ಗೋಕರ್ಣ: ಹುಳಸೇಕೇರಿ ಹಾಲಕ್ಕಿ ಒಕ್ಕಲಿಗ ಸಮಾಜದ ಸುಗ್ಗಿ ಹಬ್ಬದ ಮೂರನೇ ದಿನವಾದ ಮಂಗಳವಾರ ರಾತ್ರಿ ಇಲ್ಲಿನ ರಥ ಬೀದಿಯಲ್ಲಿ ಸುಗ್ಗಿ ಜಾಗರ ಎಂದೇ ಕರೆಯಲ್ಪಡುವ ಹಗಣ ಬಹು ಆಕರ್ಷವಾಗಿ ವಿಜೃಂಭಣೆಯಿಂದ ನಡೆಯಿತು.
ಈ ಬಾರಿ ಮಿರ್ಜಾನ ತಾರಿಬಾಗಿಲ ನಡುವಣ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಹಂತದಲ್ಲಿ ಕುಸಿದಿರುವುದನ್ನು ರೂಪಕದ ಮೂಲಕ ತೋರ್ಪಡಿಸಿದ್ದು ಅಲ್ಲದೆ ಜನರು ಮಾಧ್ಯಮದ ಮೂಲಕ ತಮಗಾದ ತೊಂದರೆಯನ್ನು ವಿವರಿಸುವುದು, ಅಧಿಕಾರಿಗಳ ನಿರ್ಲಕ್ಷ್ಯ, ಕಳಪೆ ಕಾಮಗಾರಿಯನ್ನು ಬಿಂಬಿಸುವ ದೃಶ್ಯ ನೋಡುಗರ ಗಮನ ಸೆಳೆಯಿತು.
ಇನ್ನು ವಿವಿಧ ಮುಖವಾಡ ತೊಟ್ಟು ಸಾಗುವ ಹಲವರು, ರೋಬೋ, ಹಾಲಕ್ಕಿ ಮಹಿಳೆಯರು ತರಕಾರಿ ಮಾರುವ ವೇಷ, ಮರದ ಕಾಲಿನಲ್ಲಿ ಸಾಗುವ ಮಹಿಳೆಯ ವೇಷ ಹೀಗೆ ಅನೇಕ ದೃಶ್ಯರೂಪಕಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಆಕರ್ಷಿಸಿತ್ತು.ಇದೇ ಮೊದಲ ಬಾರಿ ಹಾಲಕ್ಕಿ ಒಕ್ಕಲಿಗ ಸಮಾಜದ ಹೆಣ್ಣುಮಕ್ಕಳು ರೂಪಕದಲ್ಲಿ ಭಾಗವಹಿಸಿದ್ದರು. ಅಲ್ಲದೇ ಸುಗ್ಗಿ ಕುಣಿತದಲ್ಲಿ ಯಕ್ಷಗಾನ ವೇಷಧಾರಿಗಳು ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಬಹುಮಾನ ವಿತರಣೆ: ಉತ್ತಮ ರೂಪಕ ಪ್ರದರ್ಶಿಸಿದವರಿಗೆ ಇಲ್ಲಿನ ಸಾಮಾಜಿಕ ಕಾರ್ಯಕರ್ತ ಸಂತೋಷ್ ಅಡಿ ಹಾಗೂ ಶ್ರೀರಾಮ್ ಸುರೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು.ಸೇತುವೆ ಕುಸಿತದ ರೂಪಕಕ್ಕೆ ಮೊದಲನೇ ಬಹುಮಾನ, ನವದುರ್ಗೆಯರ ರೂಪಕಕ್ಕೆ ಎರಡನೇ ಬಹುಮಾನ, ಕಡಲಾಮೆ ದೃಶ್ಯಕ್ಕೆ ಮೂರನೇ ಬಹುಮಾನ ನೀಡಿದರು. ಹುಳಸೆಕೇರಿ ಸುಗ್ಗಿಯ ಹಿರಿಯ ಗೌಡರಾದ ತಾರಮಕ್ಕಿಯ ಸೋಮಗೌಡ ಬಹುಮಾನ ವಿತರಿಸಿದರು.