ಕನ್ನಡಪ್ರಭ ವಾರ್ತೆ ಮಂಗಳೂರು
ಪಣಂಬೂರಿನಿಂದ ಮಂಗಳೂರಿಗೆ ಆಗಮಿಸುವ ಭಾಗದಲ್ಲಿ ಕೂಳೂರು ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಆ.19ರಿಂದ ಜಿಲ್ಲಾಧಿಕಾರಿಗಳು ವಾಹನ ಸಂಚಾರ ನಿಷೇಧಿಸಿದ್ದರು. ಮಂಗಳೂರಿನಿಂದ ನಿರ್ಗಮಿಸುವ ಇನ್ನೊಂದು ಸೇತುವೆಯಲ್ಲಿ ಒಂದು ಭಾಗದಲ್ಲಿ ಮಾತ್ರ ಘನ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಇದು ಸೋಮವಾರದಿಂದಲೇ ಜಾರಿಗೆ ಬಂದಿದ್ದು, ಸಂಜೆ ವೇಳೆಗೆ ಮಾತ್ರ ವಾಹನ ದಟ್ಟಣೆ ಉಂಟಾಗುತ್ತಿತ್ತು.
ಸೇತುವೆಗೆ ಡಾಂಬರೀಕರಣ: ವಾಹನ ಸಂಚಾರ ನಿಷೇಧಕ್ಕೆ ಒಳಗಾದ ಕೂಳೂರು ಸೇತುವೆಗೆ ಬುಧವಾರ ಡಾಂಬರೀಕರಣ ಆರಂಭಿಸಲಾಗಿದೆ. ಇದೇ ವೇಳೆ ಇನ್ನೊಂದು ಸೇತುವೆಯಲ್ಲಿ ವಾಹನಗಳ ಆಗಮನ ಮತ್ತು ನಿರ್ಗಮನ ಒಂದು ಭಾಗದಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ ಬುಧವಾರ ಅಪರಾಹ್ನ ಟ್ಯಾಂಕರ್, ಟ್ರಕ್‌ಗಳು ಸಂಚರಿಸಿದ ಕಾರಣ ಟ್ರಾಫಿಕ್ ಜಾಮ್ ಉಂಟಾಯಿತು.ಕೂಳೂರು ಜಂಕ್ಷನ್‌ನಲ್ಲಿ ಕೇವಲ ಮೂರು ಮಂದಿ ಸಂಚಾರಿ ಪೊಲೀಸರು ಇದ್ದ ಕಾರಣ ಟ್ರಾಫಿಕ್ ನಿಯಂತ್ರಣಕ್ಕೆ ಹೆಣಗಾಡಬೇಕಾಯಿತು.
ಕೂಳೂರು ಮೇಲ್ಸೇತುವೆ ಪೂರ್ತಿ ಕುಂಟಿಕಾನ ವರೆಗೆ ಬ್ಲಾಕ್ ಆಗಿದ್ದು, ವಾಹನಗಳ ಮಾರುದ್ಧದ ಸಾಲು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಂಗಳೂರಿನ ಸಂಚಾರಿ ಸಮಸ್ಯೆಗೆ ನೆಟ್ಟಿಗರು ಹಿಡಿ ಶಾಪ ಹಾಕುತ್ತಿದ್ದುದು ಕಂಡುಬಂತು. ನಗರ ಪೊಲೀಸ್ ಕಮಿಷನರ್, ಟ್ರಾಫಿಕ್ ಎಸಿಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ಸಂಚಾರ ಸಮಸ್ಯೆ ಸರಿಪಡಿಸುವಂತೆ ಬಿಡುವಿಲ್ಲದ ಸಂದೇಶ, ಕರೆಗಳು ಬಂದಿವೆ. ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸಪಟ್ಟಿದ್ದು, ರಾತ್ರಿ ವೇಳೆಗೆ ಟ್ರಾಫಿಕ್ ದಟ್ಟಣೆ ನಿಧಾನವಾಗಿ ಇಳಿಯತೊಡಗಿತ್ತು. ಈಗಾಗಲೇ ದುಸ್ಥಿತಿಯ ಹೆದ್ದಾರಿ ಸರಿಪಡಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಕಚ್ಚಾ ವಸ್ತುಗಳು ತಡವಾಗಿ ಲಭ್ಯವಾಗಿದ್ದು, ರಾತ್ರಿ ವರೆಗೆ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಪೊಲೀಸರಿಗೆ ಮಾಹಿತಿ ನೀಡಿದರೂ ಅವರ ಅಸಹಕಾರದಿಂದ ಟ್ರಾಫಿಕ್ ಜಾಮ್ ತಲೆದೋರಿದೆ.
-ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದ.ಕ.