ಹಲ್ಕೆ ಮುಪ್ಪಾನೆ ಲಾಂಚ್ ತಾತ್ಕಾಲಿಕ ಸ್ಥಗಿತ

KannadaprabhaNewsNetwork | Published : May 4, 2024 12:38 AM

ಸಾರಾಂಶ

ಹೆಚ್ಚಿದ ತಾಪಮಾನ ಹಾಗೂ ಶರಾವತಿ ಹಿನ್ನೀರಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಹಲ್ಕೆ ಮುಪ್ಪಾನೆ ಲಾಂಚ್‌ಗೆ ತಾತ್ಕಾಲಿಕ ತಡೆ ಬಿದ್ದಿದೆ.

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಬ್ಯಾಕೋಡು ತುಮರಿ ಬಾಗದ ಜನರು ತಾಳಗುಪ್ಪ ತಲುಪಲು ಮತ್ತು ಸಿಗಂಧೂರಿನಿಂದ ಪ್ರವಾಸಿಗರು ಜೋಗವನ್ನು ಅತೀ ಕಡಿಮೆ ದೂರದಲ್ಲಿ ಸಂಪರ್ಕ ಕಲ್ಪಿಸುವ ಹಲ್ಕೆ- ಮುಪ್ಪಾನೆ ಲಾಂಚ್ ಮೇ 5 ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಕಡವು ನಿರೀಕ್ಷಕ ದನೇಂದ್ರ ಕುಮಾರ್ ತಿಳಿಸಿದ್ದಾರೆ.

ಕಳೆದ ವರ್ಷ ಸಾಕಷ್ಟು ಮಳೆಯಾಗದ ಕಾರಣ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಕಡಿಮೆಯಾಗಿದ್ದು ಒಂದು ಕಾರಣವಾದರೆ, ಹೆಚ್ಚಿದ ತಾಪಮಾನಕ್ಕೆ ಹಳ್ಳಕೊಳ್ಳಗಳು ಬತ್ತಿ ಹೋಗಿ ,ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆ ಕಂಡುಬಂದ ಹಿನ್ನೆಲೆಯಲ್ಲಿ ಹಲ್ಕೆ ಮುಪ್ಪಾನೆ ಲಾಂಚ್‌ಗೆ ಆಡಚಣೆ ಉಂಟಾಗಿದೆ. ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಅಧಿಕಾರಿಗಳು ಮೇ 2 ರಂದು ಬೆಳಿಗ್ಗೆ ಸಹ ಲಾಂಚ್ ಸ್ಥಳ ಪರಿಶೀಲನೆ ವೇಳೆ ಮರದ ದಿಮ್ಮಿ ಹಾಗೂ ಮರಳಿನ ದಿಬ್ಬಗಳು ಲಾಂಚ್ ತಳಭಾಗದ ಬಾಟಮ್ ಗೆ ಲಗುಲಿದೆ. ಇದರಿಂದ ಲಾಂಚ್ ತಾಂತ್ರಿಕ ದೋಷಕ್ಕೆ ಒಳಗಾಗುವ ಸಾಧ್ಯತೆಯಿದ್ದು. ಮುಂಜಾಗ್ರತಾ ಕ್ರಮವಾಗಿ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕ ವಾಗಿ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಜಲ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ತರಹದ ಹೊಸನಗರ ತಾಲೂಕಿನ ಹಸಿರುಮಕ್ಕಿ ಲಾಂಚ್ ಸೇವೆ ಸಹ ಸ್ಥಗಿತದ ಮುನ್ಸೂಚನೆ ನೀಡಿದ್ದು, ಮೇ 3ರಿಂದ ಲಾಂಚ್‌ನಲ್ಲಿ ಜನರ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಲಾಂಚ್ ಸ್ಥಗಿತದಿಂದ ತುಮರಿ, ಮಾರಲಗೋಡು, ಬ್ಯಾಕೋಡು ಭಾಗದ ತುರ್ತು ಆರೋಗ್ಯ ಸೇವೆ ಸೇರಿದಂತೆ ಜೋಗ ಕಾರ್ಗಲ್ ತೆರಳಲು ಹಾಗೂ ಸಿಗಂದೂರು ಪ್ರವಾಸಿಗರು ಹೊಳೆಬಾಗಿಲು ಲಾಂಚ್ ನಲ್ಲಿ ಪ್ರತಿನಿತ್ಯ ಜನದಟ್ಟಣೆ ಇರುವ ಕಾರಣ ಬಹುತೇಕರು ಈ ಸುಗಮ ಮಾರ್ಗದ ಮೊರೆ ಹೋಗಿದ್ದರು. ಸದ್ಯ ಇದು ಕೂಡ ಸ್ಥಗಿತಗೊಂಡಿದ್ದು, ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

Share this article