ಹಲಸು ಆಹಾರ ಸಂಸ್ಕೃತಿಯ ರಾಯಭಾರಿ: ಅಕ್ಷತಾ ಪಾಂಡವಪುರ

KannadaprabhaNewsNetwork | Published : May 5, 2025 12:53 AM
Follow Us

ಸಾರಾಂಶ

ಹಲಸಿನ ಹಣ್ಣಿನ ತೊಳೆ ತಿನ್ನುವ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದರು. 50 ಸೆಕೆಂಡಿನಲ್ಲಿ 20 ಹಲಸಿನ ತೊಳೆ ತಿನ್ನುವ ಸ್ಪರ್ಧೆ ಏಡಿಸಲಾಗಿತ್ತು. ಕೆ.ಸಿ. ಸೋಮೇಶ್ 45 ಸೆಕೆಂಡಿನಲ್ಲಿ 15 ಹಲಸಿನ ತೊಳೆ ತಿಂದು ಪ್ರಥಮ ಸ್ಥಾನ ಗಳಿಸಿದರು. ಎಸ್‌.ಡಿ. ಮೋಹನ್ ಕುಮಾರ್ ದ್ವಿತೀಯ ಬಹುಮಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ‌ 1.30 ನಿಮಿಷದಲ್ಲಿ 15 ಹಲಸಿನ ತೊಳೆ ತಿಂದ ಸಹನಾ ಮೊದಲ ಬಹುಮಾನಗಳಿಸಿದರು. ಸುಷ್ಮಾ 2ನೇ ಬಹುಮಾನ ಗಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಹಲಸು ಆಹಾರ ಸಂಸ್ಕೃತಿಯ ರಾಯಭಾರಿ. ಔಷಧೀಯ ಗುಣಗಳಿಂದ ಸಮೃದ್ಧವಾದ ಹಲಸಿನ ನಿರಂತರ ಬಳಕೆಯಿಂದ ಆರೋಗ್ಯವನ್ನು ವೃದ್ಧಿಸಬಹುದು. ರೈತರ ಆದಾಯ ಹೆಚ್ಚಿಸಬಹುದು. ಹಲಸನ್ನು ಆಹಾರದ ಭಾಗವಾಗಿ ಮಾಡಿಕೊಳ್ಳಬೇಕು ಎಂದು ಚಿತ್ರ ನಟಿ ಅಕ್ಷತಾ ಪಾಂಡವಪುರ ಹೇಳಿದರು.

ಸಹಜ ಸಮೃದ್ಧ ಹಾಗೂ ರೋಟರಿ ಕ್ಲಬ್ ಮೈಸೂರು ಪಶ್ಚಿಮ ಆಶ್ರಯದಲ್ಲಿ ನಡೆದ ಹಲಸಿನ ಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಹಲಸಿನ‌ ಹಣ್ಣು ತಿನ್ನುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಶಂಕರ ಮತ್ತು ಸಿದ್ದುವಿನಂತ‌ ಹಲಸಿನ ತಳಿಗಳು ತಮ್ಮ ವಿಶಿಷ್ಟ ರುಚಿ ಮತ್ತು ಬಣ್ಣದಿಂದ ಹೆಸರು ಪಡೆದಿವೆ. ಇಂಥ ಪ್ರಾದೇಶಿಕ ಸೊಗಡಿನ ಅನೇಕ ಹಲಸಿನ ತಳಿಗಳು ಕರ್ನಾಟಕದಲ್ಲಿವೆ. ಅವನ್ನು ಜನಪ್ರಿಯಗೊಳಿಸುವ ಕೆಲಸ ನಡೆಯಬೇಕಿದೆ. ಇಂಥ ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಹಲಸಿನ ಬಗ್ಗೆ ಜಾಗೃತಿ ಮೂಡಿಸುವುದು ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.

ಹಲಸಿನ ಹಣ್ಣಿನ ತೊಳೆ ತಿನ್ನುವ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದರು. 50 ಸೆಕೆಂಡಿನಲ್ಲಿ 20 ಹಲಸಿನ ತೊಳೆ ತಿನ್ನುವ ಸ್ಪರ್ಧೆ ಏಡಿಸಲಾಗಿತ್ತು. ಕೆ.ಸಿ. ಸೋಮೇಶ್ 45 ಸೆಕೆಂಡಿನಲ್ಲಿ 15 ಹಲಸಿನ ತೊಳೆ ತಿಂದು ಪ್ರಥಮ ಸ್ಥಾನ ಗಳಿಸಿದರು. ಎಸ್‌.ಡಿ. ಮೋಹನ್ ಕುಮಾರ್ ದ್ವಿತೀಯ ಬಹುಮಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ‌ 1.30 ನಿಮಿಷದಲ್ಲಿ 15 ಹಲಸಿನ ತೊಳೆ ತಿಂದ ಸಹನಾ ಮೊದಲ ಬಹುಮಾನಗಳಿಸಿದರು. ಸುಷ್ಮಾ 2ನೇ ಬಹುಮಾನ ಗಳಿಸಿದರು.

ಎರಡು ದಿನಗಳ ಹಲಸಿನ ಹಬ್ಬ ಜನರನ್ನು‌ ಆಕರ್ಷಿಸಲು ಯಶಸ್ವಿಯಾಯಿತು. ಹತ್ತು ಸಾವಿರಕ್ಕೂ ಹೆಚ್ಚಿನ ಜನರು ಮೇಳಕ್ಕೆ ಭೇಟಿ ನೀಡಿದರು. ಕೆಂಪಲಸು ತಳಿಗಳಾದ ಸಿದ್ದು ಮತ್ತು ಶಂಕರ ತಳಿಗಳ 2000 ಗಿಡಗಳು ಮಾರಾಟವಾದವು. ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ಹಲಸು ಬೆಳೆಗಾರರು ತಂದಿದ್ದ ಹಲಸು ಮಾರಾಟವಾಯಿತು. ಕೆಂಪು ಬಣ್ಣದ ಚಂದ್ರ ಹಲಸು ಕೊಳ್ಳಲು ಗ್ರಾಹಕರು ಮುಗಿಬಿದ್ದರು. ಮೇಳ‌ ದಾಖಲೆಯ 40 ಲಕ್ಷದ ವಹಿವಾಟು ನಡೆಯಿತು.