ಹಳಿಯಾಳ ಪುರಸಭೆ ನಾಮನಿರ್ದೇಶಿತ ಸದಸ್ಯತ್ವಕ್ಕೆ ಫೈಪೋಟಿ

KannadaprabhaNewsNetwork | Published : Feb 2, 2024 1:04 AM

ಸಾರಾಂಶ

ಪುರಸಭೆ ನಾಮನಿರ್ದೇಶಿತ ಸದಸ್ಯತ್ವ ಸ್ಥಾನ ಪಡೆಯಲು ಹಳಿಯಾಳ ಕಾಂಗ್ರೆಸ್ ವಲಯದಲ್ಲಿ ಪೈಪೋಟಿ ಆರಂಭಗೊಂಡಿದ್ದು, ಮತ್ತೊಮ್ಮೆ ಸದಸ್ಯತ್ವ ಹುದ್ದೆ ಗಿಟ್ಟಿಸಲು ಹಳೆಯ ಮುಖಗಳು ಕಸರತ್ತು ಆರಂಭಿಸಿದ್ದಾರೆ.

ಓರ್ವೆಲ್ಲ್ ಫರ್ನಾಂಡೀಸ್

ಹಳಿಯಾಳ:

ಪುರಸಭೆ ನಾಮನಿರ್ದೇಶಿತ ಸದಸ್ಯತ್ವ ಸ್ಥಾನ ಪಡೆಯಲು ಹಳಿಯಾಳ ಕಾಂಗ್ರೆಸ್ ವಲಯದಲ್ಲಿ ಪೈಪೋಟಿ ಆರಂಭಗೊಂಡಿದ್ದು, ಮತ್ತೊಮ್ಮೆ ಸದಸ್ಯತ್ವ ಹುದ್ದೆ ಗಿಟ್ಟಿಸಲು ಹಳೆಯ ಮುಖಗಳು ಕಸರತ್ತು ಆರಂಭಿಸಿದ್ದಾರೆ.ಹಳಿಯಾಳ ಪುರಸಭೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದು, ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇರುವುದರಿಂದ ಇನ್ನೂ 5 ನಾಮ ನಿರ್ದೇಶಿತ ಸದಸ್ಯರು ಕಾಂಗ್ರೆಸ್ಸಿನಿಂದಲೇ ನೇಮಕವಾಗಲಿದ್ದಾರೆ. ಹೀಗಾಗಿ ಸ್ಥಳೀಯ ಕಾಂಗ್ರೆಸ್ ಪಾಳೆಯದಲ್ಲಿ ಈ ನಾಮ ನಾಮನಿರ್ದೇಶಿತ ಸದಸ್ಯತ್ವ ಗಿಟ್ಟಿಸಲು ಜಿದ್ದಾಜಿದ್ದಿ ಆರಂಭಗೊಂಡಿದೆ.ಯಾಕೇ ಪೈಪೋಟಿ:ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಶಾಸಕ ಆರ್.ವಿ. ದೇಶಪಾಂಡೆ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲಿದ್ದಾರೆ. ಈಗಾಗಲೇ ನಿರಂತರ ಕುಡಿಯುವ ನೀರಿನ ಯೋಜನೆಗಾಗಿ ₹ 65 ಕೋಟಿ ಅನುದಾನವನ್ನು ಶಾಸಕರು ಮಂಜೂರು ಮಾಡಿ ತಂದಿದ್ದು, ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಅದಲ್ಲದೇ ಆಶ್ರಯ ಯೋಜನೆಗಾಗಿ 6 ಎಕರೆ ಜಮೀನನ್ನು ಶಾಸಕರು ಮಂಜೂರು ಮಾಡಿದ್ದು, ಅರ್ಹ ಫಲಾನುಭವಿಗಳಿಗೆ ಸೂರು ನೀಡಬೇಕಾಗಿದೆ. ಮೇಲಾಗಿ ನಾಮ ನಾಮನಿರ್ದೇಶಿತ ಸದಸ್ಯತ್ವ ಅವಧಿ ಮುಗಿಯುವರೆಗೂ ಪುರಸಭೆಯಲ್ಲಿ ಒಂದಿಲ್ಲೊಂದು ಕಾಮಗಾರಿ ಯೋಜನೆಗಳು ಮಂಜೂರು ಆಗುವುದಲ್ಲದೇ ಕೋಟ್ಯಂತರ ರುಪಾಯಿ ಅನುದಾನ ಹರಿದು ಬರುವ ಸಾಧ್ಯತೆಗಳಿರುವುದನ್ನು ಊಹಿಸಿಕೊಂಡೇ ಈಗ ನಾಮ ನಾಮನಿರ್ದೇಶಿತ ಸದಸ್ಯತ್ವ ಸ್ಥಾನ ಪಡೆಯಲು ಫೈಪೋಟಿ ಆರಂಭಗೊಳ್ಳಲು ಮೂಲ ಕಾರಣವೆಂದು ಹೇಳಲಾಗುತ್ತಿದೆ.

ಹಳೆ ಮುಖ-ಹೊಸ ಮುಖ:ಪುರಸಭೆಯಲ್ಲಿ ಈ ಹಿಂದೆ ಅಧ್ಯಕ್ಷ-ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅದೇ ಹಳೆಯ ಮುಖಗಳೇ ಮತ್ತೊಮ್ಮೆ ಪುರಸಭೆಯಲ್ಲಿ ಕಾಲಿಡುವ ಸಲುವಾಗಿ ನಾಮ ನಾಮನಿರ್ದೇಶಿತ ಸದಸ್ಯತ್ವ ಪಡೆಯಲು ಲಾಭಿ, ಓಲೈಕೆ ರಾಜಕಾರಣ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಪಕ್ಷ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ ಯುವ ಮುಖಂಡರು ಹಾಗೂ ಹೊಸ ಮುಖಗಳು ತಮಗೂ ಅವಕಾಶ ನೀಡಬೇಕೆಂದು ಕೈಕಮಾಂಡಿಗೆ ಮನವಿ ಮಾಡಿವೆ. ಹೈಕಮಾಂಡ್‌ ಬಳಿ ಜಾತಕ:ವಿಧಾನಸಭಾ ಚುನಾವಣೆಯಲ್ಲಿ ದೇಶಪಾಂಡೆ ಅವರಿಗೆ ನಿಷ್ಟರಾಗಿ ಯಾರು ಗೆಲುವಿಗೆ ಶ್ರಮಿಸಿದ್ದಾರೆ, ಯಾರು ವಿದ್ರೋಹ ಎಸಗಿದ್ದಾರೆಂಬ ಪ್ರತಿಯೊಂದು ಮಾಹಿತಿಯು ಹೈಕಮಾಂಡ್‌ ಬಳಿಯಿದೆ ಎನ್ನಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಪ್ರಮಾಣ ಕಡಿಮೆಯಾಗಲು ಮೂಲ ಕಾರಣವನ್ನು ಕಲೆ ಹಾಕುತ್ತಿರುವ ಅನುಭವಿ ರಾಜಕಾರಣಿ ದೇಶಪಾಂಡೆ ಕಳಂಕ ರಹಿತ ಹೊಸ ಮುಖಗಳಿಗೆ ಸ್ಥಾನ ನೀಡಬಹುದೆಂದು ನಿರೀಕ್ಷಿಸಲಾಗುತ್ತಿದೆ.

ಪುರಸಭೆ ನಾಮನಿರ್ದೇಶಿತ ಸದಸ್ಯತ್ವ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳನ್ನು ಶಾಸಕ ದೇಶಪಾಂಡೆ ಅವರೇ ಆಯ್ಕೆ ಮಾಡುತ್ತಾರೆ. ಈ ವಾರ ಸಾಹೇಬರು ಹಳಿಯಾಳಕ್ಕೆ ಆಗಮಿಸುತ್ತಿದ್ದು ನಾಮನಿರ್ದೇಶಿತ ಸದಸ್ಯತ್ವ ಸ್ಥಾನದ ವಿಷಯದ ಬಗ್ಗೆ ಅವರೊಂದಿಗೆ ಚರ್ಚಿಸಲಾಗುವುದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಾ ಪಾಟೀಲ ಹೇಳಿದರು.

ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಮಾತು ಪಕ್ಷದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಶಾಸಕರ ಗಮನಕ್ಕೆ ತರುತ್ತೇವೆ ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ ತಿಳಿಸಿದರು.

Share this article