ಶತಮಾನೋತ್ಸವದ ಸಂಭ್ರಮದಲ್ಲಿ ಹಳಿಯಾಳದ ಮೊದಲ ಪ್ರೌಢಶಾಲೆ

KannadaprabhaNewsNetwork |  
Published : Apr 06, 2025, 01:46 AM IST
4ಎಚ್.ಎಲ್.ವೈ-1: ಶತಮಾನೋತ್ಸವದ ಸಂಭ್ರಮಾಚರಣೆಗೆ ಸಜ್ಜಾಗುತ್ತಿರುವ ಹಳಿಯಾಳ ತಾಲೂಕಿನ ಪ್ರಥಮ ಪ್ರೌಢಶಾಲೆ. | Kannada Prabha

ಸಾರಾಂಶ

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಆರಂಭಗೊಂಡ ಮೊದಲ ಕನ್ನಡ ಪ್ರೌಢಶಾಲೆ ಎಂಬ ಖ್ಯಾತಿಯ ಶಿವಾಜಿ ವಿದ್ಯಾಲಯದ್ದು.

ಹಳಿಯಾಳ: ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡು ತಾಲೂಕಿನಲ್ಲಿ ಬ್ರಿಟಿಷರ ದಾಸ್ಯತ್ವದ ವಿರುದ್ಧ ಹೋರಾಟ ಆರಂಭಿಸಲು ಪ್ರೇರೇಪಿಸಿದ ಪಟ್ಟಣದ ಶಿವಾಜಿ ವಿದ್ಯಾಲಯಕ್ಕೆ ಈಗ ಶತಮಾನೋತ್ಸವದ ಸಂಭ್ರಮ.

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಆರಂಭಗೊಂಡ ಮೊದಲ ಕನ್ನಡ ಪ್ರೌಢಶಾಲೆ ಎಂಬ ಖ್ಯಾತಿಯ ಶಿವಾಜಿ ವಿದ್ಯಾಲಯದ್ದು. ಇದು ಆರಂಭಗೊಂಡಿದ್ದು 1921ರಲ್ಲಿ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ ಶತಮಾನೋತ್ಸವ ಸಂಭ್ರಮವು ಏ. 26, 27ರಂದು ನಡೆಯಲಿದೆ. ಸಂಭ್ರಮಾಚರಣೆಗೆ ಸಿದ್ಧತೆಗಳು ಸಮರೋಪಾದಿಯಲ್ಲಿ ಆರಂಭಗೊಂಡಿವೆ.

ಅಂದಿನ ಹೈಟೆಕ್ ಶಾಲೆ:

ಆ ಕಾಲದಲ್ಲಿಯೇ ಜಿಲ್ಲೆಯಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ಪಾಠೋಪಕರಣ ಮತ್ತು ಪೀಠೋಪಕರಣವುಳ್ಳ ಮೊದಲ ಪ್ರೌಢಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಪ್ರೌಢಶಾಲೆಯ ಪ್ರಯೋಗಾಲಯದಲ್ಲಿ ಅಂದಿನ ಕಾಲದ ಹೊಸ ಪರಿಕರಗಳು, ಜೀವವಿಜ್ಞಾನದ ಸಾಮಗ್ರಿಗಳಿದ್ದರೆ, ಇಲ್ಲಿನ ಗ್ರಂಥಾಲಯದಲ್ಲಿ ಹಲವಾರು ಶೈಕ್ಷಣಿಕ ಗ್ರಂಥಗಳು, ಸಾಮಾನ್ಯ ಜ್ಞಾನದ ಪುಸ್ತಕಗಳು, ಶ್ರೇಷ್ಠ ಸಾಧಕರ ಜೀವನ ಚರಿತ್ರೆಗಳನ್ನೊಳಗೊಂಡ ಬಹುದೊಡ್ಡ ಗ್ರಂಥಾಲಯವನ್ನೇ ಶಾಲೆ ಹೊಂದಿತ್ತು. ಪ್ರತಿ ತರಗತಿಗೂ ಟು-ವೇ ಇಂಟರ್‌ಕಾಮ್ ವ್ಯವಸ್ಥೆ ಅಳವಡಿಸಲಾಗಿದ್ದರಿಂದ ಪ್ರಾಚಾರ್ಯರು ತಮ್ಮ ಕಚೇರಿಯಲ್ಲಿಯೇ ಕುಳಿತು ಮಕ್ಕಳಿಗೆ ನಿರ್ದೇಶನಗಳನ್ನು ನೀಡುತ್ತಿದ್ದರು. ಕನ್ನಡ ಮಾಧ್ಯಮದೊಂದಿಗೆ ಮರಾಠಿ ಮಾಧ್ಯಮದ ಎರಡು ವಿಭಾಗಗಳನ್ನು ಈ ಪ್ರೌಢಶಾಲೆಯಲ್ಲಿ ಆರಂಭಿಸಲಾಗಿತ್ತು. ಅಂದಿನ ಸ್ಥಳೀಯ ಪೌರಸಂಸ್ಥೆಯು ಈ ಪ್ರೌಢಶಾಲೆಯ ನಿರ್ವಹಣೆ ಮಾಡುತ್ತಿತ್ತು. ನಂತರದ ವರ್ಷಗಳಲ್ಲಿ ಈ ಪ್ರೌಢಶಾಲೆಯಲ್ಲಿ ಉರ್ದು ವಿಭಾಗವನ್ನು ಸಹ ಆರಂಭಿಸಲಾಯಿತು. ಪ್ರಸ್ತುತ ಈ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮದಲ್ಲಿ ಶಿಕ್ಷಣ ಮುಂದುವರಿದಿದೆ. ಮರಾಠಿ ಭಾಷೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಲಾರಂಭಿಸಿದ್ದರಿಂದ ಮರಾಠಿ ಮಾಧ್ಯಮವನ್ನು ಸ್ಥಗಿತಗೊಳಿಸಲಾಗಿದೆ. ತಾಲೂಕಿನಲ್ಲಿ ಈಗ ಪ್ರತಿ ಹೋಬಳಿ ಮಟ್ಟದಲ್ಲಿ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆಗಳು ಆರಂಭಗೊಂಡಿವೆ. ಈಗಲೂ ಶಿವಾಜಿ ಸರ್ಕಾರಿ ಪ್ರೌಢಶಾಲೆಯು ತಾಲೂಕಿನ ಬಡವರ, ಮಧ್ಯಮ ವರ್ಗದವರ, ಕೃಷಿಕರ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಿದೆ.

ಶಾಲೆಯಲ್ಲಿ 400ರಿಂದ 450 ಮಕ್ಕಳ ದಾಖಲಾತಿ ಇದೆ. ಇಲ್ಲಿ ಕಲಿತವರು ರಾಜ್ಯ ಸೇರಿ ದೇಶ, ವಿದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹಳಿಯಾಳದ ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಮಾಜಿ ಶಾಸಕ ಸುನೀಲ ಹೆಗಡೆ ಇದೇ ಪ್ರೌಢಶಾಲೆಯ ಕಲಿತಿದ್ದಾರೆ.

ಶತಮಾನೋತ್ಸವ ಸಮಿತಿ:

ಸಮಾನ ಮನಸ್ಕ ಹಳೆಯ ವಿದ್ಯಾರ್ಥಿಗಳು ಶಿವಾಜಿ ವಿದ್ಯಾಲಯ ಶತಮಾನೋತ್ಸವ ಸಮಿತಿಯನ್ನು ಸ್ಥಾಪಿಸಿ, ಶತಮಾನೋತ್ಸವದ ಸಂಭ್ರಮಾಚರಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಪ್ರತಿ ಶನಿವಾರ ಸಮಿತಿಯ ಮುಂದಾಳತ್ವದಲ್ಲಿ ಸಭೆ ಸೇರಿ ಚರ್ಚಿಸಲಾಗುತ್ತಿದೆ. ಎರಡು ದಿನ ನಡೆಯುವ ಸಂಭ್ರಮಾಚರಣೆಯಲ್ಲಿ ಗುರುವಂದನೆ, ಶಿಕ್ಷಕ-ವಿದ್ಯಾರ್ಥಿಗಳ ಸಂವಾದ, ಅನುಭವ ಹಂಚಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತಿದ್ದು, ಸರ್ಕಾರದ ಜನಪ್ರತಿನಿಧಿಗಳು, ಸ್ಥಳೀಯ ಶಾಸಕರು, ಸಚಿವರನ್ನು ಆಮಂತ್ರಿಸಿ ಶಾಲಾಭಿವೃದ್ಧಿಯ ಯೋಜನೆಗಳನ್ನು ರೂಪಿಸಲು ಸಿದ್ಧತೆ ನಡೆದಿವೆ. ಹಳೆಯ ವಿದ್ಯಾರ್ಥಿಗಳ ತಂಡವು ಪ್ರತಿನಿತ್ಯ ಪಟ್ಟಣ, ತಾಲೂಕಿನೆಲ್ಲೆಡೆ ಸಂಚರಿಸಿ ಹಳೆಯ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಸಂಭ್ರಮಾಚರಣೆಗೆ ಆಮಂತ್ರಣ ನೀಡುತ್ತಿದ್ದಾರೆ.

ಶಾಲಾ ಶತಮಾನೋತ್ಸವ ಆಚರಿಸುವ ಸುದ್ದಿ ತಿಳಿದು ಬಹಳ ಖುಷಿಯಾಯಿತು. ಈ ಸಂಭ್ರಮಾಚರಣೆಗೆ ಎಲ್ಲ ಹಳೆಯ ವಿದ್ಯಾರ್ಥಿಗಳನ್ನು ಹುಡುಕಿ ಜತೆಗೂಡಿಸುವುದು ಬಹು ಕಷ್ಟದ ಕಾರ್ಯ. ಆದರೆ ಸಮಿತಿಯವರು ಕೈಗೊಂಡಿರುವ ಪ್ರಯತ್ನವು ಶ್ಲಾಘನೀಯ ಎನ್ನುತ್ತಾರೆ ನಿವೃತ್ತ ಶಿಕ್ಷಕ ಗೌರೀಶ ಚಂದಾವರ್ಕರ್‌.

ಶತಮಾನೋತ್ಸವ ಸಂಭ್ರಮಾಚರಣೆಗೆ ಉತ್ತಮ ಸಹಕಾರ ವ್ಯಕ್ತವಾಗುತ್ತಿದೆ. ದೇಶ, ವಿದೇಶದಲ್ಲಿರುವ ಹಳೆಯ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶತಮಾನೋತ್ಸವವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದೇವೆ ಎನ್ನುತ್ತಾರೆ ಶತಮಾನೋತ್ಸವ ಸಮಿತಿ ಹಿರಿಯ ದಿಲೀಪ್ ಪಡ್ನಿಸ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''