. ಎ.ಐ. ಹುಯಿಲಗೋಳ, ಜಗದೀಶ ಜಾಧವ, ಚಂದ್ರಶೇಖರ ಸೊಬರದ, ಗಂಗಯ್ಯ ವಸ್ತ್ರದ, ಮಹಾಂತೇಶ ಹಿರೇಮಠ, ಇದ್ದರು.