ಬೇಲೂರು: ಹಲ್ಮಿಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಬಕಾರಿ ನಿರೀಕ್ಷಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಮಕ್ಕಳು ಶಾಲೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ಇನ್ನೂ ನಮ್ಮ ಹಲ್ಮಿಡಿ ಗ್ರಾಮದಲ್ಲಿರುವ ಕನ್ನಡದ ಶಿಲಾ ಶಾಸನ ನೋಡಲು ಪ್ರವಾಸಿಗರು ಬಂದರೆ ಅವರ ವಾಹನ ತಡೆದು ಹಣ ವಸೂಲಿ ಮಾಡುವುದಲ್ಲದೆ ಮಹಿಳೆಯರಿಗೆ ಹಿಂಸೆ ನೀಡುವುದರಿಂದ ಹಲ್ಮಿಡಿ ಗ್ರಾಮಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ವಿಚಾರವಾಗಿ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಮತ್ತೆ ಮನವಿ ಸಲ್ಲಿಸಿದ್ದು ಒಂದು ವಾರದೊಳಗೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಜತೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಬೇಲೂರು ಅಬಕಾರಿ ನಿರೀಕ್ಷಕಿ ಅಪೂರ್ವ, ಅಕ್ರಮ ಮದ್ಯ ಮಾರಾಟದ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಶೀಘ್ರದಲ್ಲೇ ಹಲ್ಮಿಡಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದರು.ಹಲ್ಮಿಡಿ ಗ್ರಾಮಸ್ಥರಾದ ಮಹೇಶ್, ಕುಮಾರ್, ಅಕ್ಷಯ್, ಲಕ್ಷಣ್, ಧನಲಕ್ಷ್ಮೀ, ಸುಶೀಲಮ್ಮ, ವೇದಾವತಿ, ದಾನಮ್ಮ, ಜಯಮ್ಮ, ಸುಧಾ ಇತರರು ಇದ್ದರು.